*ಏಳಲಾರದೋನಿಗೆ ಏಳು ಜನ ಹೆಂಡ್ರು,ಮ್ಯಾಲೊಬ್ಬಳು ಸೂಳೆ*
*******000*******
ನಗು ಬರುವಂತಿದೆ ಮಾತು.ನಗುವದಾದರೆ ನಕ್ಕು ಹಗುರವಾಗಿಬಿಡಿರಿ.ಓದುಗರಾದ ತಾವು ಇದೆಂತಾ ಕೆಟ್ಟ ಶಬ್ದವೆನ್ನಬೇಡಿರಿ.ಹೌದು.,ಇಂಥಹ ನುಡಿಗಳಲ್ಲೆ ಬದುಕಿನ ಮಗ್ಗುಲುಗಳಿವೆ.ಗಾದೆಯೂ ವೇದವೆ.ಕಿಡಿಯಂತ ಜಾಣ್ನುಡಿಯಿದು.ನಮ್ಮ ನಾಡಿಯ ಮೇಲೆ ಸಣ್ಣದೊಂದು ಕಿಡಿ ಬಿದ್ದರೆ,ನಾವೆಲ್ಲ ಎಷ್ಟು ಜಾಗೃತರಾಗಿ, ತೇಜವಾಗಿಬಿಡುತ್ತೇವೆ. ಬೆಂಕಿಯಾಗಿ ಉರಿಯಲು ಕಿಡಿಯೆ ಆಗಬೇಕು ಅಂತಲ್ಲ.,ಮಡಿ ಮೈಲಿಗೆ ಎನ್ನುವ ಮೃಗಿಯ ಭಾವನೆಗಳ ಮಾತುಗಳೂ ಕಿಡಿಯಾಗಿ ಸುಡಬಹುದು.ಸಮಯ ಸಂದರ್ಭ ಗಣನೆಗೆ ಬಾರದು.ಮಾತಿನ ಕಿಡಿ ಸಿಡಿದು ನಮಗೆ ಸುಡಬೇಕು.ಸುಡುವುದೆಂದರೆ,ಬೆಂಕಿಯಿಂದಲೇ ಸುಡಬೇಕೆಂದಲ್ಲ.,ನಮ್ಮ ತಪ್ಪು ಒಪ್ಪುಗಳ ಕನ್ನಡಿ ತೋರಿಸಿ,ಟೀಕಿಸಿ ಸರಿಪಡಿಸುವ ಹಿತೈಷಿಗಳ ಅಥವಾ ವೈರಿಗಳ ನೇರ ಮಾತುಗಳು ನಮಗೆ ಕಿಡಿಯಾಗಿ ಸುಟ್ಟು ಬಾದಿಸಿದಾಗ ಮನಸ್ಸು ತಕ್ಷಣವೆ ವಿಕಾಸದತ್ತ ತೆರೆದುಕೊಳ್ಳುತ್ತದೆ.
ಸಲಹೆಗಳನ್ನು ಎಲ್ಲರೂ ಕೊಡುತ್ತಾರೆ.ಅದರ ಮೌಲ್ಯದ ಪರಧಿಯನ್ನು ನಿರ್ಧರಿಸುವ ಸ್ವ ಜಾಣ್ಮೆ ನಮಗೆ ಅರಿವಾಗಬೇಕು.ನಮ್ಮ ದಿನ ನಿತ್ಯದ ಬದುಕ ಹಾದಿಯಲ್ಲಿ,ಸಹ ಪಯಣಿಗರು ಸಾಥಿಯಾಗುತ್ತಾರೆ.ಕೆಲವರು ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವವರಿದ್ದಾರೆ.ತುಸುವೆ ಅವಕಾಶ ಸಿಕ್ಕರೆ ಸಾಕು.,ಹೆಗಲ ಮೇಲೆ ಕುಳಿತು ಸ್ವಾರ್ಥ ಸಾಧಿಕೊಳ್ಳುವವರಿದ್ದಾರೆ. “ವೇದ ಸುಳ್ಳಾದರೂ ಗಾದೆ ಸುಳ್ಳಾಗದು” ಎನ್ನುವ ಮಾತು ಇಂತವರಿಗಾಗಿಯೇ ಹುಟ್ಟಿಕೊಂಡಿವೆ ಎನ್ನಬಹುದು.
ಸರ್ವರ ಬಾಳ ಬಟ್ಟೆಯಲ್ಲಿ ಹತ್ತಾರು ಸಮಸ್ಯೆಗಳು.,ತಾಪತ್ರಯಗಳು.,ಪರಿಹರಿಸಲಾಗದಂತಹ ನೋವುಗಳು,ಸಮಾಜದಲ್ಲಿ ಕಂಡುಂಡ ನೂರಾರು ವರ್ತನೆಗಳು., ದಿನಾಲೂ ಎದುರಾಗುತ್ತವೆ.ಇಂತಹ
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಬುದ್ಧಿವಂತರ ಲಕ್ಷಣವಾಗಿದೆ.ಆದರೆ…..ಪ್ರಬಲ ಶಕ್ತಿಗೆ ಅಡ್ಡವಾಗಿ ನಿಲ್ಲುವ ಪ್ರಯತ್ನ ಮಾಡಬಾರದು.ಆನೆಗೆ ದಾರಿ ಬಿಡುವುದು ಅವಮಾನವಲ್ಲ., ಸರಿದು ದಾರಿ ನೀಡುವುದು ಜಾಣರ ಬುದ್ಧಿವಂತಿಕೆಯಾಗಿದೆ.
