ಕೌಜಲಗಿ-13 : ರಾಜ್ಯದಲ್ಲಿ ಈಗ ಸದ್ಯಕ್ಕೆ ಯಾವ ಹೊಸ ತಾಲ್ಲೂಕುಗಳನ್ನು ರಚನೆ ಮಾಡುತ್ತಿಲ್ಲವೆಂದು ಕಂದಾಯ ಸಚಿವರಾದ ಮಾನ್ಯ ಕೃಷ್ಣ ಬೈರೇಗೌಡ ಅವರು ಆಗಸ್ಟ್ 18 ರಂದು ಸದನದಲ್ಲಿ ಮಾತನಾಡಿದ್ದು, ಸರ್ಕಾರ ಬೆಳಗಾವಿ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೋಬಳಿ ಕೇಂದ್ರವಾದ ಕೌಜಲಗಿಯನ್ನು ನೂತನ ತಾಲ್ಲೂಕು ಎಂದು ಘೋಷಿಸಬೇಕೆಂದು ಕನ್ನಡ ಕೌಸ್ತುಭದ ಅಧ್ಯಕ್ಷ -ಸಾಹಿತಿ ಡಾ.ರಾಜು ಕಂಬಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಪಟ್ಟಣದಲ್ಲಿ ಬುಧವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ, ಕಂದಾಯ ಸಚಿವ ಕೃಷ್ಣಭೈರೇಗೌಡರಗೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರಗೆ ಹಾಗೂ ಬೆಳಗಾವಿ ಬೆಮ್ಯೂಲ್ ಅಧ್ಯಕ್ಷರು ಮತ್ತು ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ ಕಂಬಾರರು,ರಾಜ್ಯದಲ್ಲಿ ನೂತನ ತಾಲ್ಲೂಕುಗಳ ರಚನೆಯ ಕುರಿತು ಕಂದಾಯ ಸಚಿವರ ಚರ್ಚಿತ ವಿಷಯವನ್ನು ಗಮನಿಸಿ ಕಂಬಾರ ಅವರು, ಕೌಜಲಗಿ ತಾಲ್ಲೂಕು ರಚನೆ ಕುರಿತು ಬರೆದ ಪತ್ರದಲ್ಲಿ ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಡಿಸೆಂಬರ್ 31ರ ಒಳಗಾಗಿ ವಿಭಜಿಸುವ ಚಿಂತನೆ ನಡೆಸಬೇಕು. ಜೆ ಎಚ್ ಪಟೇಲರ ಸರ್ಕಾರ ಈ ಹಿಂದೆ ಗೆಜೆಟ್ ಹೊರಡಿಸಿರುವ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿಸಿ ಘೋಷಿಸಿತ್ತು. ಈಗಲೂ ತಮ್ಮ ಸರ್ಕಾರ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿಸಿ, ಬೆಳಗಾವಿ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಗೋಕಾಕ ತಾಲ್ಲೂಕಿನ ಹಾಗೂ ಅರಭಾವಿ ವಿಧಾನಸಭಾ ಮತಕ್ಷೇತ್ರದ ಪ್ರಮುಖ ಹೋಬಳಿ ಕೇಂದ್ರವಾದ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕಾಗಿ ರಚಿಸಬೇಕೆಂದರು.
ಮುಂದುವರೆದು, ಸದನದಲ್ಲಿ ಕಂದಾಯ ಸಚಿವರು ಹಿಂದಿನ 63 ನೂತನ ತಾಲ್ಲೂಕುಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಿದ ಮೇಲೆ ಹೊಸ ತಾಲ್ಲೂಕುಗಳ ಬಗ್ಗೆ ಗಮನಹರಿಸುವ ಕುರಿತು ಮಾತನಾಡಿದ್ದಾರೆ. ಸಚಿವರ ಕಳಕಳಿ ಮೆಚ್ಚುವಂಥದ್ದು, ಬೆಳಗಾವಿ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜಿಸುವುದು ಅಗತ್ಯವಾಗಿದೆ ಎಂಬುದು ಸರ್ಕಾರದ ಗಮನದಲ್ಲಿದೆ. ಈಗಾಗಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಸತೀಶ ಜಾರಕಿಹೊಳಿಯವರು ಗೋಕಾಕ ಮತ್ತು ಚಿಕ್ಕೋಡಿಯನ್ನು ನೂತನ ಜಿಲ್ಲೆಯನ್ನಾಗಿಸುವ ಅಗತ್ಯವಿದೆಯೆಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅತಿ ದೊಡ್ಡ ತಾಲ್ಲೂಕಾದ ಗೋಕಾಕನ್ನು ನೂತನ ಜಿಲ್ಲೆಯನ್ನಾಗಿಸುವ ಪೂರ್ವದಲ್ಲಿ ಗೋಕಾಕ ತಾಲ್ಲೂಕನ್ನು ವಿಭಜಿಸಿ, ಕೌಜಲಗಿ ನೂತನ ತಾಲ್ಲೂಕಾಗಿ ಘೋಷಿಸಬೇಕು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕೌಜಲಗಿ ನೂತನ ತಾಲ್ಲೂಕು ಕೇಂದ್ರವಾಗಿಸಲು ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ.
ಹಿಂದಿನ ಸರಕಾರಗಳು ಹೊಸ ತಾಲ್ಲೂಕುಗಳ ಘೋಷಣೆಯ ಸಂದರ್ಭದಲ್ಲಿ ಕೌಜಲಗಿಯು 44 ಗ್ರಾಮಗಳನ್ನು ಒಳಗೊಂಡ ಹೋಬಳಿ ಕೇಂದ್ರವಾಗಿದ್ದರೂ, ತಾಲ್ಲೂಕು ಪುನರ ವಿಂಗಡಣಾ ಸಮಿತಿಗಳು ಶಿಫಾರಸ್ಸು ಮಾಡಿದ್ದರೂ, ಕೌಜಲಗಿಯನ್ನು ತಾಲ್ಲೂಕು ಕೇಂದ್ರವೆಂದು ಘೋಷಿಸದೆ ಈ ಭಾಗದ ಜನತೆಗೆ ಅನ್ಯಾಯ ಮಾಡಿವೆ . 1973 ರಿಂದಲೂ ಕೌಜಲಗಿ ತಾಲ್ಲೂಕು ಕೇಂದ್ರಕ್ಕಾಗಿ ಹೋರಾಡುತ್ತಲೇ ಬಂದಿದೆ. ಈ ಹೋರಾಟಕ್ಕೆ ಈಗ 5 ದಶಕಗಳು ಗತಿಸಿವೆ. ಸತತ ಕೌಜಲಗಿ ಭಾಗ ಅನ್ಯಾಯಕ್ಕೆ ಒಳಗಾದ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದ ಅಭಿವೃದ್ಧಿಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೌಜಲಗಿ ಕೇಂದ್ರ ಸ್ಥಾನವನ್ನಾಗಿಸಿ ಸುತ್ತಲಿನ ಸುಮಾರು 50- 60 ಹಳ್ಳಿಗಳನ್ನು ಒಳಗೊಂಡು ಶೀಘ್ರದಲ್ಲಿಯೇ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ರಾಜ್ಯ ಸರ್ಕಾರ ಘೋಷಿಸಬೇಕೆಂದು ಮನವಿ ಮಾಡಿದ್ದಾಗಿ ರಾಜು ಕಂಬಾರರು ತಿಳಿಸಿದ್ದಾರೆ.
