23/12/2024
IMG-20241213-WA0002

ಕೌಜಲಗಿ-೧೩ : ರಾಜ್ಯದ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕನ್ನು ಜಿಲ್ಲೆಯನ್ನಾಗಿಸಿ , ಗೋಕಾಕ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಇದೇ ಬೆಳಗಾವಿ ಅಧಿವೇಶನದಲ್ಲಿಯೇ ಘೋಷಿಸಬೇಕೆಂದು ಕೌಜಲಗಿ ತಾಲ್ಲೂಕು ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ಆಗ್ರಹಪಡಿಸಿದೆ.

ಪಟ್ಟಣದ ಕಳ್ಳಿಗುದ್ದಿ ಸರ್ಕಲ್ ನಲ್ಲಿ ಶುಕ್ರವಾರ ಕೌಜಲಗಿ ತಾಲ್ಲೂಕು ಹೋರಾಟಗಾರರು ಕೌಜಲಗಿ ತಾಲ್ಲೂಕು ರಚನೆಗಾಗಿ ಒಂದು ದಿನದ ಸಾಂಕೇತಿಕ ಧರಣಿ ನಡೆಸಿ,ಕೌಜಲಗಿ ಉಪ ತಹಶೀಲ್ದಾರರ ಪರವಾಗಿ ಉಪತಹಸೀಲ್ದಾರ ಡಿ.ಸಿ. ಪತ್ತಾರ ಅವರಿಗೆ ಮನವಿ ಸಲ್ಲಿಸಿದರು.
ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಕೌಜಲಗಿ ಪಟ್ಟಣವು ತಾಲ್ಲೂಕು ರಚನೆಗಾಗಿ 5 ದಶಕಗಳಿಂದ ಹೋರಾಡುತ್ತಾ ಬಂದಿದೆ. ತಾಲ್ಲೂಕು ಪುನರ್ ವಿಂಗಡಣಾ ಆಯೋಗಗಳಾದ ಎಂ. ವಾಸುದೇವರಾವ, ಟಿ ಎಂ ಹುಂಡೇಕರ, ಪಿ ಸಿ ಗದ್ದಿಗೌಡರ್ ಮುಂತಾದ ತಾಲ್ಲೂಕಾ ಪುನರ್ ವಿಂಗಡಣೆ ಆಯೋಗಗಳು ಕೌಜಲಗಿಯನ್ನು ಕೇಂದ್ರವಾಗಿರಿಸಿಕೊಂಡು ನೂತನ ತಾಲ್ಲೂಕು ಕೇಂದ್ರವಾಗಿ ರಚಿಸಬಹುದೆಂದು ಶಿಫಾರಸ್ಸು ಮಾಡಿವೆ.
ಮೂಡಲಗಿ, ರಾಮದುರ್ಗ, ಯರಗಟ್ಟಿ ಹಾಗೂ ಗೋಕಾಕ ತಾಲ್ಲೂಕಿನ ಗಡಿ ಗ್ರಾಮಗಳನ್ನು ಸೇರಿಸಿ, ಸುಮಾರು 60 ಗ್ರಾಮಗಳನ್ನು ಒಳಗೊಂಡು ಕೌಜಲಗಿ ತಾಲ್ಲೂಕನ್ನು ರಚಿಸಬೇಕೆಂದು ಆಗ್ರಪಡಿಸಿದ ಹೋರಾಟಗಾರರು ತಮ್ಮ ಮನವಿಯಲ್ಲಿ , ಬೆಳಗಾವಿ ಜಿಲ್ಲೆ ಕಿತ್ತೂರು, ನಿಪ್ಪಾಣಿ, ಕಾಗವಾಡ ಜೊತೆಯಲ್ಲಿಯೇ ಕೌಜಲಗಿ ತಾಲ್ಲೂಕು ಕೇಂದ್ರಕ್ಕಾಗಿ ಹೋರಾಟವನ್ನು ಮಾಡುತ್ತಾ ಬಂದಿದ್ದರೂ,ಯಾವುದೇ ಸರ್ಕಾರ ಇದುವರೆಗೆ ತಾಲ್ಲೂಕು ಕೇಂದ್ರವಾಗಿಸಿಲ್ಲ. ಪಕ್ಕದ ಯರಗಟ್ಟಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ನೂತನ ತಾಲ್ಲೂಕು ಕೇಂದ್ರವಾಗಿಸಿದ ಸರ್ಕಾರ, ಕೇವಲ ಹೋಬಳಿ ಕೇಂದ್ರವಾದ ಕಿತ್ತೂರನ್ನು ಒಂದು ಸ್ವತಂತ್ರ ತಾಲ್ಲೂಕು ಕೇಂದ್ರವಾಗಿಸಿದ ಉದಾರಣೆಗಳಿದ್ದು, 40ವರ್ಷಗಳಿಂದ ಹೋಬಳಿ ಕೇಂದ್ರವಾದ ಕೌಜಲಗಿಯನ್ನು ಶೀಘ್ರದಲ್ಲಿಯೇ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು.