ಅಷ್ಟಕ್ಕೂ “ಏಳಲಾರದೋನಿಗೆ ಏಳು ಜನ ಹೆಂಡ್ರು.,ಮೇಲೊಬ್ಳು ಸೂಳೆ” ಎಂಬ ಮಾತು ಕಳವಳಕ್ಕೆ ಒಳಗಾಗುವಂತಿದೆ.”ಸೂಳೆ”ಎಂದರೆ ಚಂಚಲ.ಅದ್ದುಬಸ್ತಿನಲ್ಲಿರಲಾರದ ನಮ್ಮ ದೇಹದ ಅಂಗಗಳಾದ ಎರಡು ಕಣ್ಣು.,ಎರಡು ಮೂಗಿನ ಸೊರಳೆಗಳು.,ಒಂದು ನಾಲಿಗೆ.,ಒಂದು ಮೂತ್ರ ದ್ವಾರ.,ಮಗದೊಂದು ಮಲವಿಸರ್ಜನೆ ದ್ವಾರ.ಈ ಏಳು ಅಂಗಗಳ ಅಸಲಿ ಹೆಂಡರಿಗೆ,ಕಡಿವಾಣವಿಲ್ಲದ ಮನಸ್ಸೇ ಚಂಚಲ ಸೂಳೆ ಎಂದು ತತ್ವಪದಕಾರರು ಸಾರಿದ್ದಾರೆ.ಮನುಷ್ಯರಾದ ನಮಗೆ ಮನಸ್ಸಿನ ರಹಸ್ಯ ಅರಿಯುವುದು ತುಂಬಾ ಕಷ್ಟವಾಗುತ್ತದೆ. “ಮನ ಏವ ಮನುಷ್ಯಣಾಂ” ಎಂದು ಬಲ್ಲವರು ಮನಸ್ಸನ್ನು ಮನುಷ್ಯರ ಕ್ರಿಯೆ ಎಂದೇಳಿದ್ದಾರೆ.
ಅದಕ್ಕಾಗಿ ನಾವೆಷ್ಟೇ ಬಲ್ಲವರಾದರೂ ಒಂದೊಂದು ಬಾರಿ ನಮ್ಮ ಶರೀರದ ಅಂಗಗಳನ್ನು ಹತೋಟಿಗಿಟ್ಟುಕೊಳ್ಳಲಾಗುವುದಿಲ್ಲ.ಅದಕ್ಕೆ ಮನಸ್ಸೇ ಕಾರಣ.
ಹೀಗಾಗಿ ಸರ್ವರೂ ಒಂದೇ ರೂಪ,ಸ್ವಭಾವ,ಮತಿ,ಹೋಲಿಕೆ,ನಿರ್ಮಲತೆ ಹೊಂದಿರುವಂತಿದ್ದರೆ,ಬದುಕಿಗೆ ಅರ್ಥವೇ ಇರುತ್ತಿರಲಿಲ್ಲ.ನಮ್ಮ ದೇಹದ ಏಳು ಜನ ಹೆಂಡರನ್ನು ದುರ್ಬಳಕೆ ಮಾಡಿಕೊಳ್ಳಬಾರದು.ಮತ್ತು ಮೇಲಿರುವ ಚಂಚಲ ಮನಸ್ಸನ್ನು ಎತ್ತೆಂದರತ್ತ ಗಾಳಿಗೆ ಹೊಯ್ದಾಡಲು,ಹರಿದಾಡಲು ಬಿಡಬಾರದು.ಬದುಕು ಭವಣೆ ಏನೇ ಇರಲಿ.,ಅಸ್ತಿತ್ವವನ್ನು ಉಳಿಸಿ,ಬಾಳಸ್ಥಿತಿಗತಿಗೆ ಮರಳುವುದು ಲೇಸು.
************
*ಶರಣಪ್ಪ ತಳ್ಳಿ ಕುಪ್ಪಿಗುಡ್ಡ.ಕೆ.ಇ.ಬಿ.ಮಾಪಕ ಓದುಗರು ಗಂಗಾವತಿ*
*ನಿದ್ದಿ, ಮುದ್ದಿ, ಲದ್ದಿ ಸರಿಯಾಗಿದ್ದರೆ ನೀ ಗೆದ್ದಿ*
“””””””””””””””””””””””””””””””””
ಈ ಗಾದೆಯ ಮಾತು ಕೇವಲ ಮೂರು ಪದಗಳ ಜೋಡಣೆಯಲ್ಲ, ಇದು ಆಯುರ್ವೇದದ ಸಾರ ಮತ್ತು ಸುಖೀ ಜೀವನದ ರಹಸ್ಯವಾಗಿದೆ. ಮನುಷ್ಯನ ಅಸ್ತಿತ್ವದ ಮೂರು ಪ್ರಮುಖ ಶಾರೀರಿಕ ಕ್ರಿಯೆಗಳಿಗೆ ಅನ್ವಯವಾಗುವಂತೆ ನಮ್ಮ ಹಿರಿಯರು ಹೇಳಿದ್ದಾರೆ. ಬದುಕಿನ ವಿವಿಧ ಮಗ್ಗುಲುಗಳಿಗೆ
ಈ ಮೂರು ಅಂಶಗಳು ಆಧಾರವಾಗಿವೆ. ಆರೋಗ್ಯದ ಹಳಿ ತಪ್ಪಿದರೆ ಜೀವನದ ಇತರ ಮಗ್ಗುಲುಗಳು ಬಾಧಿತವಾಗುತ್ತವೆ *ನಿದ್ದಿ,ಮುದ್ದಿ,ಲದ್ದಿ,ಇವುಗಳು ಸರಿಯಾಗಿದ್ದರೆ ನೀ ಗೆದ್ದಿ* ಎಂಬ ಮಾತುಗಳು ಜನಜನಿತವಾಗಿದೆ.
ಸರಿಯಾದ ನಿದ್ದೆ ಇಲ್ಲದಿದ್ದರೆ ಮನುಷ್ಯ ಸಿಡುಕು ಗುಣದವನಾಗುತ್ತಾನೆ. ಏಕಾಗ್ರತೆ ಕಡಿಮೆಯಾಗಿ, ಕೆಲಸದಲ್ಲಿ ತಪ್ಪುಗಳಾಗುತ್ತವೆ. “ನಿದ್ದೆ ಕೆಟ್ಟರೆ ಎಂಟು ದಿನದ ಬುದ್ಧಿ ಕೆಟ್ಟಿತು” ಎಂಬ ಮಾತಿನಂತೆ ನಿದ್ರಾಹೀನತೆ ಖಿನ್ನತೆ ಮತ್ತು ಆತಂಕಕ್ಕೆ ದಾರಿ ಮಾಡಿಕೊಡುತ್ತದೆ.
