23/12/2024
IMG-20240201-WA0000

ಬೆಳಗಾವಿ-01: ಶ್ರೀ ನಿಜಶರಣ ಅಂಬಿಗರ ಚೌಡಯ್ಯ ನವರ 904ನೇ ಜಯಂತಿ ನಿಮಿತ್ತ ಫೆ. 4ರಂದು ಬೆಳಗಾವಿಯ ಸರ್ದಾ‌ರ್ ಮೈದಾನದಲ್ಲಿ ಬೃಹತ್ ಜನಜಾಗೃತಿ ಸ್ವಾಭಿಮಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೋಳಿ-ಬೆಸ್ತ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ. ಸಾಯಿಬಣ್ಣ ತಳವಾರ ಹೇಳಿದರು.

ನಗರದ ಸುದ್ದಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 4ರಂದು ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುಲ ಬಾಂಧವರ ಸಹಯೋಗದೊಂದಿಗೆ ನಿಜಶರಣ ಅಂಬಿಗರ ಚೌಡಯ್ಯ ಅವರ 904 ನೇ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಈ ಜಯಂತಿಯನ್ನು ಬೃಹತ್ ಜನಜಾಗೃತಿ ಸ್ವಾಭಿಮಾನ ಸಮಾವೇಶವನ್ನಾಗಿ ಆಚರಿಸಲು ಕರೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಜ. 21ರಂದೇ ಜಯಂತಿಯನ್ನು ಆಚರಿಸಿದ್ದಾರೆ. ಆದರೆ ಫೆ. 4ಕ್ಕೆ ಏಕೆ ಈ ಜಯಂತಿ ಆಚರಣೆ ಎಂದರೆ ಛತ್ರಪತಿ ಶಿವಾಜಿ ಮಹಾರಾಜರ ಆತ್ಮೀಯ ವೀರ ಧೀರ ಕೋಳಿ ಸಮಾಜದ ಹೆಮ್ಮಯ ಪುತ್ರ ಹಾಗೂ ಶಿವಾಜಿ ಮಹಾರಾಜರ ಸೇನೆಯ ಸಿಂಹ ಎಂದೆ ಗುರ್ತಿಸಿಕೊಂಡ ತಾನಾಜಿ ಮಾಲಸೂರೆ ಅವರು ಮೊಘಲರ ಸೈನ್ಯದೊಂದಿಗೆ ಹೋರಾಡಿ ಮಡಿದ ದಿನವಾಗಿದ್ದರಿಂದ ಅವರ ಪುಣ್ಯ ದಿನವಾದ ಫೆ. 4ಕ್ಕೆಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಅಲ್ಲದೇ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೋಳಿ – ಬೆಸ್ತ ಸಮಾಜ ಬಾಂಧವರಿದ್ದರೂ ಅಸಂಘಟಿತವಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಸಂಘ ಬಲಗೊಳ್ಳಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಒತ್ತಾಯ: ಕೋಳಿ, ಟೋಕರಿ ಕೋಲಿ, ಕಬ್ಬಲಿಗ, ಗಂಗಾತಮ, ಬೆಸ್ತ ಸಮಾಜವು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಾಜದ ಕೆಲವು ಪರ್ಯಾಯ ಪದಗಳು ಪರಿಶಿಷ್ಟ ಪಂಗಡದಲ್ಲಿದ್ದು, ಇವುಗಳಿಂದ ಬಿಟ್ಟು ಹೋದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಗಂಗಾಮತಗಳನ್ನೂ ಕರ್ನಾಟಕದಲ್ಲಿರುವ ಕೋಲಿ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಬೆಳಗಾವಿಯಲ್ಲಿ ನಡೆಯುವ ಬೃಹತ್ ಜನಜಾಗೃತಿ ಸ್ವಾಭಿಮಾನ ಸಮಾವೇಶದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿ: ಅಂದು ಬೆಳಗ್ಗೆ 8 ಗಂಟೆಗೆ ಎರಡು ಸಾವಿರ ಶರಣೆಯರಿಂದ ಕುಂಭ ಮೇಳ, ಕಿಲ್ಲಾ ಕೆರೆಯಿಂದ ಸರ್ದಾರ್ ಮೈದಾನದ ವರೆಗೆ ಬೃಹತ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಡೊಳ್ಳು, ಜಾಂಜಪದಕ, ಕಂಸಾಳೆ, ಆನೆ, ಒಂಟೆ ಕುದುರೆ ವಾದ್ಯ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಅಲ್ಲದೇ ಈ ಸಮಾವೇಶದಲ್ಲಿ ಉತ್ತರ ಕರ್ನಾಟಕ 35 ಸಾವಿರ ಜನ ಸೇರುವ ನಿರೀಕ್ಷೆ ಎಂದ ಅವರು, ಈ ಸಮಾವೇಶಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸಿಪಿಎಡ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಕೋಳಿ-ಬೆಸ್ತ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ ಕೋಳಿ-ಬೆಸ್ತ ಸಮಾಜ ಮುಖಂಡರಾದ ದಿಲೀಪ್ ಕುರಂದವಾಡೆ, ಅಮರೇಶ್ ಕಾಮನಕೇರಿ, ಬೆಳಗಾವಿ ಮಾಜಿ ಉಪ ಮಹಾಪೌರರು ಮದುಶ್ರೀ ಪೂಜಾರಿ, ಗಿರಿರಾಜ ಸಿರಗೆ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!