ಬೆಳಗಾವಿ-29 : ಜಿಲ್ಲೆಯ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಹತ್ವದ ಸಭೆ ನಡೆದಿದ್ದು, ಸಮಸ್ಯೆಗಳಿಗೆ ಸಮಯಮಿತಿಯಲ್ಲಿ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ನಡೆದ ಸಭೆಯಲ್ಲಿ, ಕೈಗಾರಿಕಾ ಸ್ಪಂದನೆ (ಗ್ರಿವೆನ್ಸಿಸ್), ಏಕಗವಾಕ್ಷಿ, ಸಿಎಸ್ಆರ್ ಫಂಡ್, ಸ್ಕಿಲ್ ಡೆವಲಪ್ ಮೆಂಟ್, ಪಿಎಂ ವಿಶ್ವಕರ್ಮ ಯೋಜನೆ, ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಯೋಜನೆ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ವಿಶೇಷವಾಗಿ, ಕೈಗಾರಿಕೆ ಪ್ರದೇಶದ ಕುರಿತಂತೆ ಮಹಾನಗರ ಪಾಲಿಕೆಯ ನಿರ್ಲಕ್ಷ್ಯದ ಕುರಿತು ಸಭೆಯಲ್ಲಿ ತೀವ್ರ ಆಕ್ಷೇಪಗಳು ಕೇಳಿಬಂದವು.
ಪದೇ ಪದೆ ವಿದ್ಯುತ್ ವ್ಯತ್ಯಯವಾಗುವುದರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಕೈಗಾರಿಕೋದ್ಯಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಗಂಭೀರ ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, 2 ಫೀಡರ್ ಲೈನ್ ಬದಲಿಸುವಂತೆ ಮತ್ತು ಅಗತ್ಯವಾದ ಸ್ಥಳಗಳಲ್ಲಿ ಟಾರ್ನ್ಸ್ ಫಾರ್ಮರ್ ಅಳವಡಿಸುವಂತೆ ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು. ಬೀದಿ ದೀಪಗಳ ನಿರ್ವಹಣೆ ಸಹ ಸರಿಯಾಗಿ ಆಗುತ್ತಿಲ್ಲ ಎಂದು ದೂರಲಾಯಿತು. ಸೆಪ್ಟಂಬರ್ 15ಕ್ಕೆ ಪುನಃ ಸಭೆ ನಡೆಸಿ ಈ ಕುರಿತ ಪ್ರಗತಿ ಪರಿಶೀಲನೆ ಮಾಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಇ ಖಾತಾ ಸಮಸ್ಯೆಗಳ ಕುರಿತು ಸರಕಾರದ ಮಟ್ಟದಲ್ಲಿ ತುರ್ತಾಗಿ ಕ್ರಮವಾಗಬೇಕು. ಇದರಿಂದಾಗಿ ಕೈಗಾರಿಕೆಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿವೆ ಎನ್ನುವುದನ್ನು ಸಭೆಯ ಗಮನಕ್ಕೆ ತರಲಾಯಿತು. ಕೈಗಾರಿಕೆ ಪ್ರದೇಶದಲ್ಲಿ ಕಸ ವಿಲೇವಾರಿ ಸರಿಯಾಗಬೇಕು. ಎಲ್ಲೆಂದರಲ್ಲಿ ಕೊಳಚೆ ನೀರು ತುಂಬಿಕೊಂಡಿದ್ದು, ಚರಂಡಿಗಳ ಸ್ವಚ್ಛತೆ ಕುರಿತು ಗಮನ ಹರಿಸಬೇಕು ಎಂದು ಕೈಗಾರಿಕೋದ್ಯಮಗಳು ಆಗ್ರಹಿಸಿದರು.
