ಬೆಳಗಾವಿ-04: ನಗರದ ಖಡೆಬಜಾರ ಪೊಲೀಸ್ ಠಾಣೆ ವ್ಯಾಪ್ತಿಯ ಕಂಬಳಿಕೂಟದ ಕಾವೇರಿ ಕೊಡ್ರಿಂಕ್ಸ್ ಸಮೀಪದಲ್ಲಿ ನಿರ್ಮಿಸಲಾದ ಎರಡು ಹೊಸ ಪೊಲೀಸ್ ಚೌಕಿಗಳನ್ನು ಉದ್ಘಾಟಿಸಲಾಯಿತು.
ಬಳಿಕ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಡಿಸಿಪಿ ನಾರಾಯಣ ಬರಮನಿ ಅವರು, ಮಳೆ, ಬಿಸಿಲು ಹಾಗೂ ಹಬ್ಬ-ಹರಿದಿನಗಳ ಬಂದೋಬಸ್ತ್ ಕರ್ತವ್ಯಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಗೆ ಈ ಚೌಕಿಗಳು ವಿಶ್ರಾಂತಿ ಮತ್ತು ಕಾರ್ಯನಿರ್ವಹಣೆಗೆ ಅನುಕೂಲವಾಗಲಿವೆ ಎಂದು ಹೇಳಿದರು.
ಸಮರ್ಥ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ನಿರ್ಮಿಸಿರುವ ಈ ಚೌಕಿಗಳಿಗಾಗಿ ಪೊಲೀಸ್ ಇಲಾಖೆ ಕೃತಜ್ಞತೆ ಸಲ್ಲಿಸಲಾಯಿತು. ಇತರ ಸಂಘ-ಸಂಸ್ಥೆಗಳೂ ಇಂತಹ ಕಾರ್ಯಗಳಿಗೆ ಕೈಜೋಡಿಸಿದರೆ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ದೊರೆತು ಜನಪರ ಸೇವೆಯನ್ನು ಇನ್ನಷ್ಟು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಡಿಸಿಪಿ ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಅನಿಲ ಬೆನಕೆ, ನಗರ ಸೇವಕ ಜಯತೀರ್ಥ ಸವದತ್ತಿ ಹಾಗೂ ಸೊಸೈಟಿ ಮುಖ್ಯಸ್ಥ ಅಜಯ ಸೊನವಾಲ್ಕರ ಅವರು ಈ ಕಾರ್ಯವನ್ನು ಶ್ಲಾಘಿಸಿ, ಸಮಾಜದ ಹಿತಕ್ಕಾಗಿ ಇನ್ನಷ್ಟು ಜನರು ಇಂತಹ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