ಹೊಟ್ಟೆ ಹಸಿವಾದಾಗ ಸರಿಯಾದ ಮುದ್ದಿ (ಆಹಾರ) ಸಿಗದಿದ್ದರೆ ಅಥವಾ ಅತಿಯಾಗಿ ತಿಂದರೆ ದೇಹ ಆಲಸ್ಯದಿಂದ ಕೂಡಿರುತ್ತದೆ. ಆರೋಗ್ಯವಂತ ವ್ಯಕ್ತಿ ಮಾತ್ರ ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯ. ಅನಾರೋಗ್ಯ ಪೀಡಿತ ವ್ಯಕ್ತಿ ಸಮಾಜಕ್ಕೆ ಹೊರೆಯಾಗುವ ಆತಂಕವಿರುತ್ತದೆ.
ದೇಹದ ಕಸ ಸರಿಯಾಗಿ ಹೊರ ಹೋಗದಿದ್ದರೆ (ಲದ್ದಿ), ಅದು ಮೂಲವ್ಯಾಧಿಯಂತಹ ದೀರ್ಘಕಾಲಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆಸ್ಪತ್ರೆ, ಮದ್ದು-ಮಾತ್ರೆಗಳಿಗಾಗಿ ಹಣ ವ್ಯಯವಾಗುತ್ತದೆ. ಆರೋಗ್ಯವಂತ ವ್ಯಕ್ತಿ ಹೆಚ್ಚು ದುಡಿಯಬಲ್ಲ, ಆ ಮೂಲಕ ಆರ್ಥಿಕವಾಗಿಯೂ ಗೆಲ್ಲಬಲ್ಲವನಾಗುತ್ತಾನೆ.
ಒಬ್ಬ ವಿದ್ಯಾರ್ಥಿ ರಾತ್ರಿ ಪೂರ್ತಿ ಓದಿ, ಸರಿಯಾಗಿ ನಿದ್ರೆ ಮಾಡದೆ ಪರೀಕ್ಷೆಗೆ ಹೋದರೆ, ಓದಿದ್ದನ್ನು ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲಿ ನಿದ್ದೆಯ ಮಹತ್ವ ತಿಳಿಯುತ್ತದೆ.ಸರಕಾರಿ ಕೆಲಸವಿರಲಿ,ಖಾಸಗಿ ಕೆಲಸವಾಗಲಿ,ದುಡಿದು….ದುಡಿದು
ಎಷ್ಟೇ ಹಣ ಗಳಿಸಿದರೂ, ಸಮಯಕ್ಕೆ ಸರಿಯಾಗಿ ಊಟ (ಮುದ್ದಿ) ಮಾಡದೆ ಇದ್ದ ಹಲವಾರು ಉದ್ಯೋಗಿಗಳು ಚಿಕ್ಕ ವಯಸ್ಸಿನಲ್ಲೇ ಗ್ಯಾಸ್ಟ್ರಿಕ್ ಅಥವಾ ಅಲ್ಸರ್‌ನಿಂದ ಬಳಲುತ್ತಾರೆ. ಇಲ್ಲಿ ಮುದ್ದಿಯ ಶಿಸ್ತು ತಪ್ಪಿದರೆ ಜೀವನ ಸೋತಂತೆ.
ಸಣ್ಣ ಮಕ್ಕಳಾಗಲಿ,ಮದ್ಯಮ ವಯಸ್ಕರಾಗಿರಲಿ, ಅಥವಾ ವಯಸ್ಸಾದವರಾಗಲಿ, ಅವರ ಹೊಟ್ಟೆ ಸರಿಯಾಗಿ ಶುದ್ಧಿಯಾಗದಿದ್ದರೆ (ಲದ್ದಿ), ಇಡೀ ದಿನ ಅವರು ಅಸ್ವಸ್ಥರಾಗಿರುತ್ತಾರೆ. ಹೊಟ್ಟೆ ಹಗುರವಾದರೆ ಮಾತ್ರ ಮನಸ್ಸು ಹಗುರ.
ಈ ಗಾದೆ ಮಾತಿಗೆ ವೈಜ್ಞಾನಿಕ ಹಿನ್ನೆಲೆಯಿದೆ. ನಮ್ಮ ದೇಹದ ಜೈವಿಕ ಗಡಿಯಾರ ಸರಿಯಾಗಿರಲು ನಿದ್ದೆ ಅತಿ ಅಗತ್ಯ.
ಮುದ್ದಿಯು ಅಷ್ಟೆ.ನಾವು ತಿನ್ನುವ ಆಹಾರವು ಶಕ್ತಿಯಾಗಿ ಪರಿವರ್ತನೆಯಾಗುವ ಪ್ರಕ್ರಿಯೆಯಾಗುತ್ತದೆ.
ಲದ್ದಿಯೆಂದರೆ ಅಸಹ್ಯ ಪಡಬೇಡಿರಿ.
ಕಟ್ಟ ಕಡೆಗೆ ಇದೇ ಎಡವಟ್ಟು ಮಾಡುವುದು.ದೇಹದಿಂದ ಮಲಿನ ಅಂಶಗಳು ಹೊರ ಹೋಗದಿದ್ದರೆ ತುಂಬಾ ಅಘಾತಕಾರಿ. ಈ ಮೂರು ಪ್ರಕ್ರಿಯೆಗಳು ಒಂದಕ್ಕೊಂದು ಪೂರಕವಾಗಿವೆ.
“ಆರೋಗ್ಯವೇ ಭಾಗ್ಯ”.
ಮನುಷ್ಯ ಎಷ್ಟೇ ಆಸ್ತಿ, ಅಂತಸ್ತು, ಅಧಿಕಾರ ಗಳಿಸಿದರೂ, ಅವನಿಗೆ ಸರಿಯಾಗಿ ನಿದ್ದೆ ಬರದಿದ್ದರೆ, ತಿಂದ ಆಹಾರ ಪಚನವಾಗದಿದ್ದರೆ ಮತ್ತು ದೇಹದ ತ್ಯಾಜ್ಯ ಸುಗಮವಾಗಿ ವಿಸರ್ಜನೆಯಾಗದಿದ್ದರೆ ಆ ಸಂಪತ್ತು ವ್ಯರ್ಥ.
