ರಾಯಬಾಗ-೦೪: ರಾಯಬಾಗ ವಿಧಾನಸಭೆ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಕಬ್ಬೂರ ಹಾಗೂ ಕಂಕಣವಾಡಿಯಲ್ಲಿನ ಚೆಕ್ ಪೋಸ್ಟ್ ಗಳಿಗೆ ಗುರುವಾರ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಆಗಿರುವ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ಚೆಕ್ ಪೋಸ್ಟ್ ಗಳಲ್ಲಿ ಬರುವ ವಾಹನಗಳನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು. ಯಾವುದೇ ನಿಯಮಗಳ ಉಲ್ಲಂಘನೆ ಆಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಬಳಿಕ ರಾಯಬಾಗ ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಅವರು, ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಮತಗಟ್ಟೆಗಳಲ್ಲಿನ ಮೂಲಭೂತ ಸೌಕರ್ಯಗಳ ಕುರಿತು ಖಚಿತಪಡಿಸಿಕೊಳ್ಳಬೇಕು. ಮತದಾನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಸರಿಯಾಗಿ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ನಂತರ ರಾಯಬಾಗ ಪಟ್ಟಣದ ಮಹಾವೀರ ನ್ಯೂ ಇಂಗ್ಲಿಷ್ ಸೂಲ್ಕ್ ನಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಬಗ್ಗೆ ಸ್ಥಳಗಳ ಪರಿಶೀಲನೆ ನಡೆಸಿದರು.
ತಾಪಂ ಇಒ ಆನಂದ ಬಾಲಪ್ಪನ್ನವರ, ತಹಶೀಲ್ದಾರ ಪ್ರಶಾಂತ ಚನ್ನಗೊಂಡ, ಸಹಾಯಕ ನಿರ್ದೇಶಕ(ಗ್ರಾಉ) ಅರುಣ ಮಾಚಕನ್ನವರ, ಐಇಸಿ ಸಂಯೋಜಕ ಮುತ್ತುರಾಜ ಗದಾಡಿ ಮತ್ತಿತರರು ಉಪಸ್ಥಿತರಿದ್ದರು.