ತೆರಿಗೆ ಪದ್ಧತಿ ಕುರಿತು ಮಹಾನಗರ ಪಾಲಿಕೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು, ಈ ಕುರಿತು ಇರುವ ನಿಯಮಗಳನ್ನು ಸ್ಪಷ್ಟಪಡಿಸಬೇಕು. ಟ್ರೇಡ್ ಲೈಸೆನ್ಸ್ ಕುರಿತಂತೆ ಪಾಲಿಕೆಯಿಂದ ಬಹಳಷ್ಟು ಗೊಂದಲ ಉಂಟಾಗುತ್ತಿದೆ ಎನ್ನುವುದನ್ನು ಗಮನಕ್ಕೆ ತರಲಾಯಿತು.
ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಸ್ಟಾಕ್ ಯಾರ್ಡ ಮತ್ತು ಕಣಬರ್ಗಿ ಇಂಡಸ್ಟ್ರಿಯಲ್ ಎಸ್ಟೇಟ್ ಹಸ್ತಾಂತರ ಪ್ರಕ್ರಿಯೆಯನ್ನು ತಕ್ಷಣ ಪೂರ್ಣಗೊಳಿಸಿ, ನಂತರ ತೆರಿಗೆ ಸಂಗ್ರಹಿಸುವಂತೆ ಸೂಚನೆ ನೀಡಲಾಯಿತು.
ಬೆಳಗಾವಿ ಉತ್ತರ ಭಾಗದಲ್ಲಿ ಅಗ್ನಿಶಾಮಕ ದಳ ಸ್ಥಾಪಿಸಲು ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಹೊನಗಾ ಕೈಗಾರಿಕಾ ಪ್ರದೇಶದಿಂದ ನೇರವಾಗಿ ಹೆದ್ದಾರಿಗೆ ವಾಹನ ಇಳಿಯಬೇಕಿರುವುದರಿಂದ ಅಪಘಾತಗಳು ಉಂಟಾಗುತ್ತಿವೆ. ಹಾಗಾಗಿ ಹಂಪ್ಸ್ ಹಾಕುವಂತೆ ಮತ್ತು ಸರ್ವೀಸ್ ರಸ್ತೆ ಮೂಲಕ ವಾಹನ ಹೆದ್ದಾರಿಗೆ ಬರುವಂತೆ ಮಾಡುವ ಕುರಿತು ಪರಿಶೀಲನೆ ನಡೆಸಲು ಪ್ರೊಬೇಶನರ್ ಐಎಎಸ್ ಅಧಿಕಾರಿ ಅಭಿನವ ಜೈನ್ ಅವರಿಗೆ ಸೂಚಿಸಲಾಯಿತು. ಕಣಗಲಾ ಇಂಡಸ್ಟ್ರಿಯಲ್ ಏರಿಯಾಕ್ಕೆ ಅಂಡರ್ ಪಾಸ್ ಮಾಡುವಂತೆ ತಿಳಿಸಲಾಯಿತು.
ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಎಲ್ಲ ಸಮಸ್ಯೆಗಳಿಗೂ ಕಾಲಮಿತಿಯಲ್ಲಿ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಸಾಮಾನ್ಯವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯನ್ನು ಕೈಗಾರಿಕೆಗಳಿರುವ ಪ್ರದೇಶದಲ್ಲೇ ನಡೆಸಿದ ಜಿಲ್ಲಾಧಿಕಾರಿಗಳ ಕ್ರಮಕ್ಕೆ ಮತ್ತು ಸಮಸ್ಯೆಗಳಿಗೆ ಗಂಭೀರ ಸ್ಪಂದನೆ ಮಾಡಿದ್ದಕ್ಕೆ ಚೆಂಬರ್ ಆಫ್ ಕಾಮರ್ಸ್ ಪರವಾಗಿ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಕೀಲ್ ಅಹ್ಮದ್, ಮಹಾನಗರ ಪಾಲಿಕೆ ಆಯುಕ್ತೆ ಶುಭಾ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿನಿರ್ದೇಶಕ ಸತ್ಯನಾರಾಯಣ ಭಟ್, ಪ್ರೊಬೇಶನರಿ ಐಎಎಸ್ ಅಧಿಕಾರಿ ಅಭಿನವ ಜೈನ, ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಇನ್ನಿತರ ವಿವಿಧ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು ಸೇರಿದಂತೆ, ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.
