*ಕಡ್ಡಾಯವಾಗಿ ನೀರಿನ ಗುಣ ಮಟ್ಟ ಪರೀಕ್ಷೆ ಮಾಡಿ: ಜಿ.ಪಂ. ಸಿ.ಇ.ಓ.ರಾಹುಲ್ ಶಿಂಧೆ ಸೂಚನೆ*
ಬೆಳಗಾವಿ-23: ಗ್ರಾಮೀಣ ಪ್ರದೇಶದಲ್ಲಿ ಕಲುಷಿತ ನೀರಿನಿಂದ ಯಾವುದೇ ತೊಂದರೆ ಯಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ ಕಾರ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ವೀಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಫ್.ಟಿ,ಕೆ ಕಿಟ್ ಬಳಕೆ ಮಾಡಿ ನೀರಿನ ಗುಣ ಮಟ್ಟ ಪರೀಕ್ಷೆ ಮಾಡಿ ವರದಿಯನ್ನು ಕಡ್ಡಾಯವಾಗಿ ನೀಡುವುದು. ಬಹುಗ್ರಾಮ ಕುಡಿಯುವ ನೀರು ಸರಬರಾಜು ಬಗ್ಗೆ ದಿನಾಲೂ ಚಾಲ್ತಿಯಲ್ಲಿರುವ, ಸ್ಥಗಿತಗೊಂಡಿರುವ ಹಾಗೂ ಸ್ಥಗಿತಗೊಂಡಿರುವುದಕ್ಕೆ ಕುಡಿಯುವ ನೀರಿಗೆ ಪರ್ಯಾಯ ಮಾರ್ಗದ ಬಗ್ಗೆ ವರದಿ ಮಾಡಬೇಕೆಂದು ಸಹಾಯಕ ಕಾರ್ಪಾಲಕ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರಿಗೆ ಸೂಚನೆ ನೀಡಿದರು. ಗ್ರಾಮದಲ್ಲಿ ನೀರು ಪರೀಕ್ಷೆ ಮಾಡುವಾಗ ನೀರಿನ ಮೂಲಗಳ ಪರೀಕ್ಷೆ ಜೊತೆಗೆ ನೀರು ಸರಬರಾಜು ಆಗುವ ಕೊನೆಯ ಹಂತದಲ್ಲಿ ತಲುಪುವ ನೀರು ಕೂಡ ಪರೀಕ್ಷೆ ಮಾಡಬೇಕೆಂದು ಸೂಚನೆ ನೀಡಿದರು. ಆರೋಗ್ಯ ಅಧಿಕಾರಿಗಳಿಂದ ನೀರಿನಮೂಲಗಳ ಪರೀಕ್ಷೆಯ ಮಾದರಿಗಳ ವರದಿಯನ್ನು ತೆಗೆದುಕೊಂಡು ಕ್ರಮ ವಹಿಸಬೇಕು. ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗುವದರಿಂದ ಕುಡಿಯುವ ನೀರಿನ ಕಾಳಜಿ ವಹಿಸಲು ಗ್ರಾಮಗಳಲ್ಲಿ ಕೂಡ ವ್ಯಾಪಕವಾಗಿ ಜನ ಜಾಗೃತಿ ಮೂಡಿಸಲು ಐ.ಇ.ಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಿತಾರಾ (ಸಿ.ಇ.ಒ. ಟಾಸ್ಕ ಅಸೈನಮೆಂಟ ಆಂಡ್ ರಿವ್ಯೂವ್ ಅಪ್ಲಿಕೇಶನ್) ಈಗಾಗಲೇ ಬಿಡುಗಡೆಗೊಳಿಸಿದ್ದು ಅದನ್ನು ಇನ್ಸ್ಟಾಲ್ ಮಾಡಿ ತಮ್ಮ ತಾಲೂಕು ವ್ಯಾಪ್ತಿಯಲ್ಲಿ ನಿಯಮಿತವಾಗಿ ಸಂಚರಿಸಿ ತಮ್ಮ ಇಲಾಖೆಗಳಿಂದ ಜರುಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಛಾಯಾಚಿತ್ರಗಳನ್ನು ಅಪಲೋಡ್ ಮಾಡುವುದು ಜೊತೆಗೆ ತಾಲೂಕುಗಳ ಅಭಿವೃದ್ಧಿಗೆ ಮುಂದಾಗುಂತೆ ತಿಳಿಸಿದರು.
ಎಸ್.ಬಿ.ಎಮ್. ಗೆ ಸಂಬಂಧಿಸಿದಂತೆ ವೈಯಕ್ತಿಕ ಶೌಚಾಲಯಗಳ ಫಲಾನುಭವಿಗಳ ಅರ್ಜಿಗಳ ಪರಿಶೀಲನೆ ಮಾಡುವುದು. ಕಾರ್ಯಾದೇಶ ನೀಡಲು ಬಾಕಿ ಇರುವ ಗ್ರಾ.ಪಂ. ಗಳಿಗೆ ಒಂದು ವಾರದೊಳಗೆ ಪೂರ್ಣಗೊಳಿಸುವುದು. ಅಥಣಿ, ಬೈಲಹೊಂಗಲ, ಹುಕ್ಕೆರಿ ಮತ್ತು ಮೂಡಲಗಿ ತಾಲ್ಲೂಕಿನಲ್ಲಿರುವ ಎಲ್ಲ ಸಮುದಾಯ ಶೌಚಾಲಯಗಳನ್ನು ಒಂದು ವಾರದೊಳಗೆ ಪೂರ್ಣ ಗೊಳಿಸಿ ವರದಿ ಸಲ್ಲಿಸುವುದು ಜಿಲ್ಲೆಯ ಎಲ್ಲ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು (ಪಂ.ರಾಜ್) ಇವರು ಈ ಒಂದು ವಾರ ಎಸ್.ಬಿ.ಎಮ್ ಯೋಜನೆಯ ಬಾಕಿ ಇರುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪೂರ್ಣಗೊಳಿಸಲು ತಿಳಿಸಿದರು.
ಈಗಾಗಲೇ ಪ್ರತಿ ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿಲಾಗಿದ್ದು, ಆಯಾ ನೋಡಲ್ ಅಧಿಕಾರಿಗಳು ತಾಲೂಕುಗಳಿಗೆ ಭೇಟಿ ನೀಡಿ ವಿವಿಧ ಯೋಜನೆಗಳಲ್ಲಿ ಬಹಳಷ್ಟು ಕೆಲಸಗಳು ಬಾಕಿ ಇದ್ದು ಅವುಗಳ ಬಗ್ಗೆ ತಾಲ್ಲೂಕಾ ಮಟ್ಟದ ನಿಯಮಿತವಾಗಿ ಸಭೆ ಜರುಗಿಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತಿರಿದ್ದರು.