ಬದುಕಿನ ಓಟದಲ್ಲಿ ನಾವು ಗೆಲ್ಲಬೇಕಾದರೆ ಮೊದಲು ನಮ್ಮ ದೇಹದ ಈ ಮೂರು ನೈಸರ್ಗಿಕ ಕರೆಗಳಿಗೆ ಬೆಲೆ ಕೊಡಬೇಕು. ಯಾರ ದೇಹದಲ್ಲಿ ಈ ಮೂರು ಕ್ರಿಯೆಗಳು ಗಡಿಯಾರದ ಮುಳ್ಳಿನಂತೆ ನಿಖರವಾಗಿ ನಡೆಯುತ್ತವೆಯೋ, ಅವನು ಯಾವುದೇ ವೈದ್ಯರ ಹಂಗಿಲ್ಲದೆ ನೂರು ಕಾಲ ಸುಖಿಯಾಗಿ ಬಾಳಬಲ್ಲ. ಅಂದರೆ, ಅವನು ಜೀವನದ ನಿಜವಾದ ಗೆಲುವನ್ನು ಸಾಧಿಸಿದ್ದಾನೆ ಎಂದರ್ಥ.
”ದೇಹವೇ ದೇಗುಲ, ಆರೋಗ್ಯವೇ ಜೀವನದ ಪರಮ ಸುಖ”
ಕನ್ನಡ ಸಂಸ್ಕೃತಿಯಲ್ಲಿ ಗಾದೆಗಳು ವೇದಗಳಿಗೆ ಸಮಾನ. “ವೇದ ಸುಳ್ಳಾದ್ರೂ ಗಾದೆ ಸುಳ್ಳಾಗದು” ಎಂಬ ನಾಣ್ಣುಡಿಯಂತೆ, ನಮ್ಮ ಹಿರಿಯರು ನೀಡಿದ “ನಿದ್ದಿ, ಮುದ್ದಿ, ಲದ್ದಿ ಸರಿಯಾಗಿದ್ದರೆ ನೀ ಗೆದ್ದಿ” ಎಂಬ ಮಾತು ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮ್ರಾಜ್ಯದ ಅಧಿಪತಿಯಾಗಲು ಇರುವ ರಾಜಮಾರ್ಗವಾಗಿದೆ. ಹಿತವಾದ ಆಹಾರವೇ ಅಮೃತ
ಆರೋಗ್ಯದ ಅಡಿಪಾಯ ಅಡಗಿರುವುದು ನಾವು ಸೇವಿಸುವ ಆಹಾರದಲ್ಲಿ. “ಮುದ್ದಿ” ಎಂದರೆ ಕೇವಲ ಹೊಟ್ಟೆ ತುಂಬಿಸಿಕೊಳ್ಳುವುದಲ್ಲ, ಅದು ಶರೀರಕ್ಕೆ ನೀಡುವ ಇಂಧನ.
“ಉಣಬಲ್ಲವನಿಗೆ ರೋಗವಿಲ್ಲ, ಹರಟಬಲ್ಲವನಿಗೆ ಜಗಳವಿಲ್ಲ.”
ನಾವು ಎಷ್ಟು ತಿನ್ನುತ್ತೇವೆ ಎನ್ನುವುದಕ್ಕಿಂತ ಹೇಗೆ ಮತ್ತು ಏನನ್ನು ತಿನ್ನುತ್ತೇವೆ ಎಂಬುದು ಮುಖ್ಯ. ಅತಿಯಾಗಿ ತಿಂದರೆ ಅಮೃತವೂ ವಿಷವಾಗುತ್ತದೆ. ಸಮಯಕ್ಕೆ ಸರಿಯಾಗಿ ಹಿತಮಿತವಾಗಿ ಉಣ್ಣುವವನು ವೈದ್ಯರಿಂದ ದೂರವಿರುತ್ತಾನೆ. “ಹೊಟ್ಟೆ ಚೂರಿಗಿಂತ ಹರಿತ” ಎಂಬಂತೆ, ಅತಿಯಾದ ಆಸೆ ಬುದ್ಧಿಯನ್ನು ಕೆಡಿಸುತ್ತದೆ.
ಮನಸ್ಸಿನ ಶಾಂತಿಯ ಮೂಲ
ದೇಹಕ್ಕೆ ವಿಶ್ರಾಂತಿ ಸಿಗುವುದು ಗಾಢವಾದ ನಿದ್ರೆಯಲ್ಲಿ. ನಿದ್ರೆ ಎಂಬುದು ಪ್ರಕೃತಿ ನಮಗೆ ನೀಡಿದ ವರ.
ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ ಮರುದಿನ ಪೂರ್ತಿ ಮೆದುಳು ಮಂದವಾಗುತ್ತದೆ. ನಿದ್ರೆ ಇಲ್ಲದ ಮನುಷ್ಯನಿಗೆ ಕೋಪ, ಆವೇಶಗಳು ಹೆಚ್ಚು. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂಬ ಗಾದೆ ಕೇವಲ ಹಣಕಾಸಿಗೆ ಮಾತ್ರವಲ್ಲ, ನಮ್ಮ ದೈಹಿಕ ಮಿತಿಗೂ ಅನ್ವಯಿಸುತ್ತದೆ. ಶರೀರ ಕೇಳುವ ವಿಶ್ರಾಂತಿಯನ್ನು ನೀಡದಿದ್ದರೆ ಬದುಕು ಹದಗೆಡುತ್ತದೆ.
ಶರೀರದ ಶುದ್ಧೀಕರಣ
ದೇಹದ ಕಸ ಅಥವಾ ಮಲಿನ ಅಂಶಗಳು ಹೊರಹೋಗುವ ಪ್ರಕ್ರಿಯೆಯೇ ಲದ್ದಿ.
ಈ ಮೂರು ಅಂಶಗಳು ಸಮತೋಲನದಲ್ಲಿದ್ದರೆ ಮಾತ್ರ ಮನುಷ್ಯ ನಿಜವಾದ “ಗೆಲುವನ್ನು” ಸಾಧಿಸಲು ಸಾಧ್ಯ. ಇಂದಿನ ಕಾಲದಲ್ಲಿ ಧಾವಂತದ ಬದುಕಿನಲ್ಲಿ ನಾವು ಹಣದ ಹಿಂದೆ ಬಿದ್ದು ಈ ಮೂಲಭೂತ ಅವಶ್ಯಕತೆಗಳನ್ನು ಮರೆಯುತ್ತಿದ್ದೇವೆ ಎಂದರೂ ಸುಳ್ಳಲ್ಲ.
“ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ” ಎನ್ನುವ ಸ್ಥಿತಿ ಬರದಂತೆ ನೋಡಿಕೊಳ್ಳುವುದೇ ಜಾಣತನ. ಅಂದರೆ, ಎಷ್ಟೇ ಸಂಪತ್ತು ಗಳಿಸಿದರೂ ಅದನ್ನು ಅನುಭವಿಸಲು ಆರೋಗ್ಯ ಬೇಕು.
ನಿದ್ದೆ ಸರಿಯಾಗಿದ್ದರೆ ಜೀರ್ಣಕ್ರಿಯೆ (ಲದ್ದಿ) ಚೆನ್ನಾಗಿರುತ್ತದೆ, ಆಹಾರ (ಮುದ್ದಿ) ಹಿತವಾಗಿದ್ದರೆ ನಿದ್ದೆ ಚೆನ್ನಾಗಿ ಬರುತ್ತದೆ. ಇವು ಒಂದಕ್ಕೊಂದು ಬೆಸೆದುಕೊಂಡಿರುವ ಕೊಂಡಿಗಳು.ಈ ಎರಡು ಕೊಂಡಿಗಳಿಗೆ ಪಚನಕ್ರಿಯೆ ರಾಜ.
ಮನುಷ್ಯನು ಇಡೀ ಜಗತ್ತನ್ನೇ ಗೆದ್ದರೂ ತನ್ನ ದೇಹದ ಈ ಮೂರು ನೈಸರ್ಗಿಕ ಕ್ರಿಯೆಗಳನ್ನು ಗೆಲ್ಲದಿದ್ದರೆ ಆತ ಸೋತಂತೆ. “ತಾನು ಸುಖಿಯಾಗಿ ಬಾಳದಿದ್ದರೆ ಜಗತ್ತೆಲ್ಲಾ ಇದ್ದು ಏನು ಪ್ರಯೋಜನ?” ಎಂಬ ಚಿಂತನೆಯೇ ಈ ಗಾದೆಯ ಅಂತಿಮ ಸಾರ. ಆದ್ದರಿಂದ, ಆರೋಗ್ಯವಂತ ದೇಹದಲ್ಲಿ ಮಾತ್ರ ಆರೋಗ್ಯವಂತ ಮನಸ್ಸು ನೆಲೆಸಲು ಸಾಧ್ಯ. ಈ ಮೂರು ‘ಸರಿ’ಯಾಗಿದ್ದರೆ ನೀನೇ ಈ ಭೂಮಿಯ ಮೇಲೆ ಅತಿ ದೊಡ್ಡ ‘ಗೆಲುವಿನ’ ಸರದಾರ!
“””””””””””””””””””””””””””””””
*ಶರಣಪ್ಪ ತಳ್ಳಿ ಕುಪ್ಪಿಗುಡ್ಡ*
*ನಯವಾಗಲಿ,ಭಯವಾಗಲಿ,ಇಲ್ಲದವ ಧರ್ಮವೇನು ಮಾಡಿಯಾನು?*
°°°°°°°°°°°°°°°°°°°°°°°°
ಇದೊಂದು ಅದ್ಭುತವಾದ ಗಾದೆ ಮಾತು. ಇದು ಮನುಷ್ಯನ ವ್ಯಕ್ತಿತ್ವದಲ್ಲಿ ಇರಬೇಕಾದ ಅತ್ಯಗತ್ಯ ಗುಣಗಳ ಮೇಲೆ ಬೆಳಕು ಚೆಲ್ಲುತ್ತದೆ.
ಮಾನವ ಜನ್ಮವು ಅತ್ಯಂತ ಶ್ರೇಷ್ಠವಾದುದು. ಕೇವಲ ಮನುಷ್ಯನಾಗಿ ಹುಟ್ಟಿದರೆ ಸಾಲದು,ಕಿಂಚಿತ್ತಾದರೂ ಮನುಷ್ಯತ್ವ ಇದ್ದರೆ ಮಾತ್ರ ಜೀವನ ಸಾರ್ಥಕವಾಗುತ್ತದೆ.ನಮ್ಮ ದೇಶದ ಪರಂಪರೆಯಲ್ಲಿ ಅಡಗಿರುವುದು ನಯ ,ದಯ,ಕರುಣೆ,ಕಕ್ಕುಲಾತಿಯ ಭಾಗವಾಗಿದೆ.ಅತೀ ಜಿಪುಣನಾದರೂ ಪರವಾಗಿಲ್ಲ.ಎಲ್ಲ ಮಿತಿಯೊಳಗಿದ್ದು,ಅವನ ಕರ್ತವ್ಯದ ನಿರ್ವಹಣೆಯಲ್ಲಿ ಅವನಿರುತ್ತಾನೆ.ಹಬ್ಬ, ಅಮಾವಾಸ್ಯೆ,ಹುಣ್ಣಿವೆಗಾದರೂ ನಾಲ್ಕು ಜನರಿಗೆ ಅವನು ಉಣಿಸುವ ಪ್ರಯತ್ನದಲ್ಲಿರುತ್ತಾನೆ.
