18 Nov 2026, 12:25:43 AM|
Gold₹13521/gGold24K ₹13,521/g - 22K ₹12,383/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

2024ರ ಕಾಂಗ್ರೆಸ್ ಅಧಿವೇಶನದ ಸಂದೇಶ ಇಂದಿಗೂ ಪ್ರಸ್ತುತ: ಸಚಿವ ಎಚ್.ಕೆ.ಪಾಟೀಲ

ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ

 

ಬೆಳಗಾವಿ-೨೨: 2024ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.

ಬೆಳಗಾವಿಯಲ್ಲಿ ಭಾನುವಾರ ರಂಗಸೃಷ್ಟಿ ಮತ್ತು ಭಾಗವತರು ಸಂಘಟನೆ ಆಯೋಜಿಸಿದ್ದ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಂತಹ ಕಾಲಘಟ್ಟದಲ್ಲಿ ಮಹಾತ್ಮಾ ಗಾಂಧಿಯವರು ಅಧ್ಯಕ್ಷತೆ ವಹಿಸಿದ್ದರು? ಅವರು ಎಂತಹ ಸಂದೇಶ ನೀಡಿದರು ಎನ್ನುವುದನ್ನು ಅರಿತವರು ಈ ಕಾರ್ಯಕ್ರಮ ಒಪ್ಪಿ, ಅಪ್ಪಿಕೊಳ್ಳುತ್ತಾರೆ. ರಾಷ್ಟ್ರವನ್ನು ಹೇಗೆ ಕಟ್ಟಬೇಕು, ರಾಷ್ಟ್ರದಲ್ಲಿ ನಾವು ಹೇಗಿರಬೇಕು ಎನ್ನುವ ಜೊತೆಗೆ, ಜನರಲ್ಲಿ ಸಚ್ಚಾರಿತ್ರ್ಯ ಮೂಡಿಸಬೇಕು ಎನ್ನುವ ಸಂದೇಶ ಹೊರಗೆ ಬರುವಂತೆ ಅಧಿವೇಶನ ನಡೆಯಿತು. ಅಸ್ಪೃಶ್ಯತೆ ತೊಡೆಯುವುದನ್ನೇ ಮೂಲಮಂತ್ರವಾಗಿಸಿಕೊಂಡು ಅಧಿವೇಶನ ನಡೆಸಲಾಯಿತು. ಬ್ರಾತೃತ್ವ ಭಾವನೆಯನ್ನು ಮೂಡಿಸಿ ಎಲ್ಲರನ್ನೂ ಸ್ವಾತಂತ್ರ್ಯ ಚಳವಳಿಯಲ್ಲಿ ಜೋಡಿಸಿಕೊಂಡು ರಾಷ್ಟ್ರೀಯ ಚಳವಳಿಯಲ್ಲಿ ಒಗ್ಗೂಡಿಸಿದ ಅಧಿವೇಶನ ಇದಾಗಿತ್ತು ಎಂದು ಎಚ್.ಕೆ.ಪಾಟೀಲ ಹೇಳಿದರು.

ಚರಕ ಸ್ವಾವಲಂಬಿಯ ಸಂಕೇತ. ಅದರ ಮೂಲಕ ಚಳವಳಿ ಆರಂಭಿಸಿದ್ದು ಬೆಳಗಾವಿ ಅಧಿವೇಶನ. ಸೇವಾದಳದ ಕಲ್ಪನೆ ಮೂಡಿಸಿ ಅದರ ಆರಂಭಕ್ಕೆ ಕಾರಣವಾಗಿದ್ದು ಈ ಅಧಿವೇಶನ. ಕರ್ನಾಟಕದ ಕಲ್ಪನೆ ಸಮರ್ಪಕವಾಗಿ ಬಂದಿದ್ದೇ ಬೆಳಗಾವಿ ಅಧಿವೇಶನದ ಮೂಲಕ. ಕರ್ನಾಟಕದ ಕಲ್ಪನೆ
ಬೀಜಾಂಕುರವಾಗಿದ್ದೇ ಬೆಳಗಾವಿ ಅಧಿವೇಶನದಲ್ಲಿ. ಇಲ್ಲಿ ಹಾಡಿದ ಉದಯವಾಗಲಿ ಚೆಲುವ ಕನ್ನಡನಾಡು ಗೀತೆ ಎಲ್ಲರನ್ನೂ ಒಗ್ಗೂಡಿಸಿತು ಎಂದು ಅವರು ಹೇಳಿದರು.

