11/02/2026
IMG-20260209-WA0005

ಬೆಳಗಾವಿ-09 : ಪ್ರತಿಷ್ಠಿತ ಬೆಳಗಾವಿ ಜಿಲ್ಲೆಯ ಬಿಡಿಸಿಸಿ ಬ್ಯಾಂಕನಲ್ಲಿ ಠೇವಣಿದಾರರಿಗೆ ಮತ್ತು ಸಾಲಗಾರರು ಸೇರಿದಂತೆ ಎಲ್ಲರ ಹಿತ ರಕ್ಷಣೆಗೆ 3 ತಿಂಗಳಿನಿಂದ ಉತ್ತಮವಾಗಿ ಆಡಳಿತ ನಡೆಸುತ್ತಿದ್ದೇವೆ, ವಿರೋಧಿಗಳು ಬ್ಯಾಂಕ ಹೆಸರು ಕೆಡಿಸಲು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು ಡಾ. ಮಹಾಂತೇಶ ಕಡಾಡಿ ಅವರಿಗೆ ನೋಟೀಸ್ ನೀಡಿದ್ದು,ಮುಂದಿನ ದಿನಗಳಲ್ಲಿ ರಮೇಶ ಕತ್ತಿ ಅವರಿಗೆ ನೋಟೀಸ್ ನೀಡಲಾಗುವದು ಎಂದು ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸೋಮವಾರ ನಗರದಲ್ಲಿ ಸುದ್ಧಿಗೋಷ್ಠಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ 4.75 ಲಕ್ಷ ರೈತರಿಗೆ, ಶೂನ್ಯ ಬಡ್ಡಿ ದರದಲ್ಲಿ 3,700 ಕೋಟಿ ರೂಪಾಯಿಗಳ ಸಾಲ ನೀಡುವ ಮೂಲಕ ರಾಜ್ಯದಲ್ಲಿಯೇ ರೈತರಿಗೆ ಅತಿ ಹೆಚ್ಚು ಸಾಲ ನೀಡಿದ ಹೆಗ್ಗಳಿಕೆ ಬಿಡಿಸಿಸಿ ಬ್ಯಾಂಕ ಮಾಡಿದೆ. ಯಾರು ಏನೇ ಅಪಪ್ರಚಾರ ಮಾಡಿದರೂ, ಬ್ಯಾಂಕ ಠೇವಣಿ ಹೆಚ್ಚಾಗಿದ್ದು, ಮೂರು ತಿಂಗಳಲ್ಲಿ ಠೇವಣಿ 500 ಕೋಟಿ ರೂ.ಹೆಚ್ಚಾಗಿದ್ದು, ಕಳೆದ ವರ್ಷ ನವೆಂಬರ್ನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂಬ ಬಳಿಕ ಒಟ್ಟು ಠೇವಣಿಗಳ ಮೊತ್ತ 5,575 ಕೋಟಿ ರೂಪಾಯಿಗಳು ಹೆಚ್ಚಾಗಿದೆ ಎಂದರು.
ಋತುವಿನಲ್ಲಿ ಠೇವಣಿದಾರರು ಮತ್ತು ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾದ ಅಗತ್ಯ ಪೂರೈಸಿಕೊಳ್ಳಲು ಪ್ರತಿ ವರ್ಷವೂ ಠೇವಣಿ ಹಿಂಪಡೆಯುವುದು ಹಾಗೂ ಕೃಷಿ ಉತ್ಪನ್ನ ಮಾರಾಟವಾದ ನಂತರ ಮತ್ತೆ ಠೇವಣಿ ಇರಿಸುವುದು ಸಾಮಾನ್ಯವಾಗಿದೆ. ಇದನ್ನೇ ಆಧರಿಸಿ ವಿರೋಧಿಗಳು ಮಾಡುತ್ತಿರುವ ಅಪ್ರಪ್ರಚಾರಕ್ಕೆ ಯಾರೂ ಕಿವಿಗೊಡಬಾರದು. ವಾಣಿಜ್ಯ ಸಾಲಗಳನ್ನು ನೀಡದೆ ಬ್ಯಾಂಕ್ ನಡೆಸಲು ಆಗದು, ಮಾರ್ಚ್ 31ಕ್ಕೆ ಪ್ರಸಕ್ತ ಆರ್ಥಿಕ ವರ್ಷ ಮುಗಿಯುತ್ತದೆ. ಆಗ ಬ್ಯಾಂಕಿನ ಸಮಗ್ರ ಚಿತ್ರಣವನ್ನು ಸಾರ್ವಜನಿಕವಾಗಿ ಮಂಡಿಸುತ್ತೇವೆ ಎಂದು ಹೇಳಿದರು.