ಇತ್ತೀಚಿಗೆ ಕೌಜಲಗಿ ಪಟ್ಟಣಕ್ಕೆ ಆಗಮಿಸಿದ್ದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೂ ಈ ವಿಷಯವಾಗಿ ಮನವಿಯನ್ನು ಸಲ್ಲಿಸಲಾಗಿದೆ. ಜಿಲ್ಲಾ ಮಂತ್ರಿಗಳಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೂ ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿಸಬೇಕೆಂದು ಮನವಿ ಸಲ್ಲಿಸಲಾಗಿದ್ದು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೌಜಲಗಿ ತಾಲ್ಲೂಕು ರಚನೆಗೆ ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಕೂಡ ಬೆಳಗಾವಿ ಜಿಲ್ಲೆ ವಿಭಜಿಸುವ ಮುನ್ನ ಕೌಜಲಗಿಯನ್ನು ತಾಲ್ಲೂಕು ಕೇಂದ್ರವಾಗಿಸಬೇಕೆಂದು ಸುದ್ದಿಗೋಷ್ಠಿಯೊಂದರಲ್ಲಿ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಈಗ ಬೆಳಗಾವಿಯಲ್ಲಿ ಜರುಗುತ್ತಿರುವ ಅಧಿವೇಶನದಲ್ಲಿ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಿ ಈ ಭಾಗದ ಜನರ ಪ್ರಮುಖ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಲೋಕನ್ನವರ, ಸುಭಾಷ ಕೌಜಲಗಿ , ಸಾಹಿತಿ ಡಾ.ರಾಜು ಕಂಬಾರ, ದಸ್ತಗಿರಿ ನದಾಫ, ಮಾರುತಿ ಥರಕಾರ ಅವರುಗಳು ಮಾತನಾಡಿ,50 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಶೀಘ್ರದಲ್ಲಿಯೇ ಘೋಷಿಸಬೇಕೆಂದು ಒತ್ತಾಯಿಸಿದರು.
ದಿವ್ಯ ಸಾನಿಧ್ಯವನ್ನು ಶ್ರೀಕಾಂತಯ್ಯ ವಿರಕ್ತಮಠ ವಹಿಸಿದ್ದರು. ಮುಖಂಡರಾದ ರವಿ ಪರುಶೆಟ್ಟಿ, ಅಶೋಕ ಶಿವಾಪುರ, ಶ್ರೀಶೈಲ ಗಾಣಿಗೇರ, ಅಶೋಕ ಪಾಟೀಲ, ಜಗದೀಶ ಶಿವಾಪುರ, ಭೀಮಶಿ ಉದ್ದಪ್ಪನವರ, ಮಹಾದೇವ ಬುದ್ನಿ,ಮಹದೇವ ಸೊಗಲದ, ಪ್ರಕಾಶ ಶೆಟ್ಟರ, ಚಿದಾನಂದ ವಿರಕ್ತಮಠ, ಸಂಜೀವ ಮಿರ್ಜಿ,
ಚೇತನ ಕತ್ತಿ, ಗೋಪಾಲ ಸಂಕಿನವರ, ಅಡಿವೆಪ್ಪ ಕಂಬಾರ, ನಾಗಪ್ಪ ಥರಕಾರ
ಶಿವಲಿಂಗಯ್ಯ ಹಿರೇಮಠ, ಸುರೇಶ್ ನಾಯ್ಕ ಹಾಗೂ ಪಟ್ಟಣದ ಯುವಕರು, ಮಕ್ಕಳು ಮುಂತಾದವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!