ಬೆಳಗಾವಿ-೦೧: ನಮ್ಮ ಪರಿಸರ ಉಳಿಸಲು ಈಗಲೇ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಅಪಾಯ ಕಟ್ಟಿಟ್ಟ ಬುತ್ತಿ. ಮತ್ತೆ ಸರಿಪಡಿಸಲಾಗದಂತಹ ಸ್ಥಿತಿಗೆ ನಾವು ತಲುಪುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಎಚ್ಚರಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕರಡಿಗುದ್ದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿರು.
ಕೇವಲ ಗಿಡ ಮರ ಬೆಳೆಸುವುದಷ್ಟೇ ಪರಿಸರ ರಕ್ಷಣೆಯಲ್ಲ. ನಮ್ಮ ಸುತ್ತಲಿನ ವಾತಾವರಣ ಕೆಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ಲಾಸ್ಟಿಕ್ ನಂತಹ ವಿಷಕಾರಿ ವಸ್ತುಗಳು ಪರಿಸರವನ್ನು ಹಾಳು ಮಾಡುತ್ತಿವೆ. ನೀರನ್ನು ಉಳಿಸುವುದು, ಗಾಳಿ ಮಲಿನವಾಗದಂತೆ ನೋಡಿಕೊಳ್ಳುವುದು ಸಹ ನಮ್ಮ ಕರ್ತವ್ಯ. ಸಣ್ಣ ಸಣ್ಣ ಕೆಲಸಗಳಿಂದ ನಾವು ನಮ್ಮ ಪರಿಸರವನ್ನು ಕಾಪಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.
ಪರಿಸರ ನಾಶದಿಂದ ಈಗಾಗಲೆ ದುಷ್ಪರಿಣಾಮವನ್ನು ಎದುರಿಸುತ್ತಿದ್ದೇವೆ. ಋುತುಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಸಕಾಲಕ್ಕೆ ಮಳೆ ಬಾರದೆ, ಅತಿವೃಷ್ಟಿ, ಅನಾವೃಷ್ಟಿಗಳುಂಟಾಗುತ್ತಿವೆ. ಹಾಗಾಗಿ ಎಷ್ಟು ಬೇಗ ನಾವು ಜಾಗೃತರಾಗುತ್ತೇವೋ ಅಷ್ಟು ಒಳ್ಳೆಯದು ಎಂದು ಚನ್ನರಾಜ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಅರಣ್ಯ ಅಧಿಕಾರಿಗಳಾದ ಮಂಜುನಾಥ ನಾಯ್ಕ, ರವಿಕಾಂತ ಎಸ್.ಎಮ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಪಾರವ್ವ ಅರಬಳ್ಳಿ, ಶೀಲಾ ಸ ಪಾಟೀಲ, ಸೌಮ್ಯ ಪಾಟೀಲ, ಸದಾಶಿವ ಮೂಖನವರ, ಮಹಾಂತೇಶ ರಾಚನ್ನವರ್, ಶಂಕರ ಮುರಕಿಭಾವಿ, ಅಜ್ಜಪ್ಪ ಮಲಣ್ಣವರ, ನಾಗಪ್ಪ ಕುರಿ, ಸಿದ್ದಪ್ಪ ಚೌಗುಲಾ, ಬಸವಣ್ಣೆಪ್ಪ ಅರಬಳ್ಳಿ, ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ಹಾಜರಿದ್ದರು.