ಭದ್ರತೆ ಆಧರಿಸಿಯೇ ನಾವು ವಾಣಿಜ್ಯ ಸಾಲ ಕೊಡುತ್ತಿದ್ದೇವೆ. ಗುತ್ತಿಗೆದಾರ ಜಯಶೀಲ ಶೆಟ್ಟಿ ಅವರಿಗೂ ಭದ್ರತೆ ಆಧರಿಸಿ 120 ಕೋಟಿ ಸಾಲ ವಿತರಿಸಿದ್ದೇವೆ. ಇದಕ್ಕಾಗಿ ಬೆಳಗಾವಿ ನಗರದಲ್ಲಿನ ನಾಲ್ಕು ಎಕರೆ ಜಾಗದ ಪತ್ರ ಹಾಗೂ ವಿವಿಧ ಇಲಾಖೆಗಳಲ್ಲಿ ಅವರು ಕೈಗೊಂಡ ಸರಕಾರದ ಕಾಮಗಾರಿಗಳ 700 ಕೋಟಿ ರೂಪಾಯಿಗಳು ಅವರಿಗೆ ಬರಬೇಕಿರುವ ಬಗ್ಗೆ ಪತ್ರವನ್ನು ಅವರು ಭದ್ರತೆ ರೂಪದಲ್ಲಿ ಕೊಟ್ಟಿದ್ದಾರೆ.ತೆಗೆದುಕೊಂಡ ಸಾಲಕ್ಕೆ ಈವರೆಗೆ ಬಡ್ಡಿ ರೂಪದಲ್ಲಿ 8 ಕೋಟಿ ರೂ. ಪಾವತಿಸಿದ್ದಾರೆ. ಮಾರ್ಚ್ನಲ್ಲಿ ಸಾಲದ ಪೂರ್ಣ ಮೊತ್ತ ಮರುಪಾವತಿಸುವುದಾಗಿ ತಿಳಿಸಿದ್ದಾರೆ.
ಬಿಡಿಸಿಸಿ ಬ್ಯಾಂಕ ಅಧಿಕಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬ್ಯಾಂಕಿಗೆ ಬಡ್ಡಿರೂಪದಲ್ಲಿ ಹಣ ಬರಬಾರದು ಎಂಬ ದುರುದ್ದೇಶದಿಂದ ಕೆಲವರು ಅಪ್ರಚಾರ ಮಾಡುತ್ತಿದ್ದಾರೆ. ಇನ್ನೂ ರೈತರಿಗೆ ಜಮೀನಿನ ಆಧರಿಸಿ ವಿತರಿಸುವ ಸಾಲದ ಮೊತ್ತ ಹೆಚ್ಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಮತ್ತು ರೈತರ ಜಮೀನಿನಮೇಲೆ 3% ಬಡ್ಡಿ ದರದಲ್ಲಿ ಟ್ರಾಕ್ಟರ್ ಸಾಲ ನೀಡುತ್ತಿದ್ದು ಹಾಗೆಯೇ ಜಮೀನಿನ ಆದರದ ಮೇಲೆ ವಾಣಿಜ್ಯ, ಗೃಹ, ಉದ್ಯೋಗ, ಸಾಲ ನೀಡಲು ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇದೇ ವೇಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಬಿಡಿಸಿಸಿ ಬ್ಯಾಂಕಿನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಗೋಕಾಕದ ಡಾ.ಮಹಾಂತೇಶ ಕಡಾಡಿ ಅವರಿಗೆ ಕಾನೂನು ಪ್ರಕಾರ ನೋಟಿಸ್ ನೀಡಿದ್ದೇವೆ. ಅವರು ತಮ್ಮ ಆರೋಪ ಹಿಂದಕ್ಕೆ ತೆಗೆದುಕೊಂಡು, ಕ್ಷಮೆ ಕೇಳದಿದ್ದರೆ, ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು. ಇನ್ನು ಬ್ಯಾಂಕ ಶತಮಾನೋತ್ಸವ ಆಚರಣೆ, ಕಾರ್ಯಕ್ರಮದ ರೂಪರೇಷಗಳ ಹೊಸದಾಗಿ ನೌಕರರ ನೇಮಕಾತಿ ಬಗ್ಗೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಸರಕಾರದ ಒಪ್ಪಿಗೆ ಲಭಿಸಿದ ತಕ್ಷಣವೇ ಅವಶ್ಯಕತೆ ಇರುವಷ್ಟು ನೌಕರರನ್ನು ನೇಮಕಾತಿ ಮಾಡಲಾಗುವದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಈ ವೇಳೆ ಬಿಡಿಸಿಸಿ ಬ್ಯಾಂಕ ಉಪಾಧ್ಯಕ್ಷರಾದ ರಾಜು ಕಾಗೆ, ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ನಾನಾಸಾಹೇಬ ಪಾಟೀಲ, ರಾಹುಲ್ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ, ಅಪ್ಪಾಸಾಹೇಬ ಕುಲಗುಡೆ, ನೀಲಕಂಠ ಕಪ್ಪಲಗುದ್ದಿ, ಸೇರಿದಂತೆ ಬ್ಯಾಂಕಿನ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!