ಬೆಳಗಾವಿ-೨೬:ಮೊನ್ನೆ ಸೋಮವಾರ ಪೌರ ಕಾರ್ಮಿಕರ ದಿನಾಚರಣೆ. ಆದರೆ, ತಮ್ಮ ದಿನವನ್ನೆ ಬಹಿಷ್ಕರಿಸುವ ಮೂಲಕ ಬೆಳಗಾವಿಯಲ್ಲಿ ಪೌರ ಕಾರ್ಮಿಕರು ಧರಣಿಗೆ ಮುಂದಾದರು. ಸೇವೆ ಖಾಯಂಗೊಳಿಸುವುದು, ಬೆಳಗಿನ ತಿಂಡಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಮೊನ್ನೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಸೋಮವಾರ ಧರಣಿ ಕುಳಿತ ಪೌರ ಕಾರ್ಮಿಕರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇವಲ ಪೌರ ಕಾರ್ಮಿಕರ ದಿನ ಆಚರಿಸಿದರೆ ಸಾಲದು. ನಮ್ಮ ಸಮಸ್ಯೆಗಳನ್ನು ಬಗೆಹರಿಸಿ, ಆಮೇಲೆ ಕಾರ್ಯಕ್ರಮ ಮಾಡುವಂತೆ ಆಡಳಿತಕ್ಕೆ ಒತ್ತಾಯಿಸಿದರು.
ಕಳೆದ ಒಂದೂವರೆ ವರ್ಷದಿಂದ ಖಾಯಂ ನೇಮಕಾತಿ ಮಾಡದೇ ಇರುವ 100 ಜನ ಪೌರಕಾರ್ಮಿಕರಿಗೆ ತಕ್ಷಣವೇ ಖಾಯಂ ನೇಮಕಾತಿ ಆದೇಶ ಪತ್ರ ನೀಡಬೇಕು. ಅದೇ ರೀತಿ 134 ಸಂಖ್ಯಾತಿರಿಕ್ತ (Supernumerary) ಪೌರಕಾರ್ಮಿಕರಿಗೆ ಖಾಯಂ ಆದೇಶ ನೀಡಬೇಕೆಂದು 2023ರ ಅಕ್ಟೋಬರ್ 27ರಂದು ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಭಿವೃದ್ಧಿ ಬೆಂಗಳೂರು ಇವರಿಂದ ಸೇರ್ಪಡೆ ಆದೇಶ ನೀಡಿ, ಒಂದು ವರ್ಷ ಆಗುತ್ತಾ ಬಂದರೂ ಇನ್ನು ಯಾವುದೇ ಕ್ರಮ ಜರುಗಿಸಿಲ್ಲ. ಈ ಸಂಬಂಧ ನೇಮಕಾತಿ ಪ್ರಕಟಣೆ ಹೊರಡಿಸಬೇಕು.
ಇದೇ ಆಗಸ್ಟ್ 21ರಂದು ನಡೆದ ಸಭೆಯಲ್ಲಿ ಒಪ್ಪಿಕೊಂಡಂತೆ ಎಲ್ಲ 253 ಪೌರಕಾರ್ಮಿಕ ವಸತಿ ಗೃಹಕ್ಕೆ ಐಚ್ಛಿಕ ಪತ್ರ ನೀಡುವ ಬಗ್ಗೆ ಸೂಚನಾ ಪತ್ರಗಳನ್ನು ಜಾರಿ ಮಾಡಬೇಕು. ಇನ್ನು ಆನಂದವಾಡಿಯ ರಮಾಬಾಯಿ ಅಂಬೇಡ್ಕರ ಹಾಲ್‌ನಲ್ಲಿ ಆಧುನಿಕ ಜಿಮ್ ಮತ್ತು ಗ್ರಂಥಾಲಯಕ್ಕೆ 2023-24ನೇ ಸಾಲಿನ ಕೀಯಾ ಯೋಜನೆಯಲ್ಲಿ ಅನುಮೋದನೆಗೊಂಡ 38 ಲಕ್ಷ ರೂಪಾಯಿ ಮಿಸಲಿಟ್ಟ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಬೇಕು. ಅಲ್ಲದೇ 154 ಮಂದಿ ಖಾಯಂ ಪೌರಕಾರ್ಮಿಕರಿಗೆ ಕಳೆದ 7 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ಸಂಬಳ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಈ ಧರಣಿಯಲ್ಲಿ ಒತ್ತಾಯಿಸಿದರು.
ಪ್ರತಿಭಟನಾನಿರತ ಮುನಿಸ್ವಾಮಿ ಭಂಡಾರಿ ಧರಣಿಯಲ್ಲಿ ಪತ್ರಿಕಾ ವರದಿಗಾರ ಜೊತೆಗೆ ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸದೇ ಸರ್ಕಾರ, ಇವತ್ತಿನ ದಿನ ನಮ್ಮ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪೌರ ಕಾರ್ಮಿಕರ ದಿನ ಆಚರಿಸುತ್ತಿರುವುದು ನಮಗೆ ಯಾವುದೇ ರೀತಿ ಖುಷಿ ತಂದಿಲ್ಲ. ನಮ್ಮನ್ನು ಕೇವಲ ದುಡಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿಯವರು ನಮ್ಮ ಪಾದಪೂಜೆ ಮಾಡುತ್ತಾರೆ. ಆದರೆ, ಇಲ್ಲಿ ನೋಡಿದರೆ ನಮ್ಮನ್ನು ಕಾಲ ಕಸದಂತೆ ನೋಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವಲು ಸಮಿತಿ ಸಫಾಯಿ ಕರ್ಮಚಾರಿ ಜಿಲ್ಲಾಧ್ಯಕ್ಷ ದೀಪಕ್ ವಾಘೇಲಾ ಪತ್ರಿಕಾ ಮಾದ್ಯಮ ಜೊತೆಗೆ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 1350 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಪೈಕಿ 540 ಖಾಯಂ ಕಾರ್ಮಿಕರಿದ್ದು, ಇನ್ನು 810 ಜನರ ಸೇವೆ ಖಾಯಂಗೊಳಿಸಿಲ್ಲ. ಹಾಗಾಗಿ, ಸೇವೆ ಖಾಯಂಗೊಳಿಸಬೇಕು. ಅದೇ ರೀತಿ ಹುಬ್ಬಳ್ಳಿ-ಧಾರವಾಡ, ಬೆಂಗಳೂರು, ಮೈಸೂರು ಮಹಾನಗರ ಪಾಲಿಕೆಗಳಲ್ಲಿ ಬೆಳಗಿನ ಉಪಹಾರ ನೀಡುವಂತೆ ಇಲ್ಲಿ ನಮಗೂ ನೀಡಬೇಕು. ಮಲತಾಯಿ ಧೋರಣೆ ಕೈ ಬಿಟ್ಟು ನ್ಯಾಯಯುತ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಮುನಿಸ್ವಾಮಿ ಭಂಡಾರಿ ಸೇರಿದಂತೆ ಅನೇಕ ಪೌರ ಕಾರ್ಮಿಕರು ಉಪಸ್ಥಿತಿರಿದ್ದರು.