ಬೆಳಗಾವಿ-25:ಡಿ.27 ಮತ್ತು 28 ರಂದು ಬೆಳಗಾವಿ ವಿಭಾಗಮಟ್ಟದ ಅಧ್ಯಯನ ಶಿಬಿರವನ್ನು ಘಟಪ್ರಭೆಯಲ್ಲಿ ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಖಜಾಂಚಿಗಳಾದ ಸಿದ್ದಪ್ಪ ಕಾಂಬಳೆ ತಿಳಿಸಿದರು.
ಬೆಳಗಾವಿಯಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿ ಯಲ್ಲಿ ಅವರು ಮಾತನಾಡಿದರು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ, ರಾಜ್ಯ ಖಜಾಂಚಿಗಳಾದ ಸಿದ್ದಪ್ಪ ಕಾಂಬಳೆ ಅವರ ನೇತೃತ್ವದಲ್ಲಿ ಗೋಕಾಕ್ ತಾಲೂಕಿನ ಸೇವಾದಳದ ಕಚೇರಿಯಲ್ಲಿ ಡಿ.27 ಮತ್ತು 28 ರಂದು ಬೆಳಗಾವಿ ವಿಭಾಗಮಟ್ಟದ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನಿಜವಾದ ಇತಿಹಾಸವನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಡಾ|| ಬಾಬಾಸಾಹೇಬರ ಹೇಳಿದಂತೆ “ಇತಿಹಾಸವನ್ನು ಅರಿಯದವ ಇತಿಹಾಸವನ್ನು ನಿರ್ಮಿಸಲಾರ” ಎಂಬ ಮಾತಿನಂತೆ ಇತ್ತೀಚಿಗೂ ಕೂಡ ಸಾವಿರಾರು ವರ್ಷಗಳಿಂದ ಶೋಷಣೆಗೊಳಗಾದ ಅಲ್ಪಸಂಖ್ಯಾತ ಜನರಿಗೆ ಭಾರತದ ಗತ ವೈಭವದ ಇತಿಹಾಸದ ಜೊತೆ ಭಾರತ ದೇಶದ ಪಿಡುಗಾದ ಜಾತಿಯತೆಯನ್ನು ತೊಲಗಿಸಲು ಡಾ ಬಾಬಾಸಾಹೇಬ ಅಂಬೇಡ್ಕರರವರು ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ಸಮ ಸಮಾನತೆಯ ಸಮಾಜ ನಿರ್ಮಾಣಕ್ಕೆ ಸ್ವಲಖಿತ ಸಂವಿಧಾನ ನೀಡಿದರು. ಕೂಡ ಮತಾಂತರ ವಾದಿಗಳ ಕಪಿಮುಷ್ಠಿಯಲ್ಲಿ ಬಳಲುತ್ತಿರುವ ಬಹುಜನರಿಗೆ ನಿಜವಾದ ಇತಿಹಾಸವನ್ನು ಹೇಳುವುದರ ಮೂಲಕ ಸಮಾಜವನ್ನು ಜಾಗೃತಿ ಮಾಡಿದ್ದಾರೆ. ಅಂತಹ ವಿಷಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟಿಸಲಾಗುತ್ತಿದೆ ಎಂದರು.
ಡಿಸೆಂಬರ್ 27ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಅಧಿಕೃತವಾಗಿ ಚಾಲನೆ ದೊರೆಯಲಿದ್ದು, ರಾಜ್ಯ ಪ್ರಧಾನ ಸಂಚಾಲಕರಾದ ಮಾದಣ್ಣ ಶಂಕರ ಅವರು ಸಂಘಟನೆಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರಾದ ಸರಜೂ ಕಾಟಕರ ಅವರು ಆಗಮಿಸಲಿದ್ದಾರೆ. ಘನ ಅತಿಥಿಗಳಾಗಿ ರಾಜ್ಯ ಖಜಾಂಚಿ ಸಿದ್ದಪ್ಪ ಕಾಂಬಳೆ, ರಾಜ್ಯ ಸಮಿತಿ ಸದಸ್ಯ ಸಾಬಣ್ಣ ಬಡಿಗೇರ, ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳದ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ. ಬೆಳಗಾವಿ ವಿಭಾಗೀಯ ಸಂಚಾಲಕ ಸಂಜಯ ಕಂಬಾಗಿ, ಜಿಲ್ಲಾ ಸಂಘಟನಾ ಸಂಚಾಲಕ ನಾಗೇಶ ಕಾಮಶೆಟ್ಟಿ, ಸೇವಾದಳ ಮುಖ್ಯಸ್ಥ ರವಿ ನಾಯ್ಕರ ಹಾಗೂ ರಾಜ್ಯ ಸಮಿತಿ ಸದಸ್ಯ ಲಕ್ಷ್ಮಣ ದೊಡಮನಿ ಅವರ ನೇತೃತ್ವ ವಹಿಸಲಿದ್ದಾರೆ.
