ಬೆಳಗಾವಿ-೦೮:ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸುವ ವಾಗ್ದಾನ ನೀಡಿರುವ ಸಚಿವ ಸತೀಶ್ ಜಾರಕಿಹೊಳಿ ಚಿಕ್ಕೋಡಿಗೆ ಜಿಲ್ಲೆಯ ಸ್ಥಾನಮಾನ ನೀಡುವುದರಲ್ಲಿ ಯಶಸ್ವಿಯಾಗುತ್ತಾರೆ. ಅಲ್ಲದೆ ಹಿರಿಯ ಹೋರಾಟಗಾರರಾಗಿದ್ದ ದಿ. ಬಿ.ಆರ್.ಸಂಗಪ್ಪಗೋಳ ಕನಸು ನನಸು ಮಾಡುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಆರ್.ಬಿ.ಸಂಗಪ್ಪಗೋಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಜಿಲ್ಲೆ ರಚನೆಗೆ ನಿರಂತರವಾಗಿ ಶ್ರಮಿಸಿದ್ದ ಸಂಗಪ್ಪಗೋಳ ಅವರು ಚಿಕ್ಕೋಡಿ ಜಿಲ್ಲೆಯ ರಚನೆಯಾಗಲೇಬೇಕೆಂದು ತಮ್ಮ ಜೀವನವನ್ನೇ ಸವೆಸಿದ್ದರು ಎಂದು ಜಿಲ್ಲಾ ಹೋರಾಟದ ದಿನಗಳನ್ನು ಸ್ಮರಿಸಿದರು.
ನಿರೀಕ್ಷೆಗೂ ಮೀರಿ ಪ್ರಿಯಾಂಕಾ ಗೆಲುವಿಗೆ ಸತೀಶ್ ನೀಡಿರುವ ಈ ಮಾತೇ ಪ್ರಮುಖ ಕಾರಣವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಆಯ್ಕೆಯಾಗಿರುವುದು ಸಚಿವ ಸತೀಶ್ ಜಾರಕಿಹೊಳಿ ಅವರ ಸಾಮಾಜಿಕ ಸೇವೆಯ ಫಲವಾಗಿದೆ ಈ ಕುರಿತು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಪ್ರಾಮಾಣಿಕತೆಯ ಛಾಪು ಮೂಡಿಸಿರುವ ಸತೀಶ್ ಜಾರಕಿಹೊಳಿ ಸಾಮಾಜಿಕ ಸೇವೆಯಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ಗುರುತಿಸಿಕೊಂಡಿರುವ ಸಮಾಜ ಸೇವಕರಾಗಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಮೂಲಕ ಅವರ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಿದ್ದಾರೆ. ಅಲ್ಲದೆ ತಮ್ಮದೇಯಾದ ಮಾನವ ಬಂಧುತ್ವ ವೇದಿಕೆ ವತಿಯಿಂದ ನಿರಂತರ ಸಮಾಜ ಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತರಲು ಕಾರಣರಾಗಿದ್ದಾರೆ ಎಂದು ಹೇಳಿದರು.
ಪ್ರಮುಖವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರಲ್ಲಿ ಎಂದೂ ಹಿಂದೆ ಬೀಳದ ಅವರು ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಯಮಕನಮರಡಿ ಕ್ಷೇತ್ರಕ್ಕೆ ಅವರು ಬರುವುದಕ್ಕೂ ಮುನ್ನ ಅಲ್ಲಿ ಗುಡ್ಡ ಗಾಡು ಪ್ರದೇಶವೇ ಇತ್ತು. ಆದರೆ ಇವತ್ತು ಬಹುತೇಕ ಅಭಿವೃದ್ಧಿ ಹೊಂದಿದ ಕ್ಷೇತ್ರವಾಗಿ ಬದಲಾಗಿದೆ. ರಸ್ತೆಯ ಸಮಸ್ಯೆ, ಕುಡಿಯುವ ನೀರಿನ ವ್ಯವಸ್ಥೆ, ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯದ ಜೊತೆಗೆ ಹಳ್ಳಿಗಳಿಗೆ ಡಾಂಬರೀಕರಣ ಮಾಡುವ ಮೂಲಕ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಳೆಯನ್ನೇ ಹರಿಸಿದ್ದಾರೆ ಎಂದರು.
ತಮ್ಮ ಜನಪರ ಕಾರ್ಯಗಳಿಂದ ರಾಜ್ಯದಲ್ಲಿಯೇ ಅತ್ಯಂತ ಜನಪ್ರಿಯತೆ ಪಡೆದುಕೊಂಡಿರುವ ಸತೀಶ್ ಜಾರಕಿಹೊಳಿ ರಾಯಬಾಗ ಕ್ಷೇತ್ರದ ಕರೋಶಿ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಹನುಮಾನ ಹಾಗೂ ಕರಗಾಂವ ಏತ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಟ್ಟ ಮಾತನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿಂದ ಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಗೆಲುವಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿಯವರು ಹಣ, ಹೆಂಡದ ಆಮೀಷಗಳನ್ನು ನೀಡಿದ್ದಲ್ಲದೆ ಜಾರಕಿಹೊಳಿ ವಿರುದ್ಧ ಅಪಪ್ರಚಾರವನ್ನೂ ಮಾಡಿದ್ದರು. ಆದರೆ ಪ್ರಬುದ್ಧ ಮತದಾರರು ಸೂಕ್ತ ಅಭ್ಯರ್ಥಿಯನ್ನೇ ಆಯ್ಕೆಮಾಡಿ ದುರಾಡಳಿತಕ್ಕೆ ಕೊನೆ ಹಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.