ಬೆಳಗಾವಿ-14 : ಸಾಹಿತಿ ದಾನಮ್ಮ ಅಂಗಡಿ ರಚಿಸಿದ ‘ ಅಂಬೆಗಾಲು’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷೆ ಮಂಗಲಾ ಮೆಟಗುಡ್ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿ ಸಾಹಿತಿ ದಾನಮ್ಮ ಅಂಗಡಿ ಅಂಗನವಾಡಿ ಸಹಾಯಕಿಯಾಗಿ, ಮೇಲ್ವಿಚಾರಕಿಯಾಗಿ ವೃತ್ತಿಯಲ್ಲಿ ಪಡೆದ ನೈಜ ಅನುಭವಗಳ ಕುರಿತಾಗಿ ಎಲ್ಲಾ ಆಯಾಮಗಳನ್ನು ಒಳಗೊಂಡ ತಮ್ಮ ಕವನದ ಮೂಲಕ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದು ನಿಜಕ್ಕೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಕಾವ್ಯ ಲೋಕಕ್ಕೆ ಒಂದು ಹುರುಪು ಕೊಟ್ಟಂತಾಗಿದೆ. ತಾಯಿ,ತಂದೆ, ಪತಿ,ಮಗು,ಮೌಲ್ಯಯುತ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಕವನಗಳು ತುರ್ತಾಗಿ ಪ್ರಸ್ತುತ ಮೌಲ್ಯ ಕಳೆದುಕೊಳ್ಳುತ್ತಿರುವ ಸಮಾಜಕ್ಕೆ ಬೇಕಾಗಿವೆ. ಸಾಹಿತ್ಯ ಪರಿಷತ್ ವತಿಯಿಂದಲೂ ಇಂತಹ ಸಾಹಿತಿಗಳ ಕೃಷಿಯನ್ನು ಮುಂದುವರಿಸಿಕೊಂಡು ಹೋಗಲು ಸದಾ ಸಹಕಾರ ನೀಡುತ್ತದೆ. ವಿಶೇಷವಾಗಿ ಸಂದೇಶಗಳ ಕೃತಿಗಳು ಹೊರಬರಲಿ ಎಂದರು. ಇದೇ ಸಂದರ್ಭದಲ್ಲಿ ಸಾಹಿತಿ ದಾನಮ್ಮ ಅಂಗಡಿಯವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯ ಸಾಹಿತಿಗಳಾದ ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ನೀಲಗಂಗಾ ಚರಂತಿಮಠ ಕಾವ್ಯ ಲೋಕದ ಕುರಿತಾದ ತಮ್ಮ ಅನುಭವಗಳನ್ನು ಮತ್ತು ಯುವ ಪ್ರತಿಭೆಗಳಿಗೆ ಮಾರ್ಗದರ್ಶನದ ಮಾತುಗಳನ್ನು ಹೇಳಿದರು. ಕಾರ್ಯಕ್ರಮದಲ್ಲಿ ಕ. ಸಾ.ಪ ಬೆಳಗಾವಿ ತಾಲೂಕು ಅಧ್ಯಕ್ಷ ಸುರೇಶ ಹಂಜಿ, ಸ.ರಾ. ಸುಳಕೂಡೆ, ಭಾರತಿ ಮಠದ,ಸುಶೀಲಾ ಗುರುವ, ಆರ್ ಬಿ ಬನಶಂಕರಿ,ಬಿ ಬಿ ಮಠಪತಿ, ನಿತಿನ ಮೆಣಸಿನಕಾಯಿ, ರಾಜನಂದ ಗಾರ್ಗಿ, ಗಂಗಮ್ಮ ಪಾಟೀಲ, ಮಹಾದೇವಿ ಪಾಟೀಲ, ಅನ್ನಪೂರ್ಣ ಕನೋಜ, ಬಾಳಗೌಡ ದೊಡಬಂಗಿ, ಸೇರಿದಂತೆ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾರ್ಯದರ್ಶಿ ವೀರಭದ್ರ ಅಂಗಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಎಂ ವೈ ಮೆಣಸಿನಕಾಯಿ ಕೃತಿಕಾರರನ್ನು ಪರಿಚಯಿಸಿದರು ಮಲ್ಲಿಕಾರ್ಜುನ ಕೋಳಿ ನಿರೂಪಿಸಿದರು,ಶಿವಾನಂದ ತಲ್ಲೂರ ವಂದಿಸಿದರು.
