ಬೆಳಗಾವಿ-೦೭: ಬೆಳಗಾವಿ ನಗರದ ಪಾಟೀಲ ಗಲ್ಲಿಯಲ್ಲಿರುವ ಶ್ರೀ ಶನಿದೇವಸ್ಥಾನದಲ್ಲಿ ಗುರುವಾರ ವಿವಿಧ ಧಾರ್ಮಿಕ ವಿಧಿವಿಧಾನ ಹಾಗೂ ಕಾರ್ಯಕ್ರಮಗಳ ಮೂಲಕ ಶ್ರೀ ಶನಿ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶನಿ ಜಯಂತಿ ನಿಮಿತ್ತ ಗುರುವಾರ ಪಾಟೀಲ ಗಲ್ಲಿಯ ಶ್ರೀ ಶನಿ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಶ್ರೀ ಶನಿ ಜನ್ಮೋತ್ಸವ, ನಂತರ ಮೆರವಣಿಗೆ ನಡೆಯಿತು. ನಂತರ ಶ್ರೀ ಶನಿ ದೇವರಿಗೆ ರುದ್ರಾಭಿಷೇಕ, ತೈಲಾಭಿಷೇಕ ಮಾಡಲಾಯಿತು. ಬಳಿಕ ಶನಿ ಶಾಂತಿ, ಶನಿ ಹೋಮ, ತೀಲ ಹೋಮ ಆಶಾ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಲೋಕದಲ್ಲಿ ಶಾಂತಿ, ಸುಖ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥನೆ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ವೇದ ವಿದ್ವಾಂಸ ನಾಗೇಶ್ ಅಲಿಯಾಸ್ ಬಾಲು ದೇಶಪಾಂಡೆ ಸಕಲ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಆನಂದ್ ಅಧ್ಯಾಪಕ್, ಪ್ರಕಾಶ್ ಅಧ್ಯಾಪಕ್, ವಿಲಾಸ್ ಅಧ್ಯಾಪಕ್ ಮತ್ತು ನಿರಂಜನ್ ಅಧ್ಯಾಪಕ್ ಉಪಸ್ಥಿತರಿದ್ದರು. ಶನಿ ಜಯಂತಿ ನಿಮಿತ್ತ ಪಾಟೀಲ ಗಲ್ಲಿ ಶನಿ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವದರ್ಶನ ಹಾಗೂ ಪೂಜೆ ಅಭಿಷೇಕಕ್ಕೆ ಭಕ್ತರ ದಂಡೇ ಹರಿದು ಬಂದಿತ್ತು. ದೇವಸ್ಥಾನದ ಹೊರಗಡೆ ಭಕ್ತರು ದೊಡ್ಡ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.