ಕಲಬುರಗಿ-01 ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ನಿಮಿತ್ಯ ಸಂವಿಧಾನ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯದ್ಯಾಂತ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾವು ಇದೇ ಫೆಬ್ರವರಿ 2 ರಿಂದ 10ರ ವರೆಗೆ ಆಳಂದ ತಾಲೂಕಿನಲ್ಲಿ ಸಂಚರಿಸಲಿದ್ದು, ಭವ್ಯ ಸ್ವಾಗತ ನೀಡಬೇಕು ಎಂದು ತಹಶೀಲ್ದಾರ ಯಲಪ್ಪ ಸುಬೇದಾರ ತಿಳಿಸಿದ್ದಾರೆ.
ಈ ಸಂಬಂಧ ಇತ್ತೇಚೆಗೆ ತಾಲೂಕಾ ಆಡಳಿತದಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಸಂವಿಧಾನ ಜಾಗೃತಿ ಜಾಥಾವು ತಾಲೂಕಿನಲ್ಲಿ ಯಶಸ್ವಿಯಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೀಡಲಾದ ಜವಾಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಿದರು.
ಒಂಭತ್ತು ದಿನಗಳ ಕಾಲ ಆಳಂದ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮ ಪಂಚಾಯತ್ ನಲ್ಲಿ ಸಂಚರಿಸಲಿರುವ ಜಾಗೃತಿ ಜಾಥಾವು ಸಂವಿಧಾನದ ಪೀಠಿಕೆ ವಾಚನ, ಪೀಠಿಕೆ ಪ್ರತಿಜ್ಞೆ ಬೋಧನೆ, ಸಂವಿಧಾನದ ಮೂಲಾಶಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ. ಅಲ್ಲದೆ ಶಾಲಾ-ಮಕ್ಕಳಿಗೆ ಸಂವಿಧಾನ ಕುರಿತು ಆಯೋಜಿಸಿದ ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಗುತ್ತದೆ. ಗ್ರಾಮದಲ್ಲಿ ತಜ್ಞರಿಂದ ಉಪನ್ಯಾಸ ನಡೆಯಲಿದೆ ಎಂದರು.
ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ-ಕಾಲೇಜು ಮಕ್ಕಳು, ನೌಕರರು, ಸಾರ್ವಜನಿಕರು, ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ಅವರು ತಾಲುಕಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ ಗೋಳಾ ಸೇರಿದಂತೆ ಇತರೆ ಅಧಿಕಾರಿಗಳು, ಮುಖಂಡರು ಉಪಸ್ಥಿತಿರಿದ್ದರು.