17/12/2025
IMG-20250517-WA0004

*ಶಿವಾಜಿ ಇತಿಹಾಸದ ಮೇಲೆ ಹೊಸ ಬೆಳಕು ಬೀರುವ ಚಾರಿತ್ರಿಕ ಕಥನ*
========================================
ಪುಸ್ತಕದ ಹೆಸರು : _ಛತ್ರಪತಿ ಶಿವಾಜಿ : ದಿ ಗ್ರೇಟ್ ಮರಾಠಾ_
ಲೇಖಕರು : _ಡಾ. ಸರಜೂ ಕಾಟ್ಕರ್_
ಪ್ರಕಾಶಕರು : ಯಾಜಿ ಪ್ರಕಾಶನ, ಹೊಸಪೇಟೆ, ೨೦೨೪
ಲೇಖಕರ ಸಂಪರ್ಕವಾಣಿ : ೯೩೪೧೦೨೯೩೨೧

[ಡಾ. ಸರಜೂ ಕಾಟ್ಕರ್ ಅವರು ರಚಿಸಿದ ‘ಛತ್ರಪತಿ ಶಿವಾಜಿ’ ಕೃತಿಯು ಇದೇ ದಿನಾಂಕ ೧೮ ರಂದು ಬೆಳಗಾವಿಯಲ್ಲಿ ಸಚಿವ ಶ್ರೀ ಸಂತೋಷ ಲಾಡ್ ಅವರಿಂದ ಲೋಕಾರ್ಪಣೆಯಾಗುತ್ತಿದೆ. ತನ್ನಿಮಿತ್ಯ ಕೃತಿಯ ಸಂಕ್ಷಿಪ್ತ ಅವಲೋಕನ]

ನೈಜ ಇತಿಹಾಸವು ಚರಿತ್ರ ನಾಯಕರ ಅಭಿಮಾನಿಗಳ ಕೈಯಲ್ಲಿ ಸಿಕ್ಕು ದಂತಕಥೆಗಳಾಗಿ, ರೋಚಕ ನಿಗೂಢ ರಹಸ್ಯಗಳಾಗಿ ಮುಂದಿನ ಪೀಳಿಗೆಗೆ ಆ ದಂತಕಥೆಗಳೆ ನಿಜವಾದ ಇತಿಹಾಸವೆಂದು ನಂಬುವ ರೀತಿಯಲ್ಲಿ ಸಾಹಿತ್ಯ ಚರಿತ್ರೆಯ ಉದ್ದಕ್ಕೂ ನಡೆದುಕೊಂಡು ಬಂದಿರುವುದನ್ನು ಗಮನಿಸಬಹುದು. ಶಿವಾಜಿ ಮಹಾರಾಜರ ನೈಜ ಇತಿಹಾಸಕ್ಕಿಂತ ನೂರುಪಟ್ಟು ದಂತಕಥೆಯ ರೋಚಕತೆಗಳೇ ಇತಿಹಾಸದುದ್ದಕ್ಕೂ ವಿಜೃಂಭಿಸಿರುವುದನ್ನು ನೋಡುತ್ತೇವೆ. ಕೆಲವು ಘಟನೆಗಳು ಮಹಾನ್ ವ್ಯಕ್ತಿಗಳ ಘನವ್ಯಕ್ತಿತ್ವಕ್ಕೆ ಕಳಂಕ ತರುವ ರೀತಿಯಲ್ಲಿ ರಚನೆಗೊಂಡಿರುತ್ತವೆ. ಆದರೂ ಚರಿತ್ರ ನಾಯಕನನ್ನೂ ಅತಿಮಾನುಷ್ಯ ವ್ಯಕ್ತಿಯನ್ನಾಗಿ ಚಿತ್ರಿಸಬೇಕೆಂಬ ತೆವಲಿಗೆ ಬಿದ್ದು ಕೆಲವು ಮೂರ್ಖರು ಕಟ್ಟಿದ ಕಟ್ಟುಕಥೆಗಳು ಜನಮನದಲ್ಲಿ ಇಂದಿಗೂ ಉಳಿದು ಬಂದಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ಮರಾಠಿ ಭಾಷೆಯಲ್ಲಿ ಇಂತಹ ಕಟ್ಟುಕಥೆಗಳನ್ನು