ಬೆಳಗಾವಿ-23 : ಸಮಾಜ ಸೇವೆ, ರಾಷ್ಟ್ರಭಕ್ತಿ ಮತ್ತು ಜನಕಲ್ಯಾಣದ ಮೌಲ್ಯಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಉದ್ದೇಶದಿಂದ ನಿರ್ಮಿಸಲಾದ ಜಗನ್ನಾಥರಾವ್ ಜೋಶಿ ಸ್ಮಾರಕ ಭವನವನ್ನು ಭಾನುವಾರ ನಗರದ ಸಂಘ ಸದನದ ನ್ಯೂ ಗೂಡ್ಸ್ ಶೆಡ್ ರಸ್ತೆಯಲ್ಲಿ ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಾಯಿತು.
ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ದತ್ತಾತ್ರೇಯ ಹೊಸಬಾಳೆ ಅವರು, ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿದ ಜಗನ್ನಾಥರಾವ್ ಜೋಶಿ ಅವರ ಸ್ಮರಣಾರ್ಥ ಈ ಭವನವನ್ನು ಇಡೀ ಸಮಾಜಕ್ಕೆ ಅರ್ಪಿಸಲಾಗಿದೆ ಎಂದು ಹೇಳಿದರು. ಜನವಿಕಾಸ ಹಾಗೂ ಜನಕಲ್ಯಾಣದ ಉದ್ದೇಶದಿಂದ ನಿರ್ಮಿಸಲಾದ ಈ ಭವನದ ಪ್ರತಿಯೊಂದು ಪೈಸೆಯೂ ಸದುಪಯೋಗವಾಗಬೇಕು ಮತ್ತು ಪ್ರತಿಯೊಂದು ಇಂಚು ಜಾಗವೂ ಸಮಾಜದ ಹಿತಕ್ಕಾಗಿ ಬಳಕೆಯಾಗಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಗುರುಸಿದ್ದ ಮಹಾಸ್ವಾಮಿಗಳು ಅವರು, ಜಗನ್ನಾಥರಾವ್ ಜೋಶಿ ಅವರ ವ್ಯಕ್ತಿತ್ವ ಹಾಗೂ ರಾಷ್ಟ್ರಭಕ್ತಿಯನ್ನು ಸ್ಮರಿಸಿದರು. 1977ರ ಅವಧಿಯಲ್ಲಿ ದೇಶದ ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳ ಕುರಿತು ಅವರು ನೀಡಿದ ಭಾಷಣಗಳು ಜನರಲ್ಲಿ ರಾಷ್ಟ್ರಪ್ರೇಮ ಜಾಗೃತಿಗೊಳಿಸಿದ್ದವು. ಅವರ ಮಾತುಗಳಲ್ಲಿ ಹಾಸ್ಯ, ಸರಳತೆ ಹಾಗೂ ಸಮಾಜದ ಬಗ್ಗೆ ಕಾಳಜಿ ಅಡಗಿರುತ್ತಿತ್ತು. ಇಂತಹ ವ್ಯಕ್ತಿಗಳನ್ನು ದೇವಮಾನವರು ಎಂದರೆ ತಪ್ಪಾಗಲಾರದು ಎಂದು ಅಭಿಪ್ರಾಯಪಟ್ಟರು.
ತಾವು ಸಹ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದು, ಇಂದು ಅದೇ ಸಂಘದ ವೇದಿಕೆಯಲ್ಲಿ ಮಾತನಾಡುತ್ತಿರುವುದು ಸಂತಸದ ಸಂಗತಿ ಎಂದು ತಿಳಿಸಿದ ಮಹಾಸ್ವಾಮಿಗಳು, ಇಂದಿನ ದಿನಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಬಲಪಡಿಸುವ ಕಾರ್ಯಕ್ರಮಗಳು ಈ ಭವನದಲ್ಲಿ ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಂಗವಾಗಿ ಗುರುಸಿದ್ದ ಮಹಾಸ್ವಾಮಿಗಳು, ದತ್ತಾತ್ರೇಯ ಹೊಸಬಾಳೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ ಸೇರಿದಂತೆ ಗಣ್ಯರು ದೀಪ ಬೆಳಗಿಸಿ ಭವ್ಯ ಸ್ಮಾರಕ ಭವನವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವರಾಜ ಡಂಬಳ ಅವರು, ಬೆಳಗಾವಿ ಹಾಗೂ ಚಿಕ್ಕೋಡಿ ಭಾಗಗಳಲ್ಲಿ ಸಂಘದ ಕಾರ್ಯ ಆರಂಭಗೊಂಡ ಹಿನ್ನೆಲೆಯನ್ನು ಸ್ಮರಿಸಿದರು. ಜಗನ್ನಾಥರಾವ್ ಜೋಶಿ ಕಂಡಿದ್ದ ಕನಸು ಇಂದು ನನಸಾಗಿದ್ದು, ಅವರ ಜೀವನದ ಆದರ್ಶಗಳು ಮತ್ತು ಮಾರ್ಗದರ್ಶನವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಘವೇಂದ್ರ ಕಾಗವಾಡ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನು ನೀಡಿದರು. ಕೊನೆಯಲ್ಲಿ “ವಂದೇ ಮಾತರಂ” ಗೀತೆಯೊಂದಿಗೆ ಸಮಾರಂಭವು ಯಶಸ್ವಿಯಾಗಿ ಮುಕ್ತಾಯಗೊಂಡಿತು.
