ಬೆಳಗಾವಿ-02: 70 ನೇ ಕರ್ನಾಟಕ ರಾಜ್ಯೋತ್ಸವದ ಆಚರಣೆಗೆ ಕುಂದಾನಗರಿ ಬೆಳಗಾವಿಗೆ ಜನಸಾಗರವೇ ಹರಿದು ಬಂದಿತು.
ನಗರದ ಚನ್ನಮ್ಮ ವೃತ್ತದಿಂದ ಪ್ರಾರಂಭಗೊಂಡ ರಾಜ್ಯೋತ್ಸವದ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳ ಉದ್ದಕ್ಕೂ ಜನಸಾಗರದಿಂದ ತುಂಬಿ ತುಳುಕಿತು.
ನಗರಾಧ್ಯಂತ ಎತ್ತ ನೋಡಿದರೂ ಜನವೋ ಜನ, ಕಿವಿಗಡಚಿಕ್ಕುವ ಸಂಗೀತದ ಅಬ್ಬರ, ಹಳದಿ– ಕೆಂಪು ಬಾವುಟಗಳ ಹಾರಾಟ, ಶಲ್ಯಗಳ ತೂರಾಟ, ಸಂಗೀತಕ್ಕೆ ನಿರಂತರ ನರ್ತನ ನಿರಂತರವಾಗಿ ಮಾಡಿ ಸಂಭ್ರಮಿಸಿದ ಕನ್ನಡ ಅಭಿಮಾನಿಗಳು. ಪುಟಾಣಿ ಮಕ್ಕಳಿಂದ ಹಿಡಿದು, ಯುವತಿಯರು, ಯುವಕರು, ಮಹಿಳೆಯರು, ಹಿರಿಯರು ಕೂಡ ನಾಡಗೀತೆ, ರಂಗಗೀತೆ, ಜನಪದ ಹಾಡು, ಸಿನಿಗೀತೆಗಳಿಗೆ ಹೆಜ್ಜೆ ಹಾಕಿದರು.
ಕನ್ನಡಾಭಿಮಾನ ಎತ್ತಿ ತೋರಿದ ಅಭಿಮಾನಿಗಳು ಹಳದಿ, ಕೆಂಪು ಬಣ್ಣದಿಂದ ಕರ್ನಾಟಕದ ಚಿತ್ರವನ್ನು ಅಭಿಮಾನಿಗಳು ತಮ್ಮ ಕೆನ್ನೆಯ ಮೇಲೆ ರಾಜ್ಯ ಲಾಂಛನದ ಚಿತ್ರ ಚಿತ್ರಿಸಿಕೊಂಡ ಯುವ ಜನತೆ ಸಂಭ್ರಮಿಸಿದರು. ಹೀಗೆ ಬಣ್ಣ ಹಚ್ಚುವವರು, ಶಾಲು ಮಾರುವವರು ಅಲ್ಲಲ್ಲಿ ನಿಂತು ಭರ್ಜರಿ ವ್ಯಾಪಾರ ನಡೆಸಿದ್ದು ಕಂಡು ಬಂತು. ಅಲ್ಲದೇ ವಿವಿಧ ಕಲಾವಿದರು ಕನ್ನಡ ನಾಡ ಗೀತೆಗಳನ್ನು ಆರ್ಕೆಸ್ಟ್ರಾ ಹಿನ್ನೆಲೆಯಲ್ಲಿ ಹಾಡಿ ಉತ್ಸಾಹ ತುಂಬಿದರು. ರಾಜ್ಯೋತ್ಸವ ಮೆರವಣಿಗೆ ಚನ್ಮಮ್ಮ ವೃತ್ತ ಕೇಂದ್ರತವಾಗಿದ್ದರೂ ಇಡೀ ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಕನ್ನಡ ಧ್ವಜ ಹಿಡಿದು ಯುವಕರು ಕನ್ನಡದ ಪ್ರೇಮ ಮೆರೆದರು.
ರಾಜ್ಯೋತ್ಸವ ಮೆರವಣಿಗೆಯಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನತೆಯು ಭಾಗಿಯಾಗಿದ್ದರು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನಸಂಖ್ಯೆ ಸೇರಿಸುವ ನಿರೀಕ್ಷೆಯಲ್ಲಿದ್ದ ಕನ್ನಡ ಪರ ಸಂಘಟನೆಗಳು. ಶುಕ್ರವಾರ ರಾತ್ರಿ ಹಾಗೂ ಶನಿವಾರ ಬೆಳಗಿನ ಜಾವ ಜಿಟಿಜಿಟಿ ಮಳೆಯಾಗಿರುವುದರಿಂದ, ಕನ್ನಡ ಅಭಿಮಾನಿಗಳಿಗೆ ಸ್ವಲ್ಪಮಟ್ಟಿಗೆ ನಿರಾಶೆಯನ್ನು ತಂದಿದ್ದು.
ಸಂಜೆಯ ವೇಳೆ ರಾಜೋತ್ಸವದ ಮೆರವಣಿಗೆಯಲ್ಲಿ ಜನ ಸಾಗರವೇ ಹರಿದು ಬಂದು ಕುಣಿದು ಕುಪ್ಪಳಿಸಿ ಇಡೀ ರಾಜ್ಯವೇ ಬೆಳಗಾವಿ ಯತ್ತ ನೋಡುವಂತೆ ಮಾಡಿದೆ.