ಭಾಕಡ ಕಥೆಗಳೆಂದು ಕರೆಯುತ್ತಾರೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಮರ್ಥ ರಾಮದಾಸರು ಶಿವಾಜಿಗೆ ಗುರುಗಳೇ ಆಗಿರಲಿಲ್ಲ. ಹೀಗಿದ್ದೂ ರಾಮದಾಸರ ಶಿಷ್ಯನೊಬ್ಬ ‘ಶಿವಾಜಿಯ ನಿಷ್ಠೆಯನ್ನು ಪರೀಕ್ಷಿಸಲು ಅವರ ಪಟ್ಟದ ರಾಣಿಯನ್ನು ಸೇವೆಗಾಗಿ ಕೇಳಿದ್ದು’ ಒಂದು ಭಾಕಡ ಕಥೆಯಲ್ಲಿ ಪ್ರಸ್ತಾಪವಾಗುತ್ತದೆ. ಒಬ್ಬ ವೀರಸನ್ಯಾಸಿ ರಾಜನೊಬ್ಬನ ಹೆಂಡತಿಯನ್ನು ಕರೆದು ರಾಜನನ್ನು ಪರೀಕ್ಷಿಸುತ್ತಾನೆಂಬುದು ಒಂದೆಡೆಯಾದರೆ, ತನ್ನ ಹೆಂಡತಿಯನ್ನು ಸನ್ಯಾಸಿ ಸನ್ನಿಧಿಗೆ ಕಳಿಸುವನು, ಮತ್ತು ಬರಮಾಡಿಕೊಳ್ಳುವ ಸನ್ಯಾಸಿ ಉಭಯತರ ವ್ಯಕ್ತಿತ್ವ ಮಣ್ಣುಗೂಡುತ್ತದೆ ಎಂಬುದರ ಪರಿಜ್ಞಾನವೇ ಇಲ್ಲದೆ ಇಂತಹ ಕಥೆ ಹುಟ್ಟಿಸುವರು ಶಿವಾಜಿ ಚರಿತ್ರೆ ಕಾಲಘಟ್ಟದಲ್ಲಿ ಬಹಳ ಜನ ಸಿಗುತ್ತಾರೆ. (ಬಸವಣ್ಣನವರ ಬದುಕಿನಲ್ಲಿಯೂ ಇಂತಹ ಘಟನೆ ನಡೆಯಿತ್ತೆಂದು ಪುರಾಣಕಾರರು, ಮುಕ್ತಿಕಂಠಾಭರಣ ಎಂಬ ಖೊಟ್ಟಿ ವಚನಗಳ ಸಂಕಲನದ ಸಂಕಲನಕಾರ ಸೃಷ್ಟಿಸಿರುವುದನ್ನು ಇಲ್ಲಿ ಗಮನಿಸಬಹುದು.) ಶಿವಾಜಿ ಮಹಾರಾಜರು ಮತ್ತು ಸಮರ್ಥ ರಾಮದಾಸರ ಕಾಲಮಾನಗಳು ಬೇರೆ ಬೇರೆಯಾಗಿರುವುದನ್ನು ಡಾ. ಸರಜೂ ಕಾಟ್ಕರ್ ಅವರು ಅನೇಕ ಐತಿಹಾಸಿಕ ಆಧಾರಗಳ ಮೂಲಕ ಸಮರ್ಥಿಸಿದ್ದಾರೆ. ಶಿವಾಜಿಯ ಗುರುಗಳು ರಾಮದಾಸರು ಅಲ್ಲ, ಪಾಟಗಾವದ ಜಗದ್ಗುರುಗಳು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಕೆಲವರು ‘ಶಿವಾಜಿ ಮಹಾರಾಜರು ಪತ್ರ ವ್ಯವಹಾರಗಳಲ್ಲಿ ರಾಮ ರಾಮ’ ಎಂಬ ಶಬ್ದವನ್ನು ಬರೆಯಬೇಕೆಂದು ಆಜ್ಞೆ ಹೊರಡಿಸಿದ್ದರೆಂದು ಸುಳ್ಳು ಸುದ್ದಿ ಹಬ್ಬಿಸಿರುವುದನ್ನು ಆಧಾರ ಸಹಿತ ಅಲ್ಲಗಳೆದಿದ್ದಾರೆ.

