29/01/2026
IMG-20251228-WA0004

ಬೆಳಗಾವಿ-28: ಬೆಳಗಾವಿ ನಗರದಲ್ಲಿರುವ ಸರ್ದಾರ್ಸ್ ಮೈದಾನದಲ್ಲಿ ಶನಿವಾರ ಸಂಜೆ ಆಯೋಜಿದ್ದ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ಯಿಂದ ಬೆಳಗಾವಿ ಉತ್ಸವಕ್ಕೆ ಜನ‌ ಕಿಕ್ಕಿರಿದು ಸೇರಿದ್ದರು.‌ ಸ್ಟಾರ್ ನಟ, ನಟಿಯರನ್ನು ನೋಡಿ ಫುಲ್‌ ಖುಷ್ ಆದರು. ಖ್ಯಾತ ಗಾಯಕ ರಾಜೇಶ್​ ಕೃಷ್ಣನ್ ಅವರ ಅದ್ಭುತ ಹಾಡುಗಳಿಗೆ ಹುಚ್ಚೆದ್ದು ಕುಣಿದರು.

ಕ.ರ.ವೇ ಸಹಯೋಗದಲ್ಲಿ ಸಮಾಜಸೇವಕ ಶಿವಾನಂದ ನೀಲನ್ನವರ, ಕ.ರ.ವೇ ಜಿಲ್ಲಾಧ್ಯಕ್ಷ‌ ಆರ್.ಅಭಿಲಾಷ್​ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ “ಬೆಳಗಾವಿ ಉತ್ಸವ” ಸಂಗೀತ ಸಂಜೆ ಕಾರ್ಯಕ್ರಮ‌ ಬೆಳಗಾವಿ ಜನರನ್ನು ಮನಸೂರೆಗೊಳಿಸಿತು. ಚಿತ್ರನಟರಾದ ಡಾಲಿ ಧನಂಜಯ್​, ನಿನಾಸಂ ಸತೀಶ್​, ವಸಿಷ್ಠ ಸಿಂಹ, ನಟಿಯರಾದ ಸಪ್ತಮಿ ಗೌಡ ಮತ್ತು ರಾಗಿಣಿ ಕಾರ್ಯಕ್ರಮಕ್ಕೆ ತಾರಾ ಮೆರುಗು ತಂದುಕೊಟ್ಟರು. ಇವರೆಲ್ಲ ವೇದಿಕೆಗೆ ಬರುತ್ತಿದ್ದಂತೆ ಪ್ರೇಕ್ಷಕರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನಟ, ನಟಿಯರು ತಮ್ಮ‌ ಸಿನಿಮಾದ ಹಾಡು ಹಾಡಿ, ಡೈಲಾಗ್ ಹೊಡೆದು ಅಭಿಮಾನಿಗಳನ್ನು ರಂಜಿಸಿದರು.

ಆ ಬಳಿಕ ಗಾಯಕ ರಾಜೇಶ್​ ಕೃಷ್ಣನ್ ವೇದಿಕೆಗೆ ಆಗಮಿಸಿ ಒಂದೊಂದಾಗಿ ಹಾಡಲು ಶುರು‌ ಮಾಡಿದರು. ಮೊದಲಿಗೆ ‘ಯಾರೋ ಕಣ್ಣಲ್ಲಿ ಕಣ್ಣನಿಟ್ಟು ಮನಸ್ಸಿನಲ್ಲಿ ಮನಸನಿಟ್ಟು’ ಹಾಡು ಹಾಡಿದರು‌. ನಂತರ ‘ಉಸಿರೇ ನೀ ಉಸಿರ ಕೊಲ್ಲಬೇಡ’, ‘ನೂರು ಜನ್ಮಕೂ ನೂರಾರು ಜನ್ಮಕೂ’, ‘ಗೀತಾಂಜಲಿ ಹಾಲುಗೆಣ್ಣೆಗೆ ನಮ್ಮೂರ ಹೆಣ್ಣಿಗೆ’ ಹಾಡು ಸಂಗೀತಪ್ರಿಯರನ್ನು ರಂಜಿಸಿತು. ಅವರ ಎಲ್ಲ ಹಾಡಿಗೆ ನೆರೆದಿದ್ದ ಪ್ರೇಕ್ಷಕರು ಕೂಡ ಧ್ವನಿಗೂಡಿಸಿದರು.‌ ಒಂದು ಸಾಲು‌ ಕೂಡಾ ತಪ್ಪದೇ ಹಾಡು ಹಾಡುತ್ತಿದ್ದ ಪ್ರೇಕ್ಷಕರ ಉತ್ಸಾಹಕ್ಕೆ ರಾಜೇಶ್​ ಕೃಷ್ಣನ್ ಫಿದಾ ಆದರು.
ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು’, ‘ಸುಂಟರಗಾಳಿ ಸುಂಟರಗಾಳಿ’, ‘ಬಾರೇ ನನ್ನ ಕುರುಬರಾಣಿ’, ‘ಏನೇ ಕನ್ನಡತಿ ನೀ ಯಾಕೆ ಹಿಂಗಾಡತಿ’, ‘ನಾನು ಯಾರು..? ಯಾವ ಊರು..?’, ‘ಮಸ್ತ್ ಮಸ್ತ್ ಹುಡುಗಿ ಬಂದಳು ಆಯಿರಾಯಿರ್ರೊ’, ‘ಮಾರಿಕಣ್ಣು ಹೋರಿ ಮೇಲೆ ನನ್ನ ಕಣ್ಣು ನಿನ್ನ ಮೇಲೆ’, ‘ಟುವ್ವಿ ಟುವ್ವಿ ಎಂದು ಹಾಡುವ’, ‘ಯಾರೇ ನೀನು ರೋಜಾ ಹೂವೇ’, ‘ಹಾಡು ಸಂತೋಷಕ್ಕೆ ಹಾಡು ಸಂತೋಷಕ್ಕೆ’, ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡುಗಳನ್ನು ರಾಜೇಶ್​ ಕೃಷ್ಣನ್ ಹಾಡಿ ಕೊರೆಯುವ ಚಳಿಯಲ್ಲೂ ಪ್ರೇಕ್ಷಕರಿಗೆ ಸಂಗೀತದ ಕಿಚ್ಚು ಹಚ್ಚಿದರು.
ಸುಮಾರು 1 ಗಂಟೆಗೂ‌ ಅಧಿಕ ಕಾಲ ರಾಜೇಶ್​ ಕೃಷ್ಣನ್ ರಂಜಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸತ್ಕರಿಸಲಾಯಿತು.‌ ಈ ವೇಳೆ ಕ.ರ.ವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ಜಿಲ್ಲಾಧ್ಯಕ್ಷ ಆರ್.ಅಭಿಲಾಷ ಸೇರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!