ಫೆ.28 ರಿಂದ ಬೆಳವಡಿ ಮಲ್ಲಮ್ಮ ಉತ್ಸವ
ಬೆಳಗಾವಿ-09: ಪ್ರತಿವರ್ಷದಂತೆ ಫೆ.28 ಹಾಗೂ 29 ರಂದು ವೀರವನಿತೆ ಬೆಳವಡಿ ಮಲ್ಲಮ್ಮ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಬೈಲಹೊಂಗಲ ಶಾಸಕರಾದ ಮಹಾಂತೇಶ್ ಕೌಜಲಗಿ ಹೇಳಿದರು.
ಬೆಳವಡಿ ಗ್ರಾಮದ ಬೆಳವಡಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಶುಕ್ರವಾರ ನಡೆದ ಬೆಳವಡಿ ಮಲ್ಲಮ್ಮ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿ ಸಿಡಿಮದ್ದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ವಸ್ತುಪ್ರದರ್ಶನವನ್ನು ಆಯೋಜಿಸಲಾಗುವುದು.
ಉತ್ಸವದ ಯಶಸ್ವಿಯಾಗಿ ಆಯೋಜಿಸಲು ಗ್ರಾಮದ ಪ್ರತಿಯೊಬ್ಬರು ಭಾಗವಹಿಸಬೇಕು; ಪರಸ್ಪರ ಸಹಕರಿಸುವ ಮೂಲಕ ಮಲ್ಲಮ್ಮಳ ಉತ್ಸವವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಕರೆ ನೀಡಿದರು.
ಪಠ್ಯಪುಸ್ತಕದಲ್ಲಿ ಮಲ್ಲಮ್ಮಳ ಸಾಹಸಗಾಥೆ:
ಪಠ್ಯಪುಸ್ತಕಗಳಲ್ಲಿ ಬೆಳವಡಿ ಮಲ್ಲಮ್ಮನ ಸಾಹಸಗಾಥೆ ಸೇರ್ಪಡೆಗೊಳಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಕೂಡ ಸಲ್ಲಿಸಲಾಗಿದ್ದು, ಪಠ್ಯಪುಸ್ತಕಗಳ ಪರಿಷ್ಕರಣೆ ವೇಳೆ ಮಲ್ಲಮ್ಮಳ ಕುರಿತು ಪಾಠ ಸೇರ್ಪಡೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕ ಮಹಾಂತೇಶ ಕೌಜಲಗಿ ಭರವಸೆ ನೀಡಿದರು.
ಇದಕ್ಕೂ ಮುಂಚೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, “ಬೆಳವಡಿ ಮಲ್ಲಮ್ಮ ಉತ್ಸವವನ್ಙು ಈ ಬಾರಿ ಅತ್ಯಂತ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲಾಗುವುದು. ಶಾಸಕರ ಮುತುವರ್ಜಿಯಿಙದಾಗಿ ಈ ವರ್ಷ ಅತೀ ಹೆಚ್ಚು ಅನುದಾನವನ್ನು ಬಿಡುಗಡೆಯಾಗಿದೆ. ಮುಂಚೆಯಂತೆ ಸಿಡಿಮದ್ದು ಕಾರ್ಯಕ್ರಮ ಆಚರಿಸಲಾಗುವುದು” ಎಂದು ತಿಳಿಸಿದರು.
ಸಾರ್ವಜನಿಕರ ಅಪೇಕ್ಷೆಯಂತೆ ಶಾಶ್ವತ ಜಾಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಇದಲ್ಲದೇ ಬೆಳವಡಿ ಮಲ್ಲಮ್ಮನ ಪುತ್ಥಳಿಗೆ ಮಾಲಾರ್ಪಣೆಗೆ ಅನುಕೂಲವಾಗುವಂತೆ ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗುವುದು.