ಸಮರ್ಥ ರಾಮದಾಸರನ್ನು ವೈಭವೀಕರಣ ಮಾಡುವ ದೃಷ್ಟಿಯಿಂದ ಕೆಲವು ವೈದಿಕಮೂಲದ ವಿದ್ವಾಂಸರು ಶಿವಾಜಿ ಒಬ್ಬ ಅನಕ್ಷರಸ್ಥನಾಗಿದ್ದ, ರಾಮದಾಸರಿಗೆ ತನ್ನ ರಾಜ್ಯವನ್ನೆಲ್ಲ ಅರ್ಪಿಸಿದ, ಅವರು ಕೊನೆಗೆ ಭಿಕ್ಷೆ ರೂಪದಲ್ಲಿ ಮರಳಿ ಶಿವಾಜಿಗೆ ನೀಡಿದರು ಎಂಬಂತಹ ಕಥೆಗಳನ್ನು ಸೃಷ್ಟಿಸಿ ಜನರ ಮನದಲ್ಲಿ ಬೇರೂರುವಂತೆ ಮಾಡಿದ್ದರು. ಆದರೆ ಡಾ. ಸರಜೂ ಕಾಟ್ಕರ್ ಅವರ ಈ ಕೃತಿ ಅಂತಹ ಕೆಲವು ಸುಳ್ಳುಗಳನ್ನು ಅಲ್ಲಗಳೆಯುವ ಮೂಲಕ, ನೈಜ ಇತಿಹಾಸವನ್ನು ತೋರಿಸುವ ಒಂದು ವಿನಮ್ರ ಪ್ರಯತ್ನ ಇಲ್ಲಿದೆ ಎಂದು ಹೇಳಬಹುದು.

ಡಾ. ಸರಜೂ ಕಾಟ್ಕರ್ ಅವರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃಷಿ ಮಾಡಿದ್ದಾರೆ. ಪತ್ರಕರ್ತರಾಗಿಯೂ ಅವರು ಈವರೆಗೆ ೭೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಪ್ರಪಂಚವನ್ನು ಸಿರಿವಂತಗೊಳಿಸಿದ್ದಾರೆ. ಈಗ ಕಾದಂಬರಿ ಮತ್ತು ಚರಿತ್ರೆಗಳ ನಡುವಿನ ಚಾರಿತ್ರಿಕ ಕಥನವನ್ನು ಬರೆಯುವ ಮೂಲಕ ಹೊಸ ಪ್ರಯೋಗವನ್ನು ಮಾಡಿದ್ದಾರೆ. ಈ ಕೃತಿಯನ್ನು ಕೆಲವು ವಿದ್ವಾಂಸರು ಕಾದಂಬರಿಯೆಂದು ಗುರುತಿಸಿದ್ದಾರೆ. ಆದರೆ ಇಲ್ಲಿ ಐತಿಹಾಸಿಕ ದಾಖಲೆಗಳನ್ನು ಆಕರವನ್ನಾಗಿ ಗುರುತಿಸುತ್ತಲೇ ಚರಿತ್ರೆಯನ್ನು ಕಟ್ಟಿಕೊಟ್ಟಿರುವುದರಿಂದ ಚಾರಿತ್ರಿಕ ಜೀವನ ಚರಿತ್ರೆ ಎಂದು ಕರೆಯಬಹುದು ಎಂಬುದು ನನ್ನ ಅಭಿಪ್ರಾಯ.

