ಬೆಳಗಾವಿ-14: ಕಳೆದ 20 ರಿಂದ 25 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ತಮಗೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದು ಆರೋಪಿಸಿ, ಕೆ.ಯು.ಡಬ್ಲ್ಯೂ.ಎಸ್ ಕಾರ್ಮಿಕರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಅಲ್ಲದೆ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಏಕಾಏಕಿ ‘ಥಂಬ್’ ಸ್ಥಗಿತ ಕಾರ್ಮಿಕರ ಆತಂಕ : ಬೆಳಗಾವಿಯ ಕೆ.ಯು.ಡಬ್ಲ್ಯೂ.ಎಸ್ ವಿಭಾಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ದುಡಿಯುತ್ತಿರುವ ಕಾರ್ಮಿಕರಿಗೆ ಈಗ ದಿಢೀರನೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಐದು ವರ್ಷಗಳ ಹಿಂದೆ ಈ ವಿಭಾಗವನ್ನು ಖಾಸಗಿ ಕಂಪನಿಯೊಂದಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ, ಇದೀಗ ಜುಲೈ 1ರಿಂದ ಜಾರಿಗೆ ಬರುವಂತೆ ಸುಮಾರು 45 ಜನ ಹಳೆಯ ಕಾರ್ಮಿಕರ ‘ಥಂಬ್’ (ಬಯೋಮೆಟ್ರಿಕ್ ಹಾಜರಾತಿ) ಅನ್ನು ಖಾಸಗಿ ಕಂಪನಿಯು ಕಾನೂನುಬಾಹಿರವಾಗಿ ಸ್ಥಗಿತಗೊಳಿಸಿದೆ. ಯಾವುದೇ ಪೂರ್ವ ಮಾಹಿತಿ ನೀಡದೆ ಏಕಾಏಕಿ ಥಂಬ್ ಬಂದ್ ಮಾಡಿರುವುದರಿಂದ ತಮಗೆ ಕೆಲಸವಿಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಹಳೆಯ ಸಿಬ್ಬಂದಿ ಕೈಬಿಡಲು ಖಾಸಗಿ ಕಂಪನಿ ಸಂಚು? : ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾರ್ಮಿಕ ಮುಖಂಡ ಮಹೇಶ್ ಅನಗೋಳಕರ ಮಾತನಾಡಿ, ಖಾಸಗಿ ಕಂಪನಿಯ ವಿರುದ್ಧ ಗಂಭೀರ ಆರೋಪ ಮಾಡಿದರು.
“ಖಾಸಗಿ ಕಂಪನಿಯು ಈಗಾಗಲೇ ಸುಮಾರು 600 ಹೊಸ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಇದೀಗ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ 360 ಹಳೆಯ ಕಾರ್ಮಿಕರನ್ನು ಹಂತಹಂತವಾಗಿ ಕೆಲಸದಿಂದ ಕೈಬಿಡಲು ವ್ಯವಸ್ಥಿತ ಸಂಚು ರೂಪಿಸಿದೆ. ಅಷ್ಟೇ ಅಲ್ಲದೆ, ಕಳೆದ ತಿಂಗಳ ವೇತನವನ್ನೂ ನೀಡದೆ ಕಂಪನಿಯು ಸತಾಯಿಸುತ್ತಿದ್ದು, ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರ ಪ್ರಮುಖ ಬೇಡಿಕೆಗಳು ವೇತನ ಪಾವತಿ: ತಕ್ಷಣವೇ ಕಾರ್ಮಿಕರಿಗೆ ಬಾಕಿ ಇರುವ ಕಳೆದ ತಿಂಗಳ ವೇತನವನ್ನು ಬಿಡುಗಡೆ ಮಾಡಬೇಕು.
ಕೆಲಸದ ಭದ್ರತೆ: ಹಳೆಯ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯಬಾರದು ಮತ್ತು ಅವರಿಗೆ ಸೂಕ್ತ ಕೆಲಸದ ಭದ್ರತೆ ಒದಗಿಸಬೇಕು.
ಹೋರಾಟದ ಎಚ್ಚರಿಕೆ: ಜಿಲ್ಲಾಡಳಿತ ಮಧ್ಯಪ್ರವೇಶಿಸಿ ತಮಗೆ ನ್ಯಾಯ ಒದಗಿಸದೇ ಇದ್ದಲ್ಲಿ, ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಕಾರ್ಮಿಕರು ಎಚ್ಚರಿಸಿದ್ದಾರೆ.
ಈ ವೇಳೆ ಕೆ.ಯು.ಡಬ್ಲ್ಯೂ.ಎಸ್ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಗಳು, ಸೇರಿದಂತೆ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.
