ಬೆಳಗಾವಿ-07: ಉತ್ತರ ಕರ್ನಾಟಕದ ಅಭಿವೃದ್ಧಿ ಹರಿಕಾರ, ಪ್ರಭಾವಿ ನಾಯಕ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯದಲ್ಲಿ ಇರಬೇಕು. ಹೈಕಮಾಂಡ್ ಅವರನ್ನು ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ನೀಡಬಾರದು ಎಂದು ಕೆಪಿಸಿಸಿ ಸದಸ್ಯೆ ಆಯಿಶಾ ಸನದಿ ಮನವಿ ಮಾಡಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರವೂ ದೊಡ್ಡದಿದೆ. ಅವರ ದೂರದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಸಾಗುತ್ತಿವೆ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ಮನವಿ ಮಾಡುತ್ತೇನೆಂದು ತಿಳಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇರುವ ಅನೇಕ ಅಭ್ಯರ್ಥಿಗಳು ಇದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಪ್ರಿಯಂಕಾ ಜಾರಕಿಹೊಳಿ ಸೇರಿದಂತೆ ನನಗಾದರೂ ಸ್ಪರ್ಧಿಸಲು ಅವಕಾಶ ನೀಡಬೇಕು. ಕಾರಣ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಟ್ಟು ಮಹಿಳೆಯರಿಗಾದರೂ ಟಿಕೆಟ್ ನೀಡಬೇಕು. ಇಲ್ಲವಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಥವಾ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಿ. ಅವರಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಲು ಹಗಲು ರಾತ್ರಿ ದುಡಿಯುತ್ತೇವೆ ಎಂದು ತಿಳಿಸಿದರು.
ನಮ್ಮ ನಾಯಕ ರಾಜ್ಯ ರಾಜಕೀಯದಲ್ಲೇ ಇರಲಿ ಎಂಬುವುದು ನಮ್ಮ ಆಶಯ. ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸಿ ಅವರನ್ನು ರಾಜ್ಯ ರಾಜ್ಯಕೀಯದಲ್ಲಿ ಉಳಿಯಲು ಅವಕಾಶ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಅವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು.
ಸುದ್ದಿಗೊಷ್ಠಿಯಲ್ಲಿ ಪುರಸಭೆ ಸದಸ್ಯ ಖುರ್ಸಿದ್ದ ಮುಲ್ಲಾ, ಲತಾ ಮಾನೆ, ರೋಹಿಣಿ ಬಾಬಶೆಟ್ಟಿ, ಸಾರಂಬಿ ಜತ್ತಿ, ಹಸೀನಾ ಪಿರ್ಜಾದೆ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತೆಯರು ಉಪಸ್ಥಿತಿರಿದ್ದರು.