ಡಾ. ಸರಜೂ ಕಾಟ್ಕರ್ ಅವರು ಈ ಹಿಂದೆ ನಮ್ಮ ನಾಡಿನ ಖ್ಯಾತ ಪತ್ರಕರ್ತರಾಗಿದ್ದ ಡಾ. ಪಾಟೀಲ ಪುಟ್ಟಪ್ಪನವರ ಆತ್ಮಕತೆಯನ್ನು ನಿರೂಪಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಪಾಟೀಲ ಪುಟ್ಟಪ್ಪನವರು ಶಿವಾಜಿ ಮೇಲೆ ಒಂದು ಬೃಹತ್ ಗ್ರಂಥವನ್ನು ರಚಿಸಬೇಕೆಂದು ಹೊಳಹು ಹಾಕುತ್ತಿದ್ದರು. ಆದರೆ ವಯೋಸಹಜ ಅನಾರೋಗ್ಯ ಕಾರಣವಾಗಿ ಅವರಿಂದ ಆ ಮಹತ್ವಾಕಾಂಕ್ಷೆಯ ಕೃತಿ ಹೊರಬರಲಿಲ್ಲ. ಪಾಟೀಲ ಪುಟ್ಟಪ್ಪನವರ ಆತ್ಮಕತೆಯನ್ನು ನಿರೂಪಿಸಿ, ಅವರ ಮಾನಸಪುತ್ರರಾದ ಡಾ. ಸರಜೂ ಕಾಟ್ಕರ್ ಅವರು ಪ್ರಸ್ತುತ ‘ಛತ್ರಪತಿ ಶಿವಾಜಿ’ ಕೃತಿ ಬರೆಯುವ ಮೂಲಕ ಪಾಟೀಲ ಪುಟ್ಟಪ್ಪನವರ ಆತ್ಮಕ್ಕೂ ಶಾಂತಿ ತಂದಿದ್ದಾರೆ ಎಂದು ಬಲವಾಗಿ ನಂಬಿರುವೆ.

ಶಿವಾಜಿ ಮಹಾರಾಜರ ಕುರಿತು ಮರಾಠಿ ಭಾಷೆಯಲ್ಲಿ ಸಾವಿರಾರು ಗ್ರಂಥಗಳು ಪ್ರಕಟಗೊಂಡಿವೆ. ಕನ್ನಡದಲ್ಲಿಯೂ ಅಪಾರ ಪ್ರಮಾಣದಲ್ಲಿ ಶಿವಾಜಿ ಸಾಹಿತ್ಯ ನಿರ್ಮಾಣವಾಗಿದೆ. ಗಳಗನಾಥರು ಶಿವಾಜಿ ಮಹಾರಾಜರ ಮತ್ತು ಅವರ ಪರಿಸರದ ಕುರಿತು ಏಳು ಕಾದಂಬರಿಗಳನ್ನು ರಚಿಸಿರುವುದು ಸರ್ವರಿಗೂ ವೇದ್ಯವಾದ ಸಂಗತಿ. ವೀರಕೇಸರಿ ಸೀತಾರಾಮಶಾಸ್ತಿçಗಳು ಶಿವಾಜಿ ಕುರಿತು ಬರೆದ ಬೃಹತ್ ಕೃತಿಗಳು ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿವೆ. ಐವತ್ತಕ್ಕೂ ಹೆಚ್ಚು ಕಾದಂಬರಿಗಳು ಕನ್ನಡದಲ್ಲಿ ಪ್ರಕಟಗೊಂಡಿವೆ. ಬಾಬಾಸಾಹೇಬ ಪುರಂದರೆ ಅವರಂತಹ ಪ್ರಖ್ಯಾತ ಮರಾಠಿ ಲೇಖಕರ ಹತ್ತಾರು ಗ್ರಂಥಗಳು ಕನ್ನಡದಲ್ಲಿ ಅನುವಾದಗೊಂಡಿವೆ. ಇಷ್ಟೆಲ್ಲ ಸಾಹಿತ್ಯ ಬಂದ ನಂತರವೂ ಡಾ. ಸರಜೂ ಕಾಟ್ಕರ್ ಅವರ ಈ ಕೃತಿ ಪ್ರಕಟಣೆಯ ಔಚಿತ್ಯವಿತ್ತೆ? ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು. ಶಿವಾಜಿ ಚರಿತ್ರೆ-ಕಾದಂಬರಿಗಳನ್ನು ಕನ್ನಡದಲ್ಲಿ ಬರೆದವರು ಮೂಲ ಮರಾಠಿ ಮನೆತನಕ್ಕೆ ಸಂಬಂಧಿಸಿದವರಲ್ಲ. ಡಾ. ಸರಜೂ ಕಾಟ್ಕರ್ ಅವರು ಹುಟ್ಟಿನಿಂದ ಮರಾಠಾ. ಮರಾಠಿ ಸಂಸ್ಕೃತಿಯ ಪರಿಸರದಲ್ಲಿ ಬೆಳೆದು ಬಂದವರು. ತಂದೆ ತಾಯಿಗಳಿಂದ ಶಿವಾಜಿ ಮಹಾರಾಜರ ಇತಿಹಾಸವನ್ನು ಕೇಳುತ್ತ ಬೆಳೆದವರು. ಮುಖ್ಯವಾಗಿ ಮರಾಠಿಯಲ್ಲಿ ರಚಿತಗೊಂಡ ಶಿವಾಜಿ ಮಹಾರಾಜರ ಸಮಸ್ತ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಈ ವರೆಗೆ ಕನ್ನಡದಲ್ಲಿ ಬಂದ ಶಿವಾಜಿ ಚರಿತ್ರೆಗಳೆಲ್ಲವೂ ಏಕಪಕ್ಷೀಯ ಆಲೋಚನೆಗಳಿಂದ ರಚನೆಗೊಂಡಿದ್ದವು. ಶಿವಾಜಿ ಚರಿತ್ರೆಯ ನೆಪದಲ್ಲಿ ಮುಸ್ಲಿಂ ದ್ವೇಷವನ್ನೂ, ಹಿಂದುತ್ವದ ವೈಭವೀಕರಣವನ್ನು ಮಾಡುವ ಕೃತಿಗಳೇ ಹೆಚ್ಚಾಗಿದ್ದವು. ವೈದಿಕಶಾಹಿ ಕಪಿಮುಷ್ಟಿಯಲ್ಲಿ ಶಿವಾಜಿ ಮಹಾರಾಜರ ಚರಿತ್ರೆ ಸಿಕ್ಕು ನರಳಾಡುತ್ತಿತ್ತು. ಅದಕ್ಕೆ ಮುಕ್ತಿ ನೀಡಿ, ಶಿವಾಜಿ ಮಹಾರಾಜರು ಒಬ್ಬ ನಿಜವಾದ ಅರ್ಥದಲ್ಲಿ ಜನತೆಯ ರಾಜರಾಗಿದ್ದರೆಂಬುದನ್ನು ತೋರಿಸಿದ ಶ್ರೇಯಸ್ಸು ಡಾ. ಸರಜೂ ಕಾಟ್ಕರ್ ಅವರಿಗೆ ಸಲ್ಲುತ್ತದೆ.