ಸರಕಾರದಿಂದ ವರ್ಷವಿಡೀ ಗಾಂಧಿ ಭಾರತ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರ ಮೂಲಕ ಗಾಂಧಿ ಅನುಯಾಯಿಗಳಲ್ಲಿ ಬಲ ತುಂಬುವಂತಹ ಕೆಲಸ, ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಗಾಂಧಿ ಪುತ್ಥಳಿ ಪ್ರತಿಷ್ಠಾಪನೆ, ಖಾದಿ ಪ್ರದರ್ಶನ, ಸಾರ್ವಜನಿಕ ಸಮಾವೇಶ ಮೊದಲಾದವು ನಡೆಯಲಿವೆ. ಜನರನ್ನು ಒಂದಿಲ್ಲೊಂದು ರೀತಿಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ. ಆದರೆ ಸರಕಾರದ ಕಾರ್ಯಕ್ರಮಕ್ಕಿಂತ ಮಹತ್ವದ ಕಾರ್ಯಕ್ರಮ ಇಂದಿನ ಈ ಕಾರ್ಯಕ್ರಮ ಎಂದು ಎಚ್.ಕೆ.ಪಾಟೀಲ ಹೇಳಿದರು.
ಇತಿಹಾಸವನ್ನು ಪುನಃ ಪುನಃ ತಿಳಿಸುತ್ತಿರಬೇಕು. ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಂಡವರ ಕುರಿತು ತಿಳಿದುಕೊಳ್ಳಬೇಕು. ಅಂದಿನ ಮೌಲ್ಯ, ಆರ್ಥಿಕ ಶಿಸ್ತು ಇಂದಿಗೂ ಪ್ರಸ್ತುತ. ಸಾರ್ವಜನಿಕ ಕೆಲಸಗಳ ಮಾದರಿ ಬದಲಾಗಿರುವ ಇಂದಿನ ಸಂದರ್ಭದಲ್ಲಿ ಬಹಳ ಪ್ರಸ್ತುತ. ರಂಗಸೃಷ್ಟಿ ಮತ್ತು ಭಾಗವತರು ಎರಡೂ ಸಂಸ್ಥೆಯ ಕಾರ್ಯಕ್ಕೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ. ಅಂದಿನ ಅಧಿವೇಶನ ನೆನಪು ಮಾಡಿಕೊಂಡು ಸ್ವಯಂ ಪ್ರೇರಿತರಾಗಿ ಈ ಕಾರ್ಯಕ್ರಮ ಆಯೋಜನೆ ಮೆಚ್ಚುವಂತದ್ದು. ಸರಕಾರ ಲಕ್ಷಾಂತರ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಬಹುದು. ಆದರೆ ಅದಕ್ಕಿಂತ ಮೊದಲು ಈ ಕಾರ್ಯಕ್ರಮ ದಾಖಲಾಗುತ್ತದೆ. ಈ ಕಾರ್ಯಕ್ರಮ ಶತಮಾನೋತ್ಸವಕ್ಕೆ ವಿಶೇಷ ಮೆರಗು ತಂದಿದೆ ಎಂದು ಶ್ಲಾಘಿಸಿದರು.
ನಾಟಕಗಳ ಮೂಲಕ ಇಲ್ಲಿ ಜಾಗೃತಿ ಮಾಡುತ್ತಿದ್ದೀರಿ. ಬರುವ ಒಂದು ವರ್ಷದಲ್ಲಿ 40-50 ಪ್ರಯೋಗ ಮಾಡಿದರೆ ಬಹಳ ದೊಡ್ಡ ಬದಲಾವಣೆ ಸಾಧ್ಯ. ಸರಕಾರದ ಸಹಾಯ ನಿರೀಕ್ಷಿಸದೆ, ಸ್ವಾಭಿಮಾನದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕಾಗಿ ಮತ್ತೊಮ್ಮೆ ಸಂಘಟಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಚಿವರು ಹೇಳಿದರು.

ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಗಾಂಧೀಜಿಯವರು ಎಂದರೆ ಸತ್ಯ, ನ್ಯಾಯ, ಪ್ರಾಮಾಣಿಕತೆ. ಹಾಗಾಗಿಯೇ ಶತಮಾನಗಳ ಕಾಲ ಅವರನ್ನು ಸ್ಮರಿಸುತ್ತೇವೆ. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರಲಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಈ ಕಾರ್ಯಕ್ರಮ ಮುನ್ನುಡಿಯಾಗಲಿ. ಹೊಸ ಆಶಾಭಾವನೆಯೊಂದಿಗೆ ನಾವು ಬದುಕೋಣ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ಅವರು ಡಾ.ರಾಮಕೃಷ್ಣ ಮರಾಠೆ ಅವರ ರಂಗಭೂಮಿಯ ಸ್ವಾತಂತ್ರ್ಯ ಸಂಗ್ರಾಮ ಪುಸ್ತಕ ಬಿಡುಗಡೆ ಮಾಡಿದರು.
ಬೆಳಗಾವಿ ಸಮ್ಮೇಳನ ಕುವೆಂಪು ಅವರಿಗೆ ಜಯ ಭಾರತ ಜನನಿಯ ತನುಜಾತೆ ಹಾಡು ಬರೆಯಲು ಪ್ರೇರಣೆಯಾಯಿತು. ಇದೇ ಅಧಿವೇಶನದಲ್ಲಿ ಕರ್ನಾಟಕ ಏಕೀಕರಣದ ಬೀಜಾಂಕುರವಾಯಿತು. ವಿವಿಧೆಡೆಯಿಂದ ಬಂದವರೆಲ್ಲ ಅವರವರ ಭಾಷೆಯಲ್ಲೇ ಮಾತನಾಡುವ ಮೂಲಕ ಭಾಷೆ ಬೇರೆಯಾದರೂ ನಮ್ಮೆಲ್ಲರ ಭಾವನೆ ಒಂದೇ ಎನ್ನುವ ಸಂದೇಶ ನೀಡಿತು ಎಂದು ಸರಜೂ ಕಾಟ್ಕರ್ ಹೇಳಿದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್, ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ, ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ.ಹೆಗಡೆ, ರಂಗಸೃಷ್ಟಿಯ ಸದಸ್ಯರಾದ ಡಾ.ರಾಮಕೃಷ್ಣ ಮರಾಠೆ, ಶಿರೀಶ ಜೋಶಿ, ಶಾಂತಾ ಆಚಾರ್ಯ, ಕೆಂಪಣ್ಣ, ಬಸವರಾಜ ಗಾರ್ಗಿ, ಶರಣಗೌಡ ಪಾಟೀಲ ಮೊದಲಾದವರಿದ್ದರು. ಡಾ.ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಶಿವಲಿಂಗ ಪ್ರಸಾದ ಅವರು ನಿರೂಪಿಸಿದರು. ಶರಣಯ್ಯ ಮಠಪತಿ ವಂದಿಸಿದರು.

ನಂತರ ಸಂಜೆಯವರೆಗೆ ವಿಚಾರಗೋಷ್ಠಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರಿಗೆ ರಂಗಗೌರವ, ಶಿರೀಶ ಜೋಶಿ ಅವರು ಬರೆದ ನಾಟಕ ಪ್ರಿಂಟಿಂಗ್ ಮಶಿನ್ ಪ್ರದರ್ಶನ ಮೊದಲಾದವು ನಡೆದವು.
------

ಫೋಟೋ ಕ್ಯಾಪ್ಶನ್: ಬೆಳಗಾವಿಯಲ್ಲಿ ಭಾನುವಾರ ರಂಗಸೃಷ್ಟಿ ಮತ್ತು ಭಾಗವತರು ಸಂಘಟನೆ ಆಯೋಜಿಸಿದ್ದ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸಿದರು. ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮಿಗಳು, ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್, ಭಾಗವತರು ಸಂಸ್ಥೆಯ ಅಧ್ಯಕ್ಷ ಕೆ.ರೇವಣ್ಣ, ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ.ಹೆಗಡೆ, ರಂಗಸೃಷ್ಟಿಯ ಸದಸ್ಯರಾದ ಡಾ.ರಾಮಕೃಷ್ಣ ಮರಾಠೆ, ಶಿರೀಶ ಜೋಶಿ, ಶಾಂತಾ ಆಚಾರ್ಯ, ಕೆಂಪಣ್ಣ, ಬಸವರಾಜ ಗಾರ್ಗಿ, ಶರಣಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಾನ ಸಮ್ಮಾನ’ ಸಂಗೀತ, ಸನ್ಮಾನ ಹಾಗೂ ಅಭಿನಂದನಾ ಸಮಾರಂಭ73ನೇ ಸಹಕಾರ ಸಪ್ತಾಹ–2026ಹೊಂಬೆಳಕು ಸಾಂಸ್ಕೃತಿಕ ಸಂಘ(ರಿ), ಬೆಳಗಾವಿ  ರಾಜ್ಯ ಮಟ್ಟದ "ರಾಷ್ಟ್ರಕೂಟ ಸಾಹಿತ್ಯಶ್ರೀ" ಪ್ರಶಸ್ತಿಗೆ ಆಯ್ಕೆಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಪ್ರತಿಭಟನೆ ಮದ್ಯ ಕಳ್ಳಸಾಗಣೆಗ್ರಾಮೀಣ ಸಮುದಾಯಗಳಲ್ಲಿ ದೃಷ್ಟಿ ರಕ್ಷಿಸಲು ಬೆಳಗಾವಿಯ ರೋಟರಿ ಕ್ಲಬ್ ಸಂಚಾರಿ ಮಧುಮೇಹ ರೆಟಿನೋಪತಿ ತಪಾಸಣಾ ಯೋಜನೆಯನ್ನು ಪ್ರಾರಂಭಿಸಿದೆಪಟ್ಟದ ಆನೆ ಧ್ರುವನಿಗೆ ಹೋಮ-ಹವನದ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಸಂಗೀತ ಲೋಕದಲ್ಲಿ ಮಿಂಚಿದ ಬೆಳಗಾವಿಗರು – ಅದ್ದೂರಿಯಾಗಿ ನಡೆದ ರಿಯಲ್ ಸ್ಟಾರ್ ಪಬ್ಲಿಕ್ ಇವೆಂಟ್ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