ಇದಕ್ಕೆ ವ್ಯತಿರಿಕ್ತವಾಗಿ ಆರೋಪ,ಅಸಮಾಧಾನ, ಆಕ್ರೋಶ,ವೈರತ್ವ, ವೈಮನಸ್ಸು ಬೆಳೆಸಿಕೊಳ್ಳುವವನಿಗೆ ನಯ ವಿನಯ ದಯ ಎಲ್ಲಿಂದ ಬರಬೇಕು ?ಅವನು ತಪ್ಪು ಮಾಡಿದ ನೋಡು, ಇವಳು ತಪ್ಪು ಮಾಡಿದಳು ನೋಡು,ಅವನ ಸ್ವಭಾವ ಸರಿಯಿಲ್ಲ,ಬರೀ…ಇವೆ ಕಥೆಗಳೆ.ಅಷ್ಟಕ್ಕೂ ನನ್ನಿಂದ ಪ್ರಮಾದ ಆಗಿದೆ ಎಂದು ಭಯವಿಲ್ಲದವರು ಹೇಳಿಕೊಳ್ಳಲು ಸಾಧ್ಯವೇ ಇಲ್ಲ.ಬಹು ಮುಖ್ಯವಾದದೇನಂದರೆ ಇಂತವರು ಎಲ್ಲಾ ಸಮಯದಲ್ಲಿ ಭ್ರಮೆಯಲ್ಲಿಯೇ ಇರುತ್ತಾರೆ.ಇನ್ನೊಬ್ಬರ ಸ್ಥಾನದಲ್ಲಿ ನಿಂತು ಇವರು ಯೋಚಿಸಲಾರರು.ಇಂತವರಿಗಾಗಿಯೆ “ನಯವಾಗಲಿ,ಭಯವಾಗಲಿ,ಇಲ್ಲದವ ಧರ್ಮವೇನು ಮಾಡಿಯಾನು?” ಎಂಬ ಗಾದೆಯ ಮಾತುಗಳು ಹುಟ್ಟಿಕೊಂಡಿವೆ. ವ್ಯಕ್ತಿಯೊಬ್ಬನ ಬಾಹ್ಯ ನಡವಳಿಕೆ (ನಯ) ಮತ್ತು ಆಂತರಿಕ ಗುಣ (ದಯೆ) ಇಲ್ಲದಿದ್ದರೆ ಅವನು ಮಾಡುವ ಯಾವುದೇ ಧಾರ್ಮಿಕ ಕಾರ್ಯಗಳು ವ್ಯರ್ಥ ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತದೆ.
ನಯವು ನಡತೆಯ ಲಕ್ಷಣ
’ನಯ’ ಎಂದರೆ ವಿನಯ, ನಮ್ರತೆ ಮತ್ತು ಮಾತಿನ ಮಾಧುರ್ಯ. ಒಬ್ಬ ವ್ಯಕ್ತಿ ಎಷ್ಟೇ ಪರಿಣಿತನಾದರೂ, ಎಷ್ಟೇ ಶ್ರೀಮಂತನಾಗಿದ್ದರೂ ಅವನಲ್ಲಿ ವಿನಯವಿಲ್ಲದಿದ್ದರೆ ಅವನಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ.
“ಮಾತು ಮುತ್ತಿನ ಹಾರದಂತಿರಬೇಕು”ಎಂದು ವಿಶ್ವಗುರು ಬಸವಣ್ಣನವರು ಹೇಳಿದ್ದಾರೆ. ನಯವಾದ ಮಾತು ಕಠಿಣ ಮನಸ್ಸನ್ನೂ ಕರಗಿಸುತ್ತದೆ.
ಅಹಂಕಾರದಿಂದ ವರ್ತಿಸುವವನು ಎಲ್ಲರಿಂದ ದೂರವಾಗುತ್ತಾನೆ. ವಿನಯವಂತನು ಎಲ್ಲರನ್ನೂ ಪ್ರೀತಿಯಿಂದ ಗೆಲ್ಲುತ್ತಾನೆ. ನಯವಿಲ್ಲದವನ ಭಕ್ತಿ ಅಥವಾ ಧರ್ಮವು ಕೇವಲ ಪ್ರದರ್ಶನವಾಗಿ ಉಳಿಯುತ್ತದೆ.
”ದಯವಿಲ್ಲದ ಧರ್ಮವದಾವುದಯ್ಯಾ?” ಎಂಬ ವಚನದ ಸಾಲು ಈ ಗಾದೆಗೆ ಪೂರಕವಾಗಿದೆ. ದಯೆ ಎಂದರೆ ಕೇವಲ ಮನುಷ್ಯರ ಮೇಲಷ್ಟೇ ಅಲ್ಲ, ಪ್ರಾಣಿ-ಪಕ್ಷಿ ಹಾಗೂ ಸಕಲ ಜೀವರಾಶಿಗಳ ಮೇಲೆ ತೋರುವ ಕರುಣೆ.
ಮನಸ್ಸಿನಲ್ಲಿ ಕ್ರೌರ್ಯವನ್ನು ಇಟ್ಟುಕೊಂಡು, ಕೈಯಲ್ಲಿ ಜಪಸರ ಹಿಡಿದು ಕುಳಿತುಕೊಂಡರೆ ಅದು ಧರ್ಮವಲ್ಲ.
ಸಂಕಷ್ಟದಲ್ಲಿರುವವರಿಗೆ ನೆರವಾಗುವ ಗುಣವೇ ನಿಜವಾದ ದಯೆ.ಭಯಪಡಿಸುವವರು ಈಗ ಈ ಭೂಮಿಯ ಮೇಲೆ ಫಾರಂ ಕೋಳಿ, ಹುಂಜದಂತೆ ಹುಟ್ಟುತ್ತಿದ್ದಾರೆ.ಇವರ ಜೀವನದುದ್ದಕ್ಕೂ ಪಾಪ ಪ್ರಜ್ಞೆಯಲ್ಲಿಯೆ ಇರುತ್ತಾರೆ.ಇಂತವರಿಗೆ ದಂಡಿಸುವುದು ಯಾವಾಗಲೂ ಯಾತನಾದಾಯಕ ಅನುಭವ.ಇವರಿಗೆ ತಿದ್ದುವ ಕಾಲವು ,ಕಾಲವೆ ನಿರ್ಣಯಿಸುತ್ತದೆ.
ಅದರಾಚೆ ಕೆಲವು ಜನರಿದ್ದಾರೆ. ಲಕ್ಷಗಟ್ಟಲೆ ರೂಪಾಯಿಗಳನ್ನು ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲೀ ನೀಡುತ್ತಾರೆ.ಹಾಗೆನೆ ಫೋಟೋ ತೆಗಿಸಿಕೊಳ್ಳುತ್ತಾರೆ.ಮತ್ತು ಚುನಾವಣೆಗಳು ಬಂದರೆ ಸಾಕು.ಹೀಗೇ ಧರ್ಮಾಧಿಕಾರಿಗಳ ಹಾಗೆ ತುಪ್ಪದಲ್ಲಿ ಎಳೆ ತೆಗೆದಂತೆ ನಾಜೂಕಾಗಿರುತ್ತಾರೆ.ಆದರೆ ಅಕ್ಕಪಕ್ಕದ ಹಿರಿಯರನ್ನು ಅಥವಾ ತಮ್ಮ ಮನೆಯ ಕೆಲಸಗಾರರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಾರೆ. ಧರ್ಮಕ್ಕೆಲ್ಲಿದೆ ಬೆಲೆ.