ಕೃತಿಯಲ್ಲಿ ಒಟ್ಟು ನಲವತ್ತು ಅಧ್ಯಾಯಗಳಿವೆ. ಒಂದೊಂದು ಅಧ್ಯಾಯಗಳು ರೋಚಕವಾಗಿವೆ. ಮುಂದೇನು ಎಂದು ಸರ್ವಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಶಿವಾಜಿ ಹುಟ್ಟುವ ಪೂರ್ವಕಾಲದಿಂದ ಪ್ರಾರಂಭವಾದ ಈ ಇತಿಹಾಸ ಕಥನ ಇಡೀ ಮರಾಠಾ ಸಂಸ್ಕೃತಿಯ ಪರಂಪರೆಯನ್ನೂ ತಿಳಿಸಿಕೊಡುತ್ತದೆ. ಶಿವಾಜಿ ಮಹಾರಾಜರ ರಾಜ್ಯಾಭಿಷೇಕ, ರಾಜಮುದ್ರೆ, ಕರ್ನಾಟಕದತ್ತ ಮಹಾರಾಜರ ಚಿತ್ತ, ಶಿವಾಜಿ ಮಹಾರಾಜರ ಹತ್ಯೆಗೆ ಯತ್ನ, ಶಿವಾಜಿ ಮಹಾರಾಜರು ಗೆದ್ದ ಕೋಟೆಗಳು, ಮಹರಾಜರ ಖಜಾನೆಯಲ್ಲಿದ್ದ ಸಂಪತ್ತಿನ ವಿವರಗಳು, ಮಹರಾಜರದ ಸೈನ್ಯದ ಪ್ರಮುಖ ಸೇನಾನಿಗಳು, ಸಾಧು ಸಂತರ ಬಗ್ಗೆ ಶ್ರದ್ಧೆ, ಶಿವಾಜಿ ಮಹಾರಾಜರ ಅಸಲಿ ಭಾವಚಿತ್ರ ಮೊದಲಾದ ಅಧ್ಯಾಯಗಳು ಓದುಗರಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ. ಇನ್ನೂ ಮಹತ್ವದ ಸಂಗತಿಯೆಂದರೆ ಶಿವಾಜಿ ಮಹಾರಾಜರ ಸಮಾಧಿ ಎಲ್ಲಿ ಇದೆ ಎಂಬುದನ್ನು ಮರಾಠರೇ ಮರೆತುಬಿಟ್ಟಿದ್ದರು. ಈ ಸಮಾಧಿಯನ್ನು ಶೋಧಿಸಿ, ಮರಾಠಿ ಜನರಿಗೆ ತೋರಿಸಿಕೊಟ್ಟವರು ಮಹಾತ್ಮಾ ಫುಲೆ ಅವರು. ಈ ಕುರಿತು ಡಾ. ಸರಜೂ ಕಾಟ್ಕರ್ ಅವರು ವಿವರಿಸಿದ ವಿಚಾರಗಳು ತುಂಬ ಮೌಲಿಕವಾಗಿವೆ. ಪ್ರಾರಂಭದಲ್ಲಿ ಸಮರ್ಥ ರಾಮದಾಸರು ಶಿವಾಜಿ ಕುರಿತು ಬರೆದ ಒಂದು ಪದ್ಯವನ್ನು ಮತ್ತು ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರು ೧೯೦೪ರಲ್ಲಿ ಬರೆದ ‘ಶಿವಾಜಿ ಉತ್ಸವ’ ಎಂಬ ಸುದೀರ್ಘ ಕವನವನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿರುವುದು ತುಂಬ ಸಮಯೋಚಿತವಾಗಿದೆ.

ಶಿವಾಜಿ ಹಿರಿಯ ಮಗ ಸಂಭಾಜಿ ಬಗ್ಗೆಯೂ ಇತಿಹಾಸದಲ್ಲಿ ಅನೇಕ ಅಸಂಗತಗಳು, ಅಪಸವ್ಯಗಳು ದಾಖಲಾಗಿವೆ. ಇತ್ತೀಚೆಗೆ ವಿಶ್ವಾಸ ಪಾಟೀಲ ಅವರ ‘ಸಂಭಾಜಿ’ ಕೃತಿಯನ್ನು ಪ್ರೊ. ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಭಾಜಿ ಬಗೆಗಿನ ಆರೋಪಗಳಿಗೆಲ್ಲ ತಕ್ಕ ಉತ್ತರವನ್ನು ನೀಡುವ ರೀತಿಯಲ್ಲಿ ಆ ಕೃತಿ ಹೊರ ಬಂದಿದೆ. ಡಾ. ಸರಜೂ ಕಾಟ್ಕರ್ ಅವರು ಕೂಡ ಸಂಭಾಜಿ ವಿಷಯದಲ್ಲಿ ಇರುವ ಘಟನೆಗಳನ್ನು ವಾಸ್ತವ ನೆಲೆಯಲ್ಲಿ ವಿಶ್ಲೇಷಿಸುತ್ತ, ಸತ್ಯ ಘಟನೆಗಳನ್ನು ಪ್ರಸ್ತಾಪಿಸುತ್ತ ಸಂಭಾಜಿ ಚರಿತ್ರೆಗೂ ತಕ್ಕ ನ್ಯಾಯ ಒದಗಿಸಿದ್ದಾರೆ. ಅನುಬಂಧದಲ್ಲಿ ಶಿವಾಜಿ ಕುಲವೃತ್ತಾಂತ, ಶಿವಾಜಿ ಜೀವನದ ಪ್ರಮುಖ ಘಟನೆಗಳು, ವಂಶವೃಕ್ಷ ನೀಡಿದ್ದಾರೆ.

