ಧಾರವಾಡ-15 : ಹುಬ್ಬಳ್ಳಿ-ಧಾರವಾಡ ಅವಳಿ ನಗರ ಮಧ್ಯೆದ ಬಿ.ಆರ್.ಟಿ.ಎಸ್. ಸಾರಿಗೆ ಯೋಜನೆಯ ಅವೈಜ್ಞಾನಿಕತೆಯಿಂದ ಆಗುತ್ತಿರುವ ಅನಾನುಕೂಲತೆ ಸರಿಪಡಿಸುವ ಆಗ್ರಹಿಸಿ ಧಾರವಾಡ ಧ್ವನಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನವಲೂರ ಬ್ರಿಜ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಬಿಆರ್‌ಟಿಎಸ್ ಮಾರ್ಗದಲ್ಲಿ ಬರೀ ಚಿಗರಿ ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಆದರೆ, ಇನ್ನೊಂದೆಡೆ ಸಾರ್ವಜನಿಕರ ವಾಹನಗಳು ಸಂಚರಿಸುತ್ತವೆ. ಆದರೆ ಸಾರ್ವಜನಿಕ ವಾಹನಗಳ ಪ್ರಮಾಣ ನಿತ್ಯ ಅಧಿಕವಾಗುತ್ತಿದೆ. ದಿನ ಬೆಳಗಾದರೆ ನೂರಾರು ಹೊಸ ವಾಹನಗಳು ರಸ್ತೆಗೆ ಇಳಿಯುತ್ತಿವೆ.
ಈಗಾಗಲೇ ಸಾರ್ವಜನಿಕರಿಗೆ ನಿಗದಿಪಡಿಸಿರುವ ರಸ್ತೆಯಲ್ಲಿ ಮಾತ್ರ ಈ ವಾಹನಗಳು ಸಂಚರಿಸಬೇಕಿರುವುದು ಕಡ್ಡಾಯವಾಗಿದೆ. ಅತ್ತ ಕಡೆ ಸಾರ್ವಜನಿಕರ ವಾಹನಗಳು ಬಿ.ಆರ್.ಟಿ.ಎಸ್. ಸಾರಿಗೆಯ ಮಾರ್ಗದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.
ಇನ್ನೊಂದೆಡೆ ಸಾರ್ವಜನಿಕರ ವಾಹನಗಳು ಸಂಚರಿಸುವ ರಸ್ತೆಯು ದ್ವಿಪಥ ಇದೆ. ಆದರೆ, ಈ ರಸ್ತೆಗೆ ಹೊಂದಿಕೊಂಡಿರುವ ಮನೆ, ವಾಣಿಜ್ಯ ಮಳಿಗೆ, ಸರಕಾರಿ ಕಚೇರಿಗಳು, ಖಾಸಗಿ ಒಡೆತನದ ಆಸ್ತಿ/ಕಟ್ಟಡಗಳಿವೆ. ಸದರಿ ಸ್ಥಳಗಳಲ್ಲಿ ವಾಹನಗಳ ನಿಲುಗಡೆ ಆಗುತ್ತಿರುವುದರಿಂದ ದ್ವಿಪಥ ರಸ್ತೆ ಮತ್ತಷ್ಟು ಇಕ್ಕಟ್ಟಾಗಿದೆ. ಧಾರವಾಡ ನಗರದ ಲಕ್ಷ್ಮೀ ಟಾಕೀಜ್ ಬಳಿಯ ಬ್ಯಾರಿಕೇಡ್ ತೆಗೆದು, ತಹಶೀಲ್ದಾರ್ ಕಛೇರಿ ಕಡೆಯಿಂದ ಸಂಗಮ ಥಿಯೇಟರ್ ಸರ್ಕಲ್ ಮೂಲಕ ಟಿಕಾರೆ ರೋಡ್‌ನತ್ತ ವಾಹನಗಳು ತೆರಳಲು ಅನುಕೂಲ ಮಾಡಬೇಕು.
ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಮುಂದಿರುವ ಅವೈಜ್ಞಾನಿಕ ಸಿಗ್ನಲ್ ಲೈಟ್ ಸರಿಪಡಿಸಿ, ವಾಹನಗಳು & ವಿದ್ಯಾರ್ಥಿಗಳು ಕಾಲೇಜಿಗೆ ಹೋಗಿ ಬರಲು ಸುಗಮ ಸಂಚಾರ ವ್ಯವಸ್ಥೆ ಆಗಬೇಕು.ಯಾಲಕ್ಕಿ ಶೆಟ್ಟರ್ ಕಾಲೋನಿಯ ಎದುರಿನ ಬ್ಯಾರಿಕೇಡ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಬೇಕು.ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿನ ಬ್ಯಾರಿಕೇಡ್ ತೆಗೆದು ಸಾರ್ವಜನಿಕರ ವಾಹನಗಳಿಗೆ ಅವಕಾಶ ಒದಗಿಸಬೇಕು.
