ನ್ಯಾಯ ವ್ಯವಸ್ಥೆಯಲ್ಲಿ ಕರ್ನಾಟಕ ಪೊಲೀಸ್ ಮೊದಲ ಸ್ಥಾನ: ಸಚಿವ ಜಿ. ಪರಮೇಶ್ವರ್
ಬೆಳಗಾವಿ-17: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ದೇಶದ ಕಾನೂನು ಪಾಲನೆ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ನಗರದ ಸಿಟಿ ಲೇನ್ ಪೊಲೀಸ್ ಕ್ವಾಟರ್ಸ್ ಆವರಣದಲ್ಲಿ ಶುಕ್ರವಾರ ಜರುಗಿದ ಬೆಳಗಾವಿ ನಗರ ಪೊಲೀಸ್ ಆಯುಕ್ತಾಲಯ ಮತ್ತು ಬೆಳಗಾವಿ ಜಿಲ್ಲಾ ಪೊಲೀಸ್, ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಪಾಲನೆಗೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಕುಟುಂಬಗಳು ಸುರಕ್ಷಿತ ಮತ್ತು ನೆಮ್ಮದಿಯಿಂದ ಇರಬೇಕು. ಈ ನಿಟ್ಟಿನಲ್ಲಿ ವಸತಿಗೃಹ ನಿರ್ಮಾಣದ ಜತೆಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಪೊಲೀಸ್ ಇಲಾಖೆಯಿಂದ ಬೆಳಗಾವಿ ಭಾಗದಲ್ಲಿ ಐತಿಹಾಸಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. 67. 79 ಕೋಟಿ ವೆಚ್ಚದಲ್ಲಿ ಗೋಕಾಕ್, ಕಿತ್ತೂರು, ಕುಲಗೋಡ, ಸಂಕೇಶ್ವರ, ಚಿಕ್ಕೋಡಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಉದ್ಘಾಟನೆ ಸೇರಿದಂತೆ ಅಡಿಗಲ್ಲು ಹಾಕಲಾಗುತ್ತಿದೆ. ಶಹಾಪುರ ನಲ್ಲಿ 3.92 ವೆಚ್ಚದಲ್ಲಿ ವಸತಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಒಂದು ಮನೆ ನಿರ್ಮಾಣಕ್ಕೆ 38 ಲಕ್ಷ ವೆಚ್ಚವಾಗಲಿದೆ. ಕಳೆದ ವರ್ಷದ ಬಜೆಟ್ ನಲ್ಲಿ 2000 ಕೋಟಿ ಕೊಟ್ಟಿದ್ದು, ಈ ವರ್ಷ ಬಜೆಟ್ ನಲ್ಲಿ 350 ಕೋಟಿ ನೀಡಲಾಗಿದೆ ಎಂದರು.
ಪೊಲೀಸ್ ಇಲಾಖೆಗೆ ಅನೇಕ ಯೋಜನೆ ಮಂಜೂರು:
ಕಾನೂನು ರಕ್ಷಣೆ ಮಾಡುವ ದೃಷ್ಟಿಯಿಂದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಪೊಲೀಸ್ ಇಲಾಖೆಗೆ ಸೌಕರ್ಯ ಒದಗಿಸಲು ಸರ್ಕಾರ ಸ್ಪಂದಿಸಿದೆ. ಪೊಲೀಸ್ ಸಿಬ್ಬಂದಿಗಳಿಗೆ ಸಾಕಷ್ಟು ಯೋಜನೆಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಪೊಲೀಸ್ ಸಿಬ್ಬಂದಿಗಳು ಜನ ಸೇವೆಗೆ ತಕ್ಷಣ ಸ್ಪಂದಿಸಬೇಕು ಎಂದು ಸಚಿವ ಪರಮೇಶ್ವರ್ ಕರೆ ನೀಡಿದರು.
ನಮ್ಮ ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುತ್ತಿರುವುದರಿಂದ ಇತರೆ ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರು ಬರುತ್ತಾರೆ. ಇದರಿಂದ ರಾಜ್ಯಕ್ಕೆ ಆದಾಯ ಮತ್ತು ಉದ್ಯೋಗವಕಾಶಗಳು ದೊರೆಯುತ್ತಿವೆ.