ರಾಜ್ಯಮಟ್ಟದ ಹಾಗೂ ಸ್ಥಳೀಯವಾಗಿರುವ ಅತ್ಯುತ್ತಮ ಕಲಾತಂಡಗಳನ್ನು ಆಹ್ವಾನಿಸಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಉತ್ಸವವನ್ನು ವಿಜೃಂಭಣೆಯುಂದ ಆಚರಿಸಲು ಅನುಕೂಲವಾಗುವಂತೆ ಸ್ವಾಗತ, ಪ್ರಚಾರ, ವಸತಿ, ಜ್ಯೋತಿ ಉಪ ಸಮಿತಿ, ಊಟೋಪಹಾರ ಉಪ ಸಮಿತಿ, ವೇದಿಕೆ ಇಪ ಸಮಿತಿ, ಮೆರವಣಿಗೆ, ಸಾಂಸ್ಕೃತಿಕ, ಕ್ರೀಡೆ, ವಸ್ತುಪ್ರದರ್ಶನ, ಸಾರಿಗೆ, ವಿಚಾರಸಂಕಿರಣ ಉಪ ಸಮಿತಿಗಳನ್ನು ಕೂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ವೀರಜ್ಯೋತಿ ಯಾತ್ರೆ ಫೆ.26 ರಂದು ಆರಂಭ:
ವೀರವನಿತೆ ಬೆಳವಡಿ ಮಲ್ಲಮ್ಮನ ಹುಟ್ಟೂರಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಸೋಂದೆಯಿಂದ ವೀರಜ್ಯೋತಿಯು ಫೆ.26 ರಂದು ಸಂಚಾರವನ್ನು ಆರಂಭಿಸಲಿದೆ.
ಪ್ರಮುಖ ಪಟ್ಟಣಗಳಲ್ಲಿ ಸಂಚರಿಸಿ ಫೆ.28 ರಂದು ಬೆಳಿಗ್ಗೆ 10 ಗಂಟೆಗೆ ಜ್ಯೋತಿ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಂದ್ರಶೇಖರಯ್ಯ ಕಾರಿಮನಿ ಮಾತನಾಡಿ, ಈ ಬಾರಿ ಉತ್ಸವಕ್ಕೆ ಅತೀ ಹೆಚ್ಚು ಅನುದಾನ ಬಿಡುಗಡೆಯಾಗಿರುವುದು ಸಂತಸಕರ. ಮುಂದಿನ ವರ್ಷದವರೆಗೆ ಉತ್ಸವದ ಆಚರಣೆಗೆ ಶಾಶ್ವತ ಜಾಗೆಯನ್ನು ಹೊಂದಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಗ್ರಾಮದ ಪ್ರತಿಯೊಬ್ಬರು ಉತ್ಸಾಹದಿಂದ ಭಾಹವಹಿಸುವ ಮೂಲಕ ಉತ್ಸವವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಸಾರ್ವಜನಿಕರ ಸಲಹೆಗಳು:
ವರ್ಷಕ್ಕೊಮ್ಮೆ ಉತ್ಸವ ನಡೆಯುದರಿಂದ ಅದ್ದೂರಿ ಮೆರವಣಿಗೆ ನಡೆಸಬೇಕು; ಸಮರ್ಪಕ ಆಸನ ವ್ಯವಸ್ಥೆ ಕಲ್ಪಿಸಬೇಕು; ವಿಜಯದ ಸಂಕೇತವಾಗಿ ಮುಂಚೆಯಂತೆ ಸಿಡಿಮದ್ದು ಕಾರ್ಯಕ್ರಮ ನಡೆಸಬೇಕು; ಮಲ್ಲಮ್ಮನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು; ಉತ್ಸವದ ಅನುದಾನದಲ್ಲಿ ಉಳಿತಾಯ ಮಾಡಿ ಪ್ರತಿವರ್ಷ ಉತ್ಸವ ಆಚರಣೆಗೆ ಎರಡು ಎಕರೆ ಶಾಶ್ವತ ಜಾಗೆಯನ್ನು ಮಂಜೂರು ಮಾಡಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಒತ್ತಾಯಿಸಿದರು.
ಇದಲ್ಲದೇ ಬೆಳವಡಿ ಮಲ್ಲಮ್ಮ ವಸತಿ ಶಾಲೆ ಆರಂಭಿಸಬೇಕು; ಸಂಗೊಳ್ಳಿ ಮಾದರಿಯಲ್ಲಿ ಶಿಲ್ಪವನ ನಿರ್ಮಿಸಬೇಕು ಎಂದು ಸಲಹೆಗಳನ್ನು ನೀಡಿದರು.
ಮಲ್ಲಮ್ಮಳ ಸಮಾಧಿಯು ಹಿನ್ನೀರಿನಲ್ಲಿ ಮುಳುಗಡೆಯಾಗಿದೆ. ಗಂಗಾಂಬಿಕೆ-ನೀಲಾಂಬಿಕೆ ಅವರ ಐಕ್ಯಸ್ಥಳದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉಪಾಧ್ಯಕ್ಷರಾದ ಸಂಗೀತಾ ಕಿಣೇಕರ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಸಭೆಯಲ್ಲಿ ಉಪಸ್ಥಿತಿ ರಿದ್ದರು.