ಬೆಳಗಾವಿ-೨೮:ಒಂದು ವರ್ಷ ಆಡಳಿತದಲ್ಲಿ ಕಾಂಗ್ರೆಸ್ ಸರಕಾರದ ದೊಡ್ಡ ಪ್ರಮಾಣದ ಗಲಭೆ, ಹೆಚ್ಚಿದ ಅಪರಾಧಗಳ ಸಂಖ್ಯೆ ಗಮನಿಸಿದರೆ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹಾಗಾಗಿ ಗೃಹ ಸಚಿವ ಜಿ. ಪರಮೇಶ್ವರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ವಕ್ತಾರ ಆಗಿರುವ ಎಂ ಬಿ ಝಿರಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಲ್ಲಿ ಕೊಲೆ, ಗಲಭೆ, ಗುಂಪು ಘರ್ಷಣೆ, ಪೊಲೀಸರ ಮೇಲೆ ದಬ್ಬಾಳಿಕೆ ನಡೆಯುತ್ತಲೆ ಇವೆ. ಆದರೆ ರಕ್ಷಕರ ರಕ್ಷಣೆಗೆ ನಿಲ್ಲಬೇಕಾದ ಕಾಂಗ್ರೆಸ್ ಸರಕಾರ ದಾಳಿ ಕೋರರ ರಕ್ಷಣೆಗೆ ನಿಂತಿರುವುದು ಖಂಡನೀಯ ಎಂದು ಹೇಳಿದರು.
ಕೆಫೆ ಬಾಂಬ್ ಸ್ಫೋಟ,ಕುಕ್ಕರ್ ಬಾಂಬ್ ಸ್ಫೋಟ, ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಕಾಂಗ್ರೆಸ್ ಸರಕಾರ ತುಷ್ಟಿಕರಣದ ರಾಜಕಾರಣ ಮಾಡಿದೆ. ಇನ್ನೂ ಮುಂದೆಯಾದರೂ ರಾಜ್ಯ ಕಾಂಗ್ರೆಸ್ ಸರಕಾರ ಎಚ್ಚೆತ್ತುಕೊಂಡು ದಾಳಿ ಕೋರರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರುಪಡಿಸಬೇಕೆಂದು ಒತ್ತಾಯಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಕಾಂಗ್ರೆಸ್ ಸರಕಾರದ ಶಾಸಕರು ಹೇಳುವಂತೆ ಒಂದು ಪೈಸೆ ಅನುದಾನ ಕೂಡ ಶಾಸಕರಿಗೆ ಬಿಡುಗಡೆ ಯಾಗಿಲ್ಲ. ಇಂತಹ ಬೇ ಜವಾಬ್ದಾರಿ ಸರಕಾರದ ಕೊಡುಗೆ ಶೂನ್ಯ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅನೀಲ ಬೆನಕೆ,ಗೀತಾ ಸುತಾರ,ಹನುಮಂತ ಕೊಂಗಾಲಿ ಇತರರು ಹಾಜರಿದ್ದರು.