ನಯ ಮತ್ತು ದಯೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮನುಷ್ಯನಿಗೆ ಹೊರಗಿನ ನಡವಳಿಕೆಯಲ್ಲಿ ‘ನಯ’ ಮತ್ತು ಒಳಗಿನ ಮನಸ್ಸಿನಲ್ಲಿ ‘ದಯೆ’ ಇರಬೇಕು. ಈ ಎರಡು ಗುಣಗಳಿಲ್ಲದವನು ಎಷ್ಟೇ ಧಾರ್ಮಿಕ ವಿಧಿ-ವಿಧಾನಗಳನ್ನು ಪಾಲಿಸಿದರೂ ಅದು ನಾಯಿ ಮುಕಳಿಯಲ್ಲಿ ಜೇನು ಇಟ್ಟ ಹಾಗೆ.
ನಿಜವಾದ ಧರ್ಮವು ಮನುಷ್ಯನ ಸಂಸ್ಕಾರದಲ್ಲಿ ಅಡಗಿದೆಯೇ ಹೊರತು ಕೇವಲ ಆಡಂಬರದಲ್ಲಿರುವುದಿಲ್ಲ
”ಕೊಲ್ಲುವವನೇ ಮಾದಿಗ, ಹೊಲಸು ತಿನ್ನುವವನೇ ಕುಲಹೀನ”: ಅಂದರೆ ಪ್ರಾಣಿಹಿಂಸೆ ಮಾಡುವವನು ಅಥವಾ ದಯೆಯಿಲ್ಲದವನೇ ನಿಜವಾದ ಅರ್ಥದಲ್ಲಿ ಹೀನ ಕುಲದವನು.
”ಧರ್ಮವೇ ಜಯದ ಮೂಲ”: ಧರ್ಮವೆಂದರೆ ಇಲ್ಲಿ ಕೇವಲ ಆಚರಣೆಯಲ್ಲ, ಅನ್ಯರಿಗೆ ಕೆಡುಕನ್ನು ಬಯಸದ ‘ದಯಾ’ ಗುಣವೇ ಜಯವನ್ನು ತಂದುಕೊಡುತ್ತದೆ.
”ವಿದ್ಯೆ ವಿನಯವನ್ನು ಕೊಡುತ್ತದೆ”:
ಹಾಗೆಯೇ ಜ್ಞಾನ ಮತ್ತು ಗುಣವಂತಿಕೆ ಹೆಚ್ಚಾದಂತೆ ಮನುಷ್ಯ ಹೆಚ್ಚು ವಿನಯಶೀಲನಾಗುತ್ತಾನೆ.
”ಮಾತು ಮುತ್ತಿನ ಹಾರದಂತಿರಬೇಕು”: ಮಾತಿನಲ್ಲಿ ನಯವಿರಬೇಕು, ಅದು ಇತರರ ಮನಸ್ಸನ್ನು ನೋಯಿಸುವಂತಿರಬಾರದು.
”ಮನಸ್ಸು ಮಹಾದೇವ”: ಅಂತರಂಗದ ದಯೆಯೇ ದೇವರು. ಒಳಗೊಂದು ಹೊರಗೊಂದು ಇರಬಾರದು.
“ಕೇವಲ ‘ನಯವಿಲ್ಲದವನು ದಯವಿಲ್ಲದವನು’ ಮಾತ್ರವಲ್ಲದೆ, ನಮ್ಮ ಹಿರಿಯರು ‘ದಯೆಯೇ ಧರ್ಮದ ಮೂಲ’ವೆಂದು ಸಾರಿದ್ದಾರೆ. ಬಾಗುವ ಮರಕ್ಕೆ ಹಣ್ಣು ಹೆಚ್ಚು ಎಂಬಂತೆ ಮನುಷ್ಯನು ವಿನಯವಂತನಾದಾಗ ಮಾತ್ರ ಧರ್ಮ ಅವನನ್ನು ರಕ್ಷಿಸುತ್ತದೆ.”