ಡಾ. ಸರಜೂ ಕಾಟ್ಕರ್ ಅವರು ‘ಶಿವಾಜಿ ಮೂಲ ಕನ್ನಡ ನೆಲ’ ಎಂಬ ಕೃತಿಯನ್ನು ೨೦೦೬ರಲ್ಲಿ ಪ್ರಕಟಿಸಿದಾಗ ಕನ್ನಡ ನೆಲ ಜಲ ಸಂಸ್ಕೃತಿಯ ಬಗ್ಗೆ ಪ್ರೀತಿ ಕಾಳಜಿಯುಳ್ಳವರ ಮನಸ್ಸುಗಳಲ್ಲಿ ಒಂದು ರೀತಿಯ ಸಂಚಲನ ಮೂಡಿತ್ತು. ಮಹಾರಾಷ್ಟç ಜನರ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರತೀಕವಾಗಿರುವ ಛತ್ರಪತಿ ಶಿವಾಜಿಯ ಮೂಲ ವಂಶಸ್ಥರು ಕರ್ನಾಟಕದವರು ಎಂಬ ಅಂಶವನ್ನು ಕುರಿತು ಮಹಾರಾಷ್ಟçದ ಹಿರಿಯ ಸಂಶೋಧಕರಾದ ಡಾ. ರಾಮಚಂದ್ರ ಚಿಂತಾಮಣ ಢೇರೆ ಅವರು ‘ಶಿಖರ ಸಿಂಗಣಪುರದ ಶಂಭು ಮಹಾದೇವ’ ಎಂಬ ಬೃಹತ್ ಗ್ರಂಥದಲ್ಲಿ ಸಿದ್ಧಪಡಿಸಿದ್ದರು. ಈ ಕೃತಿಯನ್ನು ಆಧರಿಸಿ ಡಾ. ಸರಜೂ ಕಾಟ್ಕರ್ ಅವರು ಕನ್ನಡ ಜಾಯಮಾನಕ್ಕೆ ಬೃಹತ್ ಕೃತಿಯ ಅಂಶಗಳನ್ನು ಸಂಕ್ಷಿಪ್ತಗೊಳಿಸಿ ‘ಶಿವಾಜಿ ಮೂಲ ಕನ್ನಡ ನೆಲ’ ಕೃತಿಯನ್ನು ರಚಿಸಿದ್ದರು. (ಡಾ. ರಾ.ಚಿಂ.ಢೇರೆಯವರ ಮೂಲ ಸಮಗ್ರ ಕೃತಿಯೂ ಕನ್ನಡ ಜನರಿಗೆ ತಿಳಿಯಲಿ ಎಂಬ ಸದುದ್ದೇಶದಿಂದ ಗದುಗಿನ ತೋಂಟದಾರ್ಯಮಠದ ಹಿಂದಿನ ಪೀಠಾಧಿಪತಿಗಳಾಗಿದ್ದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ತಮ್ಮ ಅಧ್ಯಯನ ಸಂಸ್ಥೆಯಿಂದ ಡಾ. ವಿಠ್ಠಲರಾವ ಗಾಯಕವಾಡ್ ಅವರಿಂದ ಅನುವಾದಿಸಿ ಪ್ರಕಟಮಾಡಿರುವುದು ಗಮನಾರ್ಹ ಸಂಗತಿ)

‘ಶಿವಾಜಿ ಮೂಲ ಕನ್ನಡ ನೆಲ’ ಕೃತಿ ಕುರಿತು ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದರು. ಅವರು ಬದುಕಿರುವಾಗಲೇ ಈ ಕೃತಿ ಆರು ಮುದ್ರಣಗಳನ್ನು ಕಂಡಿತ್ತು. ಈ ಕೃತಿ ಡಾ. ಕಾಟ್ಕರ್ ಅವರನ್ನು ನಾಡಿನಾದ್ಯಂತ ಸುಪ್ರಸಿದ್ಧಗೊಳಿಸಿತು. ಅಷ್ಟೇ ಏಕೆ ಸಪ್ತಸಾಗರದಾಚೆಗೂ ನೆಲೆಸಿರುವ ಕನ್ನಡಿಗರು ಈ ಕೃತಿ ಕುರಿತು ಮಾತನಾಡುವಂತಾದುದು ಒಂದು ಸುಯೋಗವೆಂದೇ ಹೇಳಬೇಕು.

