23/12/2024
IMG-20241210-WA0172

ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿದ್ದು, ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ, ತಮ್ಮ ದೂರದೃಷ್ಟಿ, ವಿಶಿಷ್ಟ ಆಡಳಿತ ಶೈಲಿ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಜನಪ್ರಿಯ ನಾಯಕರಾಗಿದ್ದು ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಅದ ಛಾಪನ್ನು ಮೂಡಿಸಿದ್ದ ಶ್ರೀ ಎಸ್.ಎಂ. ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) ಅವರಿಗೆ *ಕರ್ನಾಟಕ ರಾಜ್ಯ ವಿಧಾನಸಭೆ ಸಭಾಧ್ಯಕ್ಷರಾದ ಶ್ರೀ ಯು ಟಿ ಖಾದರ್* ಅವರು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಹಾಗೂ ನಾವೆಲ್ಲರೂ ಒಂದು ಉತ್ತಮ, ಸ್ಪೂರ್ತಿದಾಯಕ ನಾಯಕನನ್ನ ಕಳೆದುಕೊಂಡಂತಾಗಿದೆ ಎಂದು ಅವರು ತಿಳಿಸಿದರು.

ಶ್ರೀ ಯು. ಟಿ ಖಾದರ್ ಅವರು ತಮ್ಮ ಮನದಾಳದ ಮಾತುಗಳನ್ನು ಮುಂದುವರಿಸುತ್ತಾ, “ಮಂಡ್ಯದ ಸೋಮನಹಳ್ಳಿಯಲ್ಲಿ ಮೇ 1, 1932 ರಲ್ಲಿ ಜನಿಸಿದ ಶ್ರೀ ಎಸ್ ಎಂ ಕೃಷ್ಣ ಅವರು, ತಮ್ಮ ಸೌಮ್ಯ ವ್ಯಕ್ತಿತ್ವ, ದೃಢ ನಿರ್ಧಾರಗಳು ಶಿಸ್ತುಬದ್ಧ ಜೀವನ ಶೈಲಿ ಮತ್ತು ವಿಶಿಷ್ಟ ಕಾರ್ಯ ವೈಖರಿಯಿಂದ ಜನಪ್ರಿಯ ಜನನಾಯಕನಾಗಿ, ಸ್ವಂತ ಪರಿಶ್ರಮದಿಂದ ಬೆಳೆದು ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿ ಮತ್ತು ರಾಜ್ಯಪಾಲರಾಗಿ ನಡೆಸಿದ ಸೇವೆಗಳು, ಯಶಸ್ವಿ ಯೋಜನೆಗಳು, ದೀರ್ಘಾವಧಿಯ ದೃಷ್ಟಿಕೋನ, ರಿಂಗ್ ರೋಡ್, ಫ್ಲೈ ಓವರ್ ಮತ್ತು ಮೆಟ್ರೋ ಯೋಜನೆಗಳಿಗೆ ಅವರು ಕೊಟ್ಟ ಪ್ರಾಮುಖ್ಯತೆ, *ಸಿಂಗಾಪುರ ಮಾದರಿಯ* ಅವರ ಅಭಿವೃದ್ಧಿಯ ಕನಸು, ಐಟಿ -ಬಿಟಿ ಯಲ್ಲಿ ಮಾಡಿದ ಕ್ರಾಂತಿ ಬೆಂಗಳೂರನ್ನು *ಭಾರತದ ತಂತ್ರಜ್ಞಾನ ಕೇಂದ್ರವಾಗಿ* ಮಾಡಿದ್ದು ಮಾತ್ರವಲ್ಲದೆ, ಆಧುನಿಕ ರಾಜ್ಯಗಳಲ್ಲಿ ಒಂದಾಗಿ ಬೆಳೆಸಿ ವಿಶ್ವದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು” ಎಂದು ಶ್ರೀ ಎಸ್ ಎಂ ಕೃಷ್ಣ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾತ್ರವಲ್ಲದೆ, ಗ್ರಾಮೀಣ ಜನರಿಗೆ ಅವರು ಮಾಡಿದ್ದ ಸೇವೆಯನ್ನು ನೆನಪಿಸುತ್ತಾ, “ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಟರ್ನೆಟ್‌ ಮತ್ತು *ಕಂಪ್ಯೂಟರ್ ತರಬೇತಿಯನ್ನು* ನೀಡುವ ಸಲುವಾಗಿ *ಕೀಯೊನಿಕ್ಸ್ ಸಂಸ್ಥೆಯನ್ನು* ಸ್ಥಾಪಿಸಿ ಆ ಮೂಲಕ ಕಂಪ್ಯೂಟರ್ ಶಿಕ್ಷಣವನ್ನು ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ರೈತರು, ರೈತ ಮಹಿಳೆಯರ ಆರೋಗ್ಯ ರಕ್ಷಣೆ ಮತ್ತು ಅವರಿಗೆ ಉತ್ಕೃಷ್ಟ ದರ್ಜೆಯ ಚಿಕಿತ್ಸೆ ಲಭಿಸಲು ಪೂರಕವಾಗುವ *ಯಶಸ್ವಿನಿ ಆರೋಗ್ಯ ಯೋಜನೆ* ಅನುಷ್ಠಾನ ಗೊಳಿಸಿದ್ದಾರೆ. *ಸರ್ಕಾರಿ ಶಾಲೆಗಳಲ್ಲಿ ದಾಸೋಹ* (ಮಧ್ಯಾಹ್ನದ ಬುತ್ತಿ) ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಸಿರುವ ಮೂಲಕ, ಅವರು ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಎರಡನ್ನೂ ಉತ್ತೇಜಿಸವಲ್ಲಿ ಮಹತ್ವದ ಪಾತ್ರ ವಹಿಸಿದವರು.” ಎಂದು ಸ್ಮರಿಸಿದರು.

ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಅವರ ದೃತಿಗೆಡದೆ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತಾ , “*ರಾಜಕುಮಾರ್* ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ಅವರು ಎದೆಗುಂದದೆ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ನಿಭಾಯಿಸಿದರು. ಬರಗಾಲದ ಸಂಧರ್ಭದಲ್ಲಿ ಬತ್ತಿದ ಕೆರೆಗಳಿಗೆ ಮರುಜೀವ ನೀಡಿದರು ಹಾಗೂ *ಮೋಡಬಿತ್ತನೆ* ಮಾಡುವಂತ ವೈಜ್ಞಾನಿಕ ಯೋಜನೆಗಳನ್ನು ರೂಪಿಸುವುದಕ್ಕೆ ಮುಂದಾಗಿದ್ದರು. ತಮ್ಮ ಇಳಿವಯಸ್ಸಿನಲ್ಲೂ ಯುವಕರಂತೆ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದ, ಅವರ ಈ ಅನನ್ಯ ಸಾಧನೆಗಳು ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರುತ್ತದೆ. ಮುಳುಗಿದ ಸೂರ್ಯ ಮತ್ತೆ ಹುಟ್ಟಿ ಬರುವಂತೆ, ಇಂದು ಅಸ್ತಂಗತರಾದ ಅವರು ಮತ್ತೆ, ಕರ್ನಾಟಕ ಜನತೆಯ ಅಂತರಂಗದಲ್ಲಿ ಎಲ್ಲರ ಅಂತಃಶಕ್ತಿಯ ದ್ವನಿಯಾಗಿ, ಪ್ರೀತಿಯ ಸೆಲೆಯಾಗಿ, ಅಭಿವೃದ್ಧಿಯ ಹರಿಕಾರರಾಗಿ ಮೂಡಿದ್ದಾರೆ ಹಾಗೂ ಶಾಶ್ವತವಾಗಿ ನೆಲಸುತ್ತಾರೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಹಾಗೂ ಆತ್ಮೀಯರಿಗೆ ನೀಡಿ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಆಶಿಸುತ್ತೇನೆ” ಎಂದು ಈ ಸಂದರ್ಭದಲ್ಲಿ *ಶ್ರೀ ಯು ಟಿ ಖಾದರ್ ಅವರು ತಮ್ಮ ನುಡಿ ನಮನ ಸಲ್ಲಿಸಿದ್ದಾರೆ*.

Leave a Reply

Your email address will not be published. Required fields are marked *

error: Content is protected !!