ಬೆಳಗಾವಿ-04: ರಾಜ್ಯಾದ್ಯಂತ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ದತ್ತಾಂಶವನ್ನು ಸಮರ್ಪಕವಾಗಿ ಪಡೆಯಲು ಹಾಗೂ ಜಾತಿ ಗಣತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಾಜ್ಯ ಸರಕಾರ ಇನ್ನು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಹನಮಂತ ಅಲ್ಕೋಡ್ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ನಗರದ ಶುಕ್ರವಾರ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಈ ಒತ್ತಾಯ ಮಾಡಿದ ಅವರು ಸದನದಲ್ಲಿ ಜಾತಿ ಗಣತಿ ಕುರಿತು ಮಾತನಾಡುವಾಗ ದತ್ತಾಂಶ ಬಂದಿಲ್ಲ ಎಂದು ಹೇಳುವ ಸರಕಾರ, ಒಳ ಮೀಸಲಾತಿ ಸಂಬಂಧ ಹೇಗೆ ನಿರ್ಧಾರ ಕೈಗೊಳ್ಳುತ್ತದೆ. ಜಾತಿ ಗಣತಿ ಪರಿಪೂರ್ಣವಾಗಬೇಕೆಂದರೆ ಹದಿನೈದು ದಿನ ಸಾಲುವುದಿಲ್ಲ. ಇದಕ್ಕೆ ಹೆಚ್ಚಿನ ಕಾಲಾವಕಾಶ ಬೇಕು. ಒಂದೊಂದು ಮನೆಯಲ್ಲಿ ಅಧಿಕಾರಿಗಳು ಎರಡೆರಡು ಗಂಟೆ ತೆಗೆದುಕೊಳ್ಳುತ್ತಿದ್ದಾರೆ ಅಂದ ಮಾತ್ರಕ್ಕೆ ಬರೀ ಹದಿನೈದು ದಿನಗಳಲ್ಲಿ ಹೇಗೆ ಜಾತಿ ಗಣತಿ ಪರಿಪೂರ್ಣವಾಗುತ್ತದೆ ಎಂದು ಪ್ರಶ್ನಿಸಿದರು.
ಜಾತಿ ಗಣತಿ ಸಂದರ್ಭದಲ್ಲಿ ಜನರ ದಿಕ್ಕು ತಪ್ಪಿಸುವ ಕೆಲಸಗಳು ಆದರೆ ಅಂತವರ ವಿರುದ್ಧ ಸೂಕ್ತ ಕ್ರಮವಾಗಬೇಕೆಂದು ಒತ್ತಾಯಿಸಿದ ಅವರು ತಮ್ಮ ಸಮುದಾಯದ ಜನರು ಧರ್ಮ ಹಾಗೂ ಜಾತಿ ಎರಡೂ ಕಾಲಂಗಳಲ್ಲಿ ಮಾದಿಗ ಎಂದು ನಮೂದಿಸಬೇಕೆಂದು ಮನವಿ ಮಾಡಿಕೊಂಡರು. ಮಾದಿಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು ನಮ್ಮ ಸಮಾಜದಲ್ಲಿ ಕೇವಲ ಏಳು ಜನ ಶಾಸಕರು ಇದ್ದಾರೆ. ಮುಂಬರುವ ದಿನಗಳಲ್ಲಿ ನಮ್ಮ ಸಮಾಜಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆ ಸ್ಪರ್ಧಿಸಲು ಅವಕಾಶ ದೊರೆಯಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಸುನೀತಾ ಐಹೋಳೆ, ಸುರೇಶ ಐಹೋಳೆ, ಡಾ. ಎನ್. ಪ್ರಶಾಂತರಾವ್, ಅಶೋಕ ದೊಡಮನಿ, ರಮೇಶ ರಾಯಪ್ಪಗೊಳ,ಉದಯ ರೆಡ್ಡಿ, ಅನಂತ ಬ್ಯಾಕೋಡ, ಮಹೇಶ ಐಹೋಳೆ ಉಪಸ್ಥಿತರಿದ್ದರು.