ಕಳೆದ 3 ವರ್ಷದಿಂದ ಸರ್ಕಾರ ಬಂದ ನಂತರ ಕೋಮು ಗಲಭೆಗಳಿಗೆ ಕಡಿವಾಣ ಹಾಕಲಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂದೇಶದಂತೆ ಸಮಾನತೆಯಿಂದ ನೆಮ್ಮದಿದಾಯಕವಾಗಿ ಎಲ್ಲರೂ ಬದುಕಬೇಕು. ಈ ದಿಸೆಯಲ್ಲಿ ಪೊಲೀಸ್ ಇಲಾಖೆ ಸರ್ವರಿಗೂ ಸಮಾನ ನ್ಯಾಯ ಒದಗಿಸುತ್ತಿರುವ ಕೆಲಸ ಮಾಡುತ್ತಿದೆ.
ಮಾದಕ ವಸ್ತುಗಳ ಮಾರಾಟ- ನಿರ್ದಾಕ್ಷಿಣ್ಯ ಕ್ರಮ:
ರಾಜ್ಯದಲ್ಲಿ ಯುವಕರಿಗೆ ಮಾದಕ ವಸ್ತುಗಳ ಹಂಚಿಕೆ ಹಾಗೂ ಮಾದಕವಸ್ತುಗಳ ಸೇವನೆ ಪ್ರಕರಣಗಳು ಕಂಡು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಇಡೀ ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದ್ದು, ಮಾದಕವಸ್ತುಗಳ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವರು ಎಚ್ಚರಿಕೆ ನೀಡಿದರು.
ದುಶ್ಚಟಗಳಿಂದ ಯುವಸಮುದಾಯವನ್ನು ರಕ್ಷಿಸಲು ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಸೇವನೆಗೆ ಕುರಿತು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ತಂತ್ರಜ್ಞಾನ ಬಳಕೆಯಿಂದ ಅಂತಹ ಪ್ರಕರಣಗಳನ್ನು ಪತ್ತೆಮಾಡಿ ವಂಚಕರಿಗೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಮಾತನಾಡಿ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ನಿರಂತರ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಬ್ಬಗಳು ಬಂದರೆ ರಜೆ ಸಿಗುವುದಿಲ್ಲ; ಸಮಾಜದ ರಕ್ಷಣೆಗೆ ಬಿಡುವಿಲ್ಲದೆ ಶಮಿಸುತ್ತಾರೆ ಅವರ ಕುಟುಂಬದವರ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಿ ಕೊಡಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಗರ ಪೊಲೀಸ್ ಆಯುಕ್ತ, ಭೊರಸೆ ಭೂಷಣ್ ಗುಲಾಬರಾವ್ ಮಾತನಾಡಿ, ಪೊಲೀಸ್ ಸಿಬ್ಬಂದಿಗಳ ಅನುಕೂಲಕ್ಕಾಗಿ ಮತ್ತು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬರುವ ಸಾರ್ವಜನಿಕರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಸಿಟಿ ಲೇನ್ ನಲ್ಲಿ ಅಕ್ಕ ಕೆಫೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಶಿಲಾನ್ಯಾಸ ಕಾರ್ಯಕ್ರಮ:
ಕಾರ್ಯಕ್ರಮಕ್ಕೂ ಮುಂಚೆ ಬೆಳಗಾವಿ ನಗರ ಪೊಲೀಸ್ ಬೆಳಗಾವಿ ನಗರ ಸಿಟಿ ಲೇನ್ ನಲ್ಲಿ ನೂತನವಾಗಿ ನಿರ್ಮಿಸಿರುವ 144 ಪೊಲೀಸ್ ವಸತಿಗೃಹ ಕಟ್ಟಡಗಳು ಹಾಗೂ ಶಿವಾಜಿ ನಗರದಲ್ಲಿ ನೂತನವಾಗಿ ಬ್ಯಾರಕ್ ಮತ್ತು ಡೈನಿಂಗ್/ಕಿಚನ್ ಬ್ಲಾಕ್ ಕಟ್ಟಡಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ,
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ. ಕೆ.ಎಂ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆರ್. ಹಿತೇಂದ್ರ, ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಡಾ. ಚೇತನ್ ಸಿಂಗ್ ರಾಠೋರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಕಾಧಿಕಾರಿ ರಾಹುಲ್ ಶಿಂಧೆ, ಡಿಸಿಪಿ ನಾರಾಯಣ ಭರಮನಿ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
