27/05/2026
IMG-20260526-WA0080

ಬೆಳಗಾವಿ-26: ರಾಜ್ಯದಲ್ಲಿ ಪದೇ ಪದೇ ಕೋಮು ವಿಷ ಬೀಜ ಬಿತ್ತಿ ಸಮಾಜದ ಶಾಂತಿ ಹಾಗೂ ಸೌಹಾರ್ದ ಹಾಳು ಮಾಡಿದ ಕೋಮುವಾದಿ ಶಕ್ತಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಿರುವುದು ಅತ್ಯಂತ ಖಂಡನೀಯ ಹಾಗೂ ಅಪಾಯಕಾರಿ ಬೆಳವಣಿಗೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷ ಮೊಅಜ್ಜಮಜಾ ಮುಲ್ಲಾನಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಡಿಸಿ ಕಚೇರಿ ಆವರಣದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮೊಅಜ್ಜಮಜಾ ಮುಲ್ಲಾನಿ,ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಹರಡಿ, ಗಲಭೆ ಸೃಷ್ಟಿಸುವವರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೆಗೆದುಕೊಂಡಿರುವ ನಿರ್ಧಾರ ರಾಜ್ಯದ ಜನತಂತ್ರ, ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲಿನ ನೇರ ದಾಳಿಯಾಗಿದೆ. ಸಂವಿಧಾನ,ಕಾನೂನು ಮತ್ತು ಸೌಹಾರ್ದದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ದ್ವೇಷ ರಾಜಕಾರಣ ಮಾಡಿದವರನ್ನೇ ರಕ್ಷಿಸುವ ಕೆಲಸ ಮಾಡುತ್ತಿದೆ.ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸಿ,ಯುವಕರ ಮನಸ್ಸಿನಲ್ಲಿ ವಿಷ ತುಂಬಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ಇಂದು ಅವರಿಗೆ ಕ್ಲೀನ್ ಚಿಟ್ ನೀಡುತ್ತಿರುವುದು ರಾಜ್ಯದ ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸುವ ಕಾರ್ಯವಾಗಿದೆ ಎಂದು ಅವರು ಆರೋಪಿಸಿದರು.

ಇಲ್ಲಿ ರಾಜ್ಯ ಸರಕಾರ ಅಮಾಯಕರ ಮೇಲಿನ ಕೇಸುಗಳನ್ನು ಹಿಂಪಡೆದದ್ದು ಅಥವಾ ಕನ್ನಡ ಪರ ಸಂಘಟನೆಗಳ ಹೋರಾಟಗಾರರ ಕೇಸುಗಳನ್ನು ಹಿಂಪಡೆದದ್ದು,ರೈತರ ಹೋರಾಟ,ರೈತ ಪರಹೋರಾಟಗಾರರ ಕೇಸುಗಳನ್ನು ಹಿಂಪಡೆದದ್ದನ್ನು ನಾವು ಸ್ವಾಗತಿಸುತ್ತೇವೆ. ಅದೇ ಸಂದರ್ಭದಲ್ಲಿ ಪುನರಾವರ್ತಿತವಾಗಿ ನಿರಂತರವಾಗಿ ಕೋಮು ಪ್ರಚೋದನೆ ಮಾಡುವಂತಹ, ಕೋಮು ಘರ್ಷಣೆಗೆ, ಕೋಮು ಗಲಭೆಗಳಿಗೆ ಉತ್ತೇಜಿಸುವಂತಹ ರೀತಿಯಲ್ಲಿ ಅಥವಾ ದೇಶದ ವಿರುದ್ಧ ರೀತಿಯಲ್ಲಿ ಹೇಳಿಕೆ ಕೊಡುವಂತಹ ಬಿಜೆಪಿ ಸಂಘ ಪರಿವಾರದ ನಾಯಕರ ಮೇಲಿನ ಕೇಸುಗಳನ್ನು ಹಿಂಪಡೆದಿರುವುದನ್ನು ಒಪ್ಪಲಿಕ್ಕೆ ಸಾಧ್ಯವಿಲ್ಲ.
ದ್ವೇಷ ಭಾಷಣ,ಪ್ರಚೋದನೆ ಹಾಗೂ ಸಮಾಜ ಒಡೆಯುವ ರಾಜಕಾರಣ ನಡೆಸಿದವರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವುದು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ತೆಗೆದುಕೊಂಡ ನಿರ್ಧಾರವಾಗಿದ್ದು,ಇದು ಕರ್ನಾಟಕದ ಶಾಂತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಪಾಯವಾಗಿದೆ.ಸರ್ಕಾರದ ಈ ದ್ವಂದ್ವ ನಿಲುವಿನಿಂದ ಜನರ ವಿಶ್ವಾಸ ಕುಸಿಯುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ತಕ್ಷಣ ಈ ನಿರ್ಧಾರವನ್ನು ಮರುಪರಿಶೀಲಿಸಿ, ಕೋಮುವಾದಿ ಶಕ್ತಿಗಳಿಗೆ ನೀಡುತ್ತಿರುವ ರಾಜಕೀಯ ರಕ್ಷಣೆಯನ್ನು ನಿಲ್ಲಿಸಬೇಕು. ಇಲ್ಲವಾದರೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇನ್ನಷ್ಟು ತೀವ್ರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!