ಡಾ. ಸರಜೂ ಕಾಟ್ಕರ್ ಅವರು ಲೇಖಕರ ಮಾತಿನಲ್ಲಿ ಹೇಳಿಕೊಂಡಂತೆ, ಇದು ಅವರ ಹಲವಾರು ವರ್ಷಗಳ ಕನಸಾಗಿತ್ತು. ಈ ಕೃತಿ ಪ್ರಾರಂಭದಲ್ಲಿ ಐದು ನೂರು ಪುಟಗಳನ್ನು ಮೀರಿತ್ತು, ಕನ್ನಡದಲ್ಲಿ ಓದುಗರ ಅನಾದಾರ, ಉಪೇಕ್ಷೆ ಗಮನಿಸಿ, ೩೫೦ ಪುಟಗಳಿಗೆ ಸೀಮಿತಗೊಳಿಸುವ ಕಾರ್ಯವನ್ನು ಅನಿವರ್ಯವಾಗಿ ಮಾಡಿದ್ದಾರೆ. ಮರಾಠಿಯಲ್ಲಿರುವ ಸಾವಿರಾರು ಬಖರಿಗಳನ್ನು ಸೂಕ್ಷö್ಮವಾಗಿ ತಾಳ್ಮೆಯಿಂದ ಅಧ್ಯಯನ ಮಾಡಿದ್ದಾರೆ. ಈ ವರೆಗಿನ ಚರಿತ್ರೆಗಳಿಗಿಂತ ಭಿನ್ನವಾದ ಇತಿಹಾಸವನ್ನು ಇಲ್ಲಿ ಚಿತ್ರಿಸುವ ಮೂಲಕ ಶಿವಾಜಿ ಮಹಾರಾಜರ ನಿಜವಾದ ಘನ ವ್ಯಕ್ತಿತ್ವವನ್ನು ಕನ್ನಡಿಗರಿಗೆ ತಿಳಿಸಿಕೊಟ್ಟಿದ್ದಾರೆ. ‘ಶಿವಾಜಿ ಮೂಲ ಕನ್ನಡ ನೆಲ’ ಕೃತಿಯಂತೆಯೇ ಇದು ಕೂಡ ಹತ್ತಾರು ಮುದ್ರಣಗಳನ್ನು ಕಾಣುವಂತಾಗಲಿ, ಕನ್ನಡಿಗರು ಶಿವಾಜಿ ಮಹಾರಾಜರ ನಿಜ ಇತಿಹಾಸವನ್ನು ಅರಿತುಕೊಳ್ಳುವಂತಾಗಲಿ ಎಂದು ಆಶಿಸುವೆ.

*ಪ್ರಕಾಶ ಗಿರಿಮಲ್ಲನವರ*
ಬೆಳಗಾವಿ
ಮೊ: ೯೯೦೨೧೩೦೦೪೧

error: Content is protected !!