15/07/2026
IMG-20260713-WA0011

ಬೆಳಗಾವಿ-14: ಸಾರ್ವಜನಿಕರಿಗೆ ಬರೋಬ್ಬರಿ 165 ಕೋಟಿ ರೂಪಾಯಿ ವಂಚನೆ ಮಾಡಿರುವ ಗಂಭೀರ ಆರೋಪ ಬೆಳಗಾವಿಯ ಅಪೆಕ್ಸ್ ಕಂಪನಿ ವಿರುದ್ಧ ಕೇಳಿಬಂದಿದೆ. ಇದರಿಂದ ಕಂಗಾಲಾದ ರೈತರು, ಮಾಜಿ ಸೈನಿಕರು ಸೇರಿದಂತೆ ನೂರಾರು ಹೂಡಿಕೆದಾರರು ಸೋಮವಾರ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿ, ನ್ಯಾಯಕ್ಕಾಗಿ ಒತ್ತಾಯಿಸಿ ಮನವಿ ಸಲ್ಲಿಸಿದರು.
3 ವರ್ಷಗಳ ಹೂಡಿಕೆ, 2 ತಿಂಗಳಿಂದ ಸಿಗದ ಬಡ್ಡಿ: ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರು ಅಪೆಕ್ಸ್ ಕಂಪನಿಯಲ್ಲಿ ನಂಬಿಕೆಯಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಇದೀಗ ಕಂಪನಿಯ ಮಾಲೀಕರು ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಹೂಡಿಕೆದಾರರಾದ ಗಂಗಪ್ಪ ಅಕ್ಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಪೆಕ್ಸ್ ಕಂಪನಿಯ ಸಿಎಂಡಿ ಹಾಗೂ ಎಂಡಿ ಆಗಿರುವ ಸಂಕೇಶ್ವರದ ಮಾಗನೂರಿನ ಕಾಶಿನಾಥ್ ವಾಗೋರೆ ಮತ್ತು ಉಗಾರದ ಗಣೇಶ್ ಭಂಡಾರಿ ಎಂಬುವವರು ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ. ಇವರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಹೂಡಿಕೆದಾರರು ಜಿಲ್ಲಾಧಿಕಾರಿಗಳಿಗೆ ಮನವಿಯ ವೇಳೆ ಆಗ್ರಹಸಿದರು.
3,500 ಗ್ರಾಹಕರು ಭಾಗಿ ವಿಡಿಯೋ ಸಂದೇಶಕ್ಕೆ ಸೀಮಿತವಾದ ಮಾಲೀಕರು: “ಈ ಸಂಸ್ಥೆಯಲ್ಲಿ ರೈತರು, ಮಾಜಿ ಸೈನಿಕರು ಸೇರಿದಂತೆ ಸುಮಾರು 3,500 ಗ್ರಾಹಕರು ನಂಬಿಕೆಯಿಂದ ಹಣವನ್ನು ಠೇವಣಿ ಇರಿಸಿದ್ದರು. ಆದರೆ ಆ ಹಣವನ್ನು ಸಂಸ್ಥೆಯು ದುರ್ಬಳಕೆ ಮಾಡಿಕೊಳ್ಳುತ್ತಿದೆ.”
ಕಂಪನಿಯ ಪ್ರಮುಖರಾದ ಕಾಶಿನಾಥ್ ವಾಗೋರೆ ಹಾಗೂ ಗಣೇಶ್ ಭಂಡಾರಿ ಕಳೆದ 2 ತಿಂಗಳಿನಿಂದ ಗ್ರಾಹಕರಿಗೆ ಬಡ್ಡಿಯನ್ನು ನೀಡುತ್ತಿಲ್ಲ. “ಇನ್ನು 3 ತಿಂಗಳ ನಂತರ ಹಣ ನೀಡುತ್ತೇವೆ” ಎಂದು ಕೇವಲ ವಿಡಿಯೋ ಮೂಲಕ ಸಂದೇಶ ನೀಡುತ್ತಿದ್ದಾರೆಯೇ ಹೊರತು, ಪ್ರತ್ಯಕ್ಷವಾಗಿ ಜನರ ಮುಂದೆ ಬಂದು ಪರಿಸ್ಥಿತಿಯನ್ನು ತಿಳಿಸುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಅಪೆಕ್ಸ್ ಕಂಪನಿಯ ನೂರಾರು ಗ್ರಾಹಕರು ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮಗೆ ನ್ಯಾಯ ಒಡಗಿಸುವಂತೆ ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!