••••••••••••••••••••••••••
*ಶರಣಪ್ಪ ತಳ್ಳಿ ಕುಪ್ಪಿಗುಡ್ಡ*
1)
*ಶಾಯರಿ*
*ಓ ನಲ್ಲ*
ನಲ್ಲ ನೀ ಬಂದ್ರ್
ಬೆಳದಿಂಗಳ ತಂಪ್ ಚೆಲ್ಲತೈತಿ
ನನ್ನ ಕೈ ಬಿಟ್ಟು ಹೋದ್ರ
ಬಾಳೆ ಅಮವಾಸ್ಯೆ ಆಗತೈತಿ
✍️✍️
*ಶ್ರೀಮತಿ. ಪಾರ್ವತಿ ದೇವಿ. ಎಂ. ತುಪ್ಪದ ಬೆಳಗಾವಿ*
2)
*ಶಾಯರಿ*
*ಓ ನಲ್ಲ*
ಓ ನಲ್ಲ ನೀ ಇದ್ರ ಜೊತೆಯಾಗಿ
ನೂರಾನೆ ಬಲ ಬರತೈತಿ
ನೀ ಇಲ್ಲದೇ ನಾ ಒಂಟಿಯಾಗಿ
ನೀರ್ ನಿಂದ್ ತೆಗೆದ ಮೀನಿನಂಗೆ ಜೀವ ಒದ್ದಾಡತೈತಿ
✍️✍️
*ಶ್ರೀಮತಿ ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ*
*ಹುಚ್ಚ*
(ಗಂಡು ಪಡ್ಡೆಗಳಿಗೆ ಪಾಠ)
ಹಾಯ್ ಬೇಬಿ
ಹಾಯ್ ರೂಬಿ
ಹಲೋ ಲವ್ಲಿ
ಹಾಯ್ ಡಾರ್ಲಿಂಗ್
ನೀ ಮಾಡಿದ
ಕಾರಬಾರ್
ಹೌದು ಖರೇನ
ಊರ್ ತುಂಬಾ ಇವ್ರೇ
ಊರ್ ಹೊರಗೂ ಇವ್ರೇ
ಲೇ ಹುಚ್ಚ್ ಹುಡುಗ
ಕೈ ಕೊಟ್ಟು ಹೋದ್ರು ಬೇಡಗ
ಹುಚ್ಚನ್ ಮಾಡಿ
ತಿರ್ಗಾ ಕ್ ಬಿಟ್ರೋ
ನಿನ್ನ ತುಡುಗ
😂😂😂😂😂😂😂😂
✍️✍️
*ಶ್ರೀಮತಿ. ಪಾರ್ವತಿ ದೇವಿ. ಎಂ. ತುಪ್ಪದ ಬೆಳಗಾವಿ*
*ಕಣ್ಣೀರು ಬ್ರಹ್ಮಸ್ತ್ರ*
ಕಣ್ಣು ಬಿಟ್ರೆ ನೀನೇ
ಕಣ್ಣು ಮುಚ್ಚಿದ್ರು ನೀನೇ
ಹೇಳಿ ಹೇಳಿ ನೆತ್ತಿಗೆರಿಸಿಕೊಂಡ
ಅವ್ಳು ಹರಿಸಿ ಹರಿಸಿ ಕಣ್ಣೀರು
ತಲೆ ಬೋಳಿಸಿ ಮುಚ್ಚಿದಳು ಮುಂಡ
ಅವ್ಳು ಕೈ ಕೊಟ್ಟು ಹೋದಾಗ ಗೊತ್ತಾಯಿತು
ಅವೆಲ್ಲ ಮೋಸಳೇ ಕಣ್ಣೀರು
😂😂😂😂😂😂😂😂😂
✍️✍️
*ಶ್ರೀಮತಿ. ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ*
*ಪ್ರೀತಿ ಅಂದರೇನು*?
ನಿನ್ನ ಕೋಪದಾಗ
ಬಾಳ್ ಪ್ರೀತಿ ಐತಿ
ಅಂತ ಗೊತ್ತೈತಿ
ಆದ್ರೂ ಒಮ್ಮೋಮ್ಮೆ
ನಿನ್ನ ಸಿಟ್ಟ್ ಅತಿರೇಕ ಆಗತೈತಿ
ಕಿತ್ಕೊಂಡ್ ತವರಿಗೆ ಓಡಿ ಹೋಗಬೇಕ್ ಅನಸತೈತಿ
ಅಮ್ಮ ಅಪ್ಪನ ಪ್ರೀತಿನ ಚಲೋ ಅನಸ್ತತೈತಿ
ಹೆಂಗ್ ಇರ್ಬೇಕು, ರಾಯ, ಪ್ರೀತಿ ಅಂದ್ರ
ಹೆಣ್ಣ್ ಎಂದೂ ಅವ್ವ್ ಅಪ್ಪನ ನೆನಸ್ಲಾರದಂಗ್
ಪ್ರೀತಿಸಬೇಕು ಚೆಲುವ
✍️✍️
*ಶ್ರೀಮತಿ. ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ*
*ನೋಡೋರ್ ಕಣ್ಣ್*
ಹೆಂಡ್ತಿ ಪಕ್ಕದಲ್ಲೇ
ಇದ್ರೂ
ದುರ್ಗಟ್ಟ್ಕೊಂಡ ನೋಡ್ತವ್ನೆ
ಬೇವರ್ಸಿ
ಅಂದಳು ಸುಂದ್ರಿ
ನೀನೇಕೆ ಅವ್ನ್
ನೋಡ್ತಾ ಇದ್ದೆ ದೇಬರ್ಸಿ
😂😂😂😂😂😂😂😂😂
✍️✍️
*ಶ್ರೀಮತಿ. ಪಾರ್ವತಿ ದೇವಿ. ಎಂ. ತುಪ್ಪದ ಬೆಳಗಾವಿ*
*ಎಂಥ ಪಿರಿ ಪಿರಿ*
(ಸಿರಿಸಿ ಭಟ್ಕಳ ಕಡೆಯ ಈ ತರದ ಮಾತು)
ಅಳಿಯನಿಗೆ
ಎಂಥ ಪಿರಿ ಪಿರಿ
ನೀ ಮಾಡುವದುoಟು
ಬಿಟ್ಟು ಹೋದ್ರೆ ಏನುoಟು
ಅಮ್ಮ ಬೈಯುತ್ತಿತ್ತು
ಏ ಯಾರ್ ತಡಿತಾರೆ
ಆತನ ಕಿರಿ ಕಿರಿ
ಬಿಟ್ಟು ಹೋಗಲೆಂದೇ
ಹೆಚ್ಚಿಗೆ ಮಾಡುವುದುoಟು
ಮಗಳು ಕೊಟ್ಟ ಉತ್ತರ,
ನಾನು ಕೊಡುವೆ ಕಿರಿ ಕಿರಿ
ಸುಮ್ನೆ ಮಂಡೆ ಬಿಸಿ
😂😂😂😂😂😂
✍️✍️
*ಶ್ರೀಮತಿ ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ*
*ಬಂಗಾರದ ಬೆಲೆ ಗಗನ ಕ್ಕೆ*
ಯಾರಿಗೆ ಬೇಕು
ಬೆಳ್ಳಿ ಬಂಗಾರ
ತುಂಬಿವೆ ಊರ
ತುಂಬಾ ಸಿಂಗಾರ
ಉಮಾ ಗೋಲ್ಡ್ ಭರ ಪೂರಾ
ಬಾಂಬೆ ಬಜಾರ್
ನಕಲಿ ಬಂಗಾರ
ಹಾಕ್ಕೊಂಡ್ ಮೆರೆಯೋ ಸೌಂದರ್ಯ
ಇದುವೇ ಅತೀ ಸುಂದರ ಐಶ್ವರ್ಯ
✍️✍️
*ಶ್ರೀಮತಿ. ಪಾರ್ವತಿ ದೇವಿ. ಎಂ. ತುಪ್ಪದ. ಬೆಳಗಾವಿ*
