28/02/2026
IMG-20260227-WA0084

ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಉದ್ಘಾಟನೆ

ಸಾವಿರಾರು ವಿದ್ಯಾರ್ಥಿಗಳು ಭಾಗಿ

ಬೆಳಗಾವಿ-27: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ತನ್ನ ಮೂರನೇ ವರ್ಷದ “ಯುಕ್ತಿ ೨೦೨೬” ಸಾಂಸ್ಕೃತಿಕ ಮತ್ತು ತಾಂತ್ರಿಕ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಎರಡು ದಿನಗಳ ಈ ಮೇಳಕ್ಕೆ ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಾಲನೆ ನೀಡಿದರು.

ಇದೇ ವೇಳೆ ಕನ್ನಡ ಚಲನಚಿತ್ರ ನಟ-ನಟಿಯರಾದ ಸೋನಾಲ್‌ ಮೊಂಥೆರೊ, ಸಪ್ತಮಿ ಗೌಡ, ಪ್ರಮೋದ್‌ ಶೆಟ್ಟಿ, ತರುಣ್‌ ಸುಧೀರ್‌ ಭಾಗವಹಿಸಲಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟಿಯು ಕುಲಪತಿಯಾದ ಪ್ರೊ.ಎಸ್‌.ವಿದ್ಯಾಶಂಕರ್‌ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, “ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕವಾಗಿಯೂ ಮುಂದೆ ಇರಬೇಕು. ಎಂಜಿನಿಯರಿಂಗ್‌ ಎಂದ ಮಾತ್ರಕ್ಕೆ ಇದೊಂದು ತಾಂತ್ರಿಕ ಕ್ಷೇತ್ರ ಸಾಂಸ್ಕೃತಿಕವಲ್ಲ ಎಂಬ ಮನೋಭಾವನೆಯನ್ನು ತೊಡೆದು ಹಾಕಬೇಕು. “ಯುಕ್ತಿ” ಹೆಸರು ಬಹಳ ಅದ್ಭುತವಾಗಿದೆ. ದೂರದ ಊರುಗಳಿಂದ ಈ ವಿಶ್ವವಿದ್ಯಾಲಯಕ್ಕೆ ಕಲಿಯಲು ಬಂದಿದ್ದೀರಿ. ವಿಶ್ವವಿದ್ಯಾಲಯವು ನಿಮಗೆ ಕಲಿಕೆಯ ಪೂರಕ ವಾತಾವರಣವನ್ನು ಸೃಷ್ಟಿಸಿಕೊಟ್ಟಿದೆ. ಇದನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ನಟ ಪ್ರಮೋದ್‌ ಶೆಟ್ಟಿ ಮಾತನಾಡಿ, “ ನನ್ನ ಕಾಲೇಜು ದಿನಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ತಪ್ಪದೇ ಭಾಗವಹಿಸುತ್ತಿದ್ದೆ. ಈ ವೇಳೆ ನಾನು ತನ್ನ ಪತ್ರಿಭೆಯನ್ನು ಪ್ರತಿಭೆಯನ್ನು ಪ್ರದರ್ಶಿಸಿದ ಪರಿಣಾಮ ಒಳ್ಳೆಯ ಅವಕಾಶಗಳು ನನ್ನನ್ನು ನಿಮ್ಮ ಎದುರಿಗೆ ನಿಲ್ಲಿಸಿದೆ. ನಿಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇದೇ ಉತ್ತಮವಾದ ಅವಕಾಶವಾಗಿದೆ. ನೀವು ಯಾವುದೇ ಕಾರಣಕ್ಕೂ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.”

“ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿರುವ ಬಹುತೇಕ ನಿರ್ದೇಶಕರು ಎಂಜಿನಿಯರ್‌ ಪದವೀಧರರಾಗಿದ್ದಾರೆ. ಕೆಲವು ವಿದ್ಯಾರ್ಥಿಗಳು ಮನೆಯವರ ಒತ್ತಡಣಕ್ಕೆ ಮಣಿದು ಎಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿರುತ್ತಾರೆ. ಮುಂದೆ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಸಾಧನೆಯನ್ನು ಮಾಡುತ್ತಾರೆ. ಕ್ಷೇತ್ರ ಯಾವುದೇ ಇರಲಿ, ನಿಮ್ಮ ಸಾಧನೆ ಬಹಳ ಮುಖ್ಯ” ಎಂದರು.

