ನಿಲಯಗಳ ವ್ಯವಸ್ಥೆ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದ ಸಚಿವರು
ಸಚಿವರಿಗೆ ವಿಶ್ ಮಾಡಿ ಖುಷಿ ಪಟ್ಟ ಚಿಣ್ಣರು
ಬೆಂಗಳೂರು-30: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಬುಧವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯದ (ಐಸಿಪಿಎಸ್) ಬಾಲಕರ ಬಾಲಮಂದಿರ ಹಾಗೂ ಯಶೋದರಮ್ಮ ದಾಸಪ್ಪ ರಾಜ್ಯ ಮಹಿಳಾ ನಿಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಲಕರ ಬಾಲ ಮಂದಿರದಲ್ಲಿ ವಿವಿಧ ರಾಜ್ಯಗಳಿಂದ 110 ಮಕ್ಕಳಿದ್ದು ಇಲಾಖೆ ವತಿಯಿಂದ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿದರು. ಮಹಿಳಾ ನಿಲಯ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೂ ಭೇಟಿ ನೀಡಿದ ಸಚಿವರು, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ, ಇಲಾಖೆಯಿಂದ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
* *ಚಿಣ್ಣರನ್ನು ಮುದ್ದಾಡಿದ ಸಚಿವರು*
ಬಳಿಕ ಸರ್ಕಾರಿ ಶಿಶು ಮಂದಿರಕ್ಕೂ ಭೇಟಿ ನೀಡಿದ ಸಚಿವರು, ಶಿಶುಗಳ ಪಾಲನೆ, ಪೋಷಣೆ ಹಾಗೂ ಪುಟಾಣಿಗಳ ಆರೈಕೆ ಕುರಿತು ಪರಿಶೀಲನೆ ನಡೆಸಿದರು.
ಆರು ವರ್ಷದ ಒಳಗಿನ 46 ಮಕ್ಕಳು ಕೇಂದ್ರದಲ್ಲಿದ್ದಾರೆ. ಶಿಶುಗಳ ಉತ್ತಮ ಆರೈಕೆಯು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅತ್ಯಗತ್ಯ ಎಂದು ಸಚಿವರು ಹೇಳಿದರು.
ಮಕ್ಕಳ ಪಾಲನೆ ಮಾಡುತ್ತಿರುವ ಸಿಬ್ಬಂದಿ ವರ್ಗದವರ ಕಾರ್ಯವೈಖರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಚಿಣ್ಣರನ್ನು ಎತ್ತಿಕೊಂಡು ಮುದ್ದಾಡಿದರು.
ಈ ವೇಳೆ ಇಲಾಖೆಯ ಕಾರ್ಯದರ್ಶಿ ಡಾ.ಶಾಮ್ಲಾ ಇಕ್ಬಾಲ್, ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಜಂಟಿ ನಿರ್ದೇಶಕರಾದ ಪುಷ್ಪ ರಾಯರ್, ಉಪ ನಿರ್ದೇಶಕರಾದ ಸುಮಂಗಲಾ ಮಳಾಪುರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
