ಬೆಳಗಾವಿ-೧೩:ಬೆಳಗಾವಿ ಅಧಿವೇಶನ ನಡೆಯುವ ಸಮಯದಲ್ಲಿ ಒಳ ಮೀಸಲಾತಿ ಜಾರಿಗೆ ತರುವಂತೆ ಆಗ್ರಹಿಸಿ ಮಾದಿಗ ಮತ್ತು ಉಪಜಾತಿಗಳ ಒಕ್ಕೂಟದಿಂದ ಡಿ.16 ರಂದು ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಬೃಹತ್ ಸಮಾವೇಶ ನಡೆಸಿ ಸರಕಾರಕ್ಕೆ ಹಕ್ಕೋತ್ತಾಯವನ್ನು ಮಾಡುತ್ತಿದ್ದೇವೆ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದಕ್ಕೂ ಮುನ್ನ ಡಿ.14ರಂದು ಎಲ್ಲ ಶಾಸಕ, ಸಚಿವರ ಮನೆಯ ಮುಂದೆ ಒಳ ಮೀಸಲಾತಿಯ ಬಗ್ಗೆ ಚರ್ಚೆ ಮಾಡಬೇಕೆಂದು ತಮಟೆ ಚಳುವಳಿ ಮಾಡುತ್ತಿದ್ದೇವೆ. ಈ ಸದನದಲ್ಲಿ ಮುಕ್ತವಾಗಿ ಚರ್ಚೆ ಮಾಡಿ ಒಳ ಮೀಸಲಾತಿ ಜಾರಿಗೆ ಮಾಡಬೇಕೆಂದು ಹಕ್ಕೋತ್ತಾಯ ಮಾಡುತ್ತೇವೆ ಎಂದರು.
ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒಳಮೀಸಲಾತಿ ಯಾಕೆ ಜಾರಿಗೆ ಮಾಡಿಲ್ಲ ಎಂದು ಧ್ವನಿ ಎತ್ತಿದ್ದರು. ಆದರೆ ಕಾಂಗ್ರೆಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು.
ಒಳ ಮೀಸಲಾತಿ ಹೋರಾಟ ಕಳೆದ ಮೂರು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮ್ಮ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಳ ಮೀಸಲಾತಿ ಜಾರಿಗೆ ಮಾಡಬೇಕೆಂಬ ಹೋರಾಟ ಇದೆ. ಇದಕ್ಕೆ ಕೇಂದ್ರದ ಸುಪರ್ದಿಗೆ ಬರುವುದಿಲ್ಲ. ಇದನ್ನು ರಾಜ್ಯ ಸರಕಾರವೇ ಮಾಡಬೇಕು ಎಂದು ಆಗ್ರಹಿಸಿದರು.
ನ್ಯಾಯಾಲಯದಲ್ಲಿ ಒಳ ಮೀಸಲಾತಿ ಆದೇಶ ಮಾಡಿ ಏಳು ತಿಂಗಳಾಗಿದೆ. ಆದರೆ ಇಲ್ಲಿಯವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಇದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ ಒಳ ಮೀಸಲಾತಿ ಜಾರಿಗೆ ತರುವ ಕೆಲಸ ಮಾಡಬೇಕು ಎಂದರು.
ಸರಕಾರ ಏಕ ಸದಸ್ಯ ಸಮಿತಿ ಮಾಡಿರುವುದು ಕಾಲಹರಣ ಮಾಡಲು. ಸದಾಶಿವ ಆಯೋಗದ ವರದಿಯಲ್ಲಿ ಎಲ್ಲ ವಿಚಾರ ಇದೆ. ಡಿ.16 ರಂದು ನಡೆಯುವ ಹಕ್ಕೋತ್ತಾಯ ಸಮಾವೇಶದಲ್ಲಿ ಮಾದಿಗ ಸಮಾಜ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಮಾದಿಗ ಸಮಾಜದ ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ, ಸಂಸದ ಗೋವಿಂದ್ ಕಾರಜೋಳ ಸೇರಿದಂತೆ ಸುಮಾರು 25 ಸಾವಿರಕ್ಕೂ ಅಧಿಕ ಜನರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಶಾಸಕರಾದ ದುರ್ಯೋಧನ ಐಹೋಳೆ, ಬಸವರಾಜ ಮತ್ತಿವಾಡ, ಸಮಾಜದ ಮುಖಂಡರಾದ ಎಚ್.ಹನುಮಂತಪ್ಪ, ಉದಯ ರೆಡ್ಡಿ, ಬಸವರಾಜ ದೊಡಮನಿ, ಅನಂತ ಬ್ಯಾಕೂಡ್ ಸೇರಿದಂತೆ ಇತರರು ಹಾಜರಿದ್ದರು.