ಈ ಕಾರ್ಯಕ್ರಮದಲ್ಲಿ ವಿಟಿಯು ಕುಲಸಚಿವರಾದ (ಆಡಳಿತ) ಪ್ರೊ.ಪ್ರಸಾದ ಬಿ.ರಾಂಪೂರೆ, ಕುಲಸಚಿವ(ಮೌಲ್ಯಮಾಪನ) ಪ್ರೊ.ಉಜ್ವಲ್‌.ಯು.ಜೆ., ವಿತ್ತಾಧಿಕಾರಿಯಾದ ಡಾ.ಪ್ರಶಾಂತ್‌ನಾಯಕ ಜಿ., ವಿಟಿಯು ಕಾರ್ಯನಿರ್ವಾಹಕ ಸಮಿತಿಯ ಸದಸ್ಯ ಡಾ.ಎಸ್‌.ಬಿ.ಸಂಗಪ್ಪ, ವಿಶೇಷಾಧಿಕಾರಿಗಳಾದ ಕೆ.ಎಂ ಕುಮಾರಿ.ಚೈತ್ರಾ ಮತ್ತು ಡಾ.ರೋಹನ್‌ಗೌರವ್‌ ಇತರರು ಇದ್ದರು.

 

 

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಪರಿಚಯ ಕೂಡ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ಯುಕ್ತಿ ಆರಂಭಿಸಿದೆ. ಕಳೆದ ಮೂರು ವರ್ಷದಿಂದ ಬಹಳ ಉತ್ತಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಪಣ ತೊಡಬೇಕು. ಜೀವನದಲ್ಲಿ ಶಿಸ್ತು ಮತ್ತು ಶ್ರಮದಿಂದ ಕ್ಲಿಷ್ಟವಾದ ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು ಎಂಬುದನ್ನು ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.

– ಪ್ರೊ.ಎಸ್‌.ವಿದ್ಯಾಶಂಕರ್‌, ಕುಲಪತಿ, ವಿಟಿಯು

 

ಮನಸೂರೆಗೊಳಿಸಿದ ಸಾಂಸ್ಕೃತಿಕ ಕಲಾ ಸಂಗಮ

 

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪತ್ರಿಭೆಗಳ ಅನಾವರಣಗೊಳಿಸುವುದಕ್ಕಾಗಿಯೇ ಆಯೋಜಿಸಿದ್ದ “ಯುಕ್ತಿ” ಹಲವು ಕಲೆಗಳ ಸಂಗಮವಾಗಿ ಮಾರ್ಪಟಿತ್ತು. ಮೊದಲ ದಿನವಾದ ಶುಕ್ರವಾರ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಏಕ ವ್ಯಕ್ತಿ ನೃತ್ಯ, ಸಮೂಹ ನೃತ್ಯದಲ್ಲಿ ಭಾಗವಹಿಸಿದ್ದರು. ಒಂದು ಕಡೆ ನೃತ್ಯ ಪ್ರೇಕ್ಷರನ್ನು ಬೆರಗುಗೊಳಿಸಿದರೆ, ಮತ್ತೊಂದೆಡೆ ನಡೆದ ಫ್ಯಾಷನ್‌ ಶೋ ಪಾಶ್ಚಿಮಾತ್ಯ ಮತ್ತು ಭಾರತೀಯ ಸಾಂಪ್ರದಾಯಿಕ, ಆಧುನಿಕ ಉಡುಗೆ ತೊಡುಗೆಗಳ ಪ್ರದರ್ಶನ ನೋಡುಗರನ್ನು ಮನಸೂರೆಗೊಳಿಸಿತು. ಕೆಲವು ವಿದ್ಯಾರ್ಥಿಗಳ ತಂಡ ಪಾಶ್ಚಿಮಾತ್ಯ ಉಡುಗೆಗಳನ್ನು ತೊಟ್ಟು ಪ್ರದರ್ಶನ ನೀಡಿದರೆ, ಮತ್ತೊಂದು ವಿದ್ಯಾರ್ಥಿಗಳ ತಂಡ “ಕುರುಕ್ಷೇತ್ರ”ದಲ್ಲಿ ಬರುವ ಪಾತ್ರಗಳ ನಿರೂಪಿಸುವ ಮೂಲಕ ಪ್ರೇಕ್ಷರಿಗೆ ಗತ ವೈಭವ ಕಾಲವನ್ನು ಪರಿಚಯಿಸಿದರು.

ಇದು ಮಾತ್ರವಲ್ಲದೆ, ವಾಣಿಜ್ಯ ವಿಭಾಗದಲ್ಲಿ ಎಚ್‌.ಆರ್‌, ಮಾರ್ಕೆಟಿಂಗ್‌ ಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಿತು. ಎಂಜಿನಿಯರಿಂಗ್‌ ವಿಭಾಗಳು ಹಲವು ಸ್ಪರ್ಧೆಗಳನ್ನು ಆಯೋಜಿಸಿತ್ತು. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕ್ಷೇತ್ರದ ಅನುಗುಣವಾಗಿ ಸ್ಪರ್ಧೆಯಲ್ಲಿ ನಿರತವಾಗಿದ್ದರು.

 

 

 

 

Leave a Reply

Your email address will not be published. Required fields are marked *

error: Content is protected !!