ಬೆಳಗಾವಿ-೨೧: ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದರು ಯಾವುದೇ ಸರ್ಕಾರಗಳು ಸಮಾಜಕ್ಕೆ ಮೀಸಲಾತಿ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ರವಿವಾರ 22-09-2024 ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ವಕೀಲರ ಪೂರ್ವಭಾವಿ ಸಭೆ ಕರೆದಿದ್ದು ಇದರಲ್ಲಿ ರಾಜ್ಯದಾದ್ಯಂತ ಸರ್ಕಾರ ವಿರುದ್ಧ ವಕೀಲರು ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂದು ಪಂಚಮಸಾಲಿ ಹಿರಿಯ ಮುಖಂಡರಾದ ಬಿ ಎಲ್ ಪಾಟೀಲ್ ಹೇಳಿದರು.
ಜಿಲ್ಲೆಯ ಅಥಣಿ ಪಟ್ಟಣದಲ್ಲಿಂದು ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಸಮಾಜಕ್ಕೆ ಮೀಸಲಾತಿಗಾಗಿ ಆರು ಹಂತದ ಪ್ರತಿಭಟನೆಗಳೊಂದಿಗೆ ನಮ್ಮ ಬೇಡಿಕೆಯನ್ನು ಸರ್ಕಾರಗಳ ಮುಂದೆ ಮಂಡಿಸಲಾಗಿದೆ, ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ನಿರ್ಲಕ್ಷ್ಯದ ಧೋರಣೆ ಖಂಡಿಸಿ ಅಂತಿಮವಾಗಿ ಮಾಡು ಇಲ್ಲವೇ ಮಡಿ ಎಂಬಂತೆ ವಕೀಲರ ರೂಪದಲ್ಲಿರುವ ಶಕ್ತಿಯನ್ನು ಅನುಬಾಂಬ್ ರೀತಿಯಲ್ಲಿ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಸಮಾಜದ ಸಂಕಟಗಳನ್ನು ಕೇಳಲು ಮುಂದಾಗದ ಕಿವುಡ ಮತ್ತು ಮೂಕ ಸರ್ಕಾರದ ವಿರುದ್ಧ ನಾವೆಲ್ಲರೂ ವಕೀಲರು ಸೇರಿ ಅಂತಿಮವಾಗಿ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಾವು ರವಿವಾರ ಬೆಳಗಾವಿಯಲ್ಲಿ ಸಭೆಯನ್ನು ಸೇರಲಿದ್ದೇವೆ. ಪಂಚಮಸಾಲಿ ಸಮಾಜದ ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಗೆ ಬರುವಂತೆ ಪಾಟೀಲ್ ಕರೆ ನೀಡಿದರು.
ಸರ್ಕಾರ ವಿರುದ್ಧ ಕೊನೆಯ ಹಂತದ ಹೋರಾಟವನ್ನು ಮಾಡಲಾಗುತ್ತಿದ್ದು ರವಿವಾರ ಬೆಳಗಾವಿಯ ಗಾಂಧಿ ಭವನದಲ್ಲಿ ಮೊದಲು ಚರ್ಚೆ ನಡೆಸಿ, ನಂತರ ರಾಣಿ ಚೆನ್ನಮ್ಮ ವೃತ್ತದ ವರೆಗೆ ಪಾದಯಾತ್ರೆ ಮುಖಾಂತರ ತೆರಳಿ ಅಲ್ಲಿ ಮಾಲಾರ್ಪಣೆ ನಡೆಸಿ ನಂತರ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಬಿ.ಎಲ್.ಪಾಟೀಲ್ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ಚಿಕ್ಕೋಡಿ ವಿಭಾಗದ ಮುಖಂಡರಾದ ಸುಭಾಷ್ ನಾಯಿಕ್ ಮತ್ತು ತಾಲೂಕ ಪಂಚಮಸಾಲಿ ವಕೀಲರ ಸಂಘದ ಅಧ್ಯಕ್ಷ ಎಸ್. ಎಸ್.ಪಾಟೀಲ. ಉಪಾಧ್ಯಕ್ಷರಾದ ಎಸ್.ಎಮ್. ಹಿಕಡಿ, ಕಾರ್ಯದಶಿಗಳಾದ ಆನಂದ ಹಿಪ್ಪರಗಿ, ಹಿರಿಯ ವಕೀಲರಾದ ಬಿ.ಬಿ. ಹೊನಗೌಡ, ಎ.ಎ. ಹುದ್ದಾರ ಸೇರಿದಂತೆ ಸಮಸ್ತ ಪಂಚಮಸಾಲಿ ಸಮಾಜದ ನ್ಯಾಯವಾದಿಗಳು ಹಾಜರಿದ್ದರು.