ಸುಮಾರು ಶೇ.೯೫ ರಷ್ಟು ಸಮಯ ಎಚ್.ಡಿ.ಬಿ.ಆರ್.ಟಿ.ಎಸ್. ರಸ್ತೆಗಳು ಖಾಲಿಯಾಗಿದ್ದರೆ, ಸಾರ್ವಜನಿಕ ರಸ್ತೆಯಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತ್ತಿದೆ. ಇದರಿಂದ ವಾಹನ ದಟ್ಟನೆ ಹೆಚ್ಚಾಗಿ ಸಾರ್ವಜನಿಕ ರಸ್ತೆಯಲ್ಲಿ ಸಾವು-ನೋವು ಸಂಭವಿಸುತ್ತಿವೆ.
ಧಾರವಾಡ-ಹುಬ್ಬಳ್ಳಿ ರಸ್ತೆಯಲ್ಲಿನ ಧಾರವಾಡದ ಜ್ಯುಬಿಲಿ ಸರ್ಕಲ್‌ದಿಂದ ನವಲೂರವರೆಗೆ ಮತ್ತು ಉಣಕಲ್ಲದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಸಾರ್ವಜನಿಕರ ಬೈಕ್, ಆಟೋರಿಕ್ಷಾ ಮತ್ತು ಕಾರುಗಳು ಸೇರಿದಂತೆ ಇತರ ಲಘು ವಾಹನಗಳು ಸಂಚರಿಸಲು ಬಹಳಷ್ಟು ಹರಸಾಹಸ ಪಡಬೇಕಾಗಿದೆ. ಆದ್ದರಿಂದ ಮೇಲೆ ಕಾಣಿಸಿದ ಹಂತಗಳಲ್ಲಿ ಸಾರ್ವಜನಿಕರಿಗೆ ಬಿ.ಆರ್.ಟಿ.ಎಸ್. ಸಾರಿಗೆ ಮಾರ್ಗದಲ್ಲಿ ಕಾರು, ಬೈಕ್, ಆಟೋರಿಕ್ಷಾ ಸಂಚರಿಸಲು ಅನುಮತಿ ನೀಡಬೇಕು.
ಒಟ್ಟಾರೆಯಾಗಿ ಎಚ್.ಡಿ.ಬಿ.ಆರ್.ಟಿ.ಎಸ್. ವ್ಯವಸ್ಥೆಯಲ್ಲಿನ ಲೋಪಗಳನ್ನು ಶೀಘ್ರವೇ ಸುಧಾರಿಸಿ, ಈ ಗಂಭೀರ ಸಮಸ್ಯೆಗೆ ಪರಿಹಾರ ಒದಗಿಸಲು ಸಮಿತಿ ರಚಿಸಬೇಕು. ಆ ಸಮಿತಿಯಲ್ಲಿ ಸಾರ್ವಜನಿಕರನ್ನು ಸೇರ್ಪಡೆ ಮಾಡಬೇಕು. ಶೀಘ್ರ, ಸುಗಮ, ಸುರಕ್ಷಿತ ಪ್ರಯಾಣಕ್ಕೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಯಿತು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಜೆಎಸ್ ಎಸ್ ಕಾರ್ಯದರ್ಶಿ ಡಾ.ಅಜಿತಪ್ರಸಾದ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಅಶೋಕ ಏಣಗಿ, ಜಯಕರ್ನಾಟಕ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸುಧೀರ ಮುಧೋಳ, ನವ ಕರ್ನಾಟಕ ಸಂಘಟನೆಯ ಗಿರೀಶ ಪೂಜಾರ,
ಉತ್ತರ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ್ ಪಾಟೀಲ,
ಮಾಜಿ ಮೇಯರ್ ಶಿವು ಹಿರೇಮಠ,
ಪಾಲಿಕೆ ಸದಸ್ಯ ಶಂಭು ಸಾಲಮನಿ,
ಸಂತೋಷ ಪಟ್ಟಣಶೆಟ್ಟಿ, ವೆಂಕಟೇಶ ರಾಯ್ಕರ, ಬಸವರಾಜ ಪೊಮೊಜಿ, ಕಲಂದರ ಮುಲ್ಲಾ, ಶರಣಗೌಡ ಗಿರಡ್ಡಿ,
ಮಂಜುನಾಥ ನೀರಲಕಟ್ಟಿ,
ಸವಿತಾ ಅಮರಶೆಟ್ಟಿ, ಇಮ್ರಾನ ತಾಳಿಕೋಟಿ, ದಲಿತ ಯುವ ಸೇನಾ, ಅಟೋಚಾಲಕರ-ಮಾಲಕರ ಸಂಘಟನೆಯ ನೂರಾರು ಜನರು ಪಾದಯಾತ್ರೆಯಲ್ಲಿದ್ದರು.