ಮೂಡಲಗಿ-02: ಮಾತು ತಪ್ಪಿದ ಕಾಂಗ್ರೇಸ್ ಸರ್ಕಾರದ ರೈತ ವಿರೋಧಿ, ಜನ ವಿರೋಧಿ ನೀತಿಯನ್ನು ಖಂಡಿಸಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ವಿಧಾನಸಭೆ ಚಳಿಗಾಲ ಅಧಿವೇಶನದ ಮೊದಲ ದಿನವಾದ ಡಿ.8 ರಂದು ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಪಾದಯಾತ್ರೆ ಮುಖಾಂತರ ಆಗಮಿಸಿ ಮುತ್ತಿಗೆ ಹಾಕುವ ಬೃಹತ್ ಪ್ರತಿಭಟನಾ ಹೋರಾಟ ನಡೆಯಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ದೆಹಲಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ರಾಜ್ಯದ ರೈತರು, ಕೃಷಿ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ಅವರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ ಮುಖ್ಯಮಂತ್ರಿ ಕುರ್ಚಿ ಕಿತ್ತಾಟದಲ್ಲಿಯೇ ಕಾಲಹರಣ ಮಾಡುತ್ತಿದೆ ಮತ್ತು ನುಡಿದಂತೆ ನಡೆದಿದ್ದೇವೆ ಎಂಬ ಜಾಹಿರಾತು ನೀಡುವ ಮೂಲಕ ತನ್ನ ಹುಳುಕುಗಳನ್ನು ಮರೆಮಾಚಲು ಹೊರಟಿದೆ. ಹೀಗಾಗಿ ಮಾತು ತಪ್ಪಿದ ಕಾಂಗ್ರೇಸ್ ಸರ್ಕಾರದ ರೈತ ವಿರೋಧಿ ಧೋರಣೆ ವಿರುದ್ದ ಬೆಳಗಾವಿಯ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಬಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಅತಿ ವೃಷ್ಠಿ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ನೆರೆ ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ನವರು ಭರವಸೆ ನೀಡಿ ತಿಂಗಳು ಕಳೆದರೂ ಇದುವರೆಗೂ ನಯಾಪೈಸೆ ಸಂತ್ರಸ್ತರ ರೈತರಿಗೆ ಪರಿಹಾರ ನೀಡಿಲ್ಲ. ಈರುಳ್ಳಿ, ಮೆಕ್ಕೆಜೋಳ, ಸೋಯಾಬೀನ್ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಒಳಗಾಗಿದ್ದರೂ ರಾಜ್ಯ ಸರಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭ ಮಾಡದೇ ಕಾಲಹರಣ ಮಾಡುತ್ತಿರುವ ನಿಮ್ಮ ರೈತ ವಿರೋಧಿ ಧೋರಣೆಯನ್ನು ವಿರೋದಿಸುವುದಕ್ಕಾಗಿ ಹೋರಾಟ ಎಂದರು.
ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ಲೀಟರ್ ಹಾಲಿಗೆ 7 ರೂ ಪ್ರೋತ್ಸಾಹಧನ ನೀಡುವುದಾಗಿ ಹೇಳಿತ್ತು. ಅದನ್ನು ಇನ್ನೂ ಇಡೇರಿಸಿಲ್ಲ. ಬದಲಾಗಿ ಈ ಹಿಂದೆ ಇರುವ ಪ್ರತಿ ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹ ಧನವನ್ನು ಕಳೆದ 5 ತಿಂಗಳಿಂದ ಸುಮಾರು 620 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ ರೈತರನ್ನು ಸಂಕಷ್ಟಕ್ಕೆದೂಡಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದ ರೈತರಿಗೆ 3 ಲಕ್ಷದ ವರೆಗಿನ ಬೆಳೆ ಸಾಲಕ್ಕೆ ಶೂನ್ಯ ಬಡ್ಡಿದರ ಯೋಜನೆಯನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸುವುದಾಗಿ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಇಡೇರಿಸಲಾಗಿಲ್ಲ, ಸ್ತ್ರೀಶಕ್ತಿ ಸಂಘಕ್ಕೆ ಶೂನ್ಯ ಬಡ್ಡಿ ಸಾಲ ನೀಡುವ ನಿಮ್ಮ ಪ್ರಣಾಳಿಕೆ ಮಾತನ್ನು ಈಡೇರಿಸದೇ ಮಾತು ತಪ್ಪಿದ ಸರ್ಕಾರ ನಿಮ್ಮದಾಗಿದೆ. ರೈತರ ಪಂಪಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪೂರೈಸುವ ಟ್ರಾನ್ಸ್ ಫಾರ್ಮರ ಮಂಜೂರು ಮಾಡುವಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿರುವ ನಿಮ್ಮ ರೈತ ವಿರೊಧಿ ಧೋರಣೆಯನ್ನು ಕೈ ಬಿಡಲು ಒತ್ತಾಯಿಸಿ ಈ ಹೋರಾಟ ಎಂದರು.
ಈ ಎಲ್ಲಾ ವಿಷಯಗಳಲ್ಲಿ ಸರ್ಕಾರ ವಿಫಲವಾಗಿದೆ ಮತ್ತು ಚುನಾವಣೆಯಲ್ಲಿ ತಾನು ನೀಡಿದ ಭರವಸೆಗಳನ್ನು ಇಡೇರಿಸಲಾಗಿಲ್ಲ ಮುಖ್ಯಮಂತ್ರಿ ಕುರ್ಚಿ ಗುದ್ದಾಟದಲ್ಲಿ ಕಾಲಹರಣ ಮಾಡಿ ರಾಜ್ಯದ ರೈತರಿಗೆ ಅನ್ಯಾಯವಾಗಿದೆ. ಇಂತಹ ರೈತ ವಿರೋಧಿ, ಜನವಿರೋಧಿ ಸರ್ಕಾರವನ್ನು ಕಿತ್ತೊಗಿಯಲಿಕ್ಕೆ ರಾಜ್ಯದ ರೈತರೊಂದಿಗೆ ವಿಧಾನಸಭಾ ಅಧಿವೇಶನ ಪ್ರಾರಂಭವಾಗುವ ಮೊದಲ ದಿನ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಸರ್ಕಾರಕ್ಕೆ ಹೊರಾಟ ಬಿಸಿ ಮುಟ್ಟಿಸಲಾಗುವುದು ರಾಜ್ಯದ ರೈತರು ಅದರಲ್ಲೂ ವಿಶೇಷವಾಗಿ ಬೆಳಗಾವಿ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಸಂಸದ ಈರಣ್ಣ ಕಡಾಡಿ ಕರೆ ನೀಡಿದ್ದಾರೆ.
