
ಬೆಳಗಾವಿ-05: ಪಂಚ ಪ್ರಾಂತ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ದೇಶದ ರಾಜಕೀಯ ಧೋರಣೆಗೆ ಸ್ಪಷ್ಟ ದಿಕ್ಕು ತೋರಿಸಿದ್ದು, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಹಿಂದೂಪರ ಅಲೆ ಸ್ಪಷ್ಟವಾಗಿ ವ್ಯಕ್ತವಾಗಿದೆ ಎಂದು ಬಿಜೆಪಿ ಮುಖಂಡ ಕಿರಣ ಜಾದವ್ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಒಟ್ಟಾರೆ ಚುನಾವಣೆಯಲ್ಲಿ ಜನತೆ ಅಭಿವೃದ್ಧಿ, ಭದ್ರತೆ ಮತ್ತು ಸಮಾನತೆಯ ಪರ ಮತ ಚಲಾಯಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಹಿಂದೂ ಸಮುದಾಯದ ಪರ ಒಲವು ಸ್ಪಷ್ಟವಾಗಿ ಗೋಚರಿಸಿದ್ದು, ಮತದಾರರು ತಮ್ಮ ಅಸ್ತಿತ್ವ ಮತ್ತು ಹಕ್ಕುಗಳ ರಕ್ಷಣೆಗೆ ಈ ಬಾರಿ ನಿರ್ಧಾರ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿತ್ತು. ಕಾನೂನು ಸುವ್ಯವಸ್ಥೆ ಹಿನ್ನಡೆ, ರಾಜಕೀಯ ಹಿಂಸಾಚಾರ ಹಾಗೂ ಮಹಿಳಾ ಭದ್ರತೆ ಸಮಸ್ಯೆಗಳು ಮತದಾರರ ನಿರ್ಧಾರಕ್ಕೆ ಕಾರಣವಾಗಿದ್ದು, ಅದರ ಪರಿಣಾಮವಾಗಿ ಹಿಂದೂಪರ ಅಲೆ ರೂಪದಲ್ಲಿ ಫಲಿತಾಂಶ ಹೊರಬಂದಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಜನತೆ ಇಟ್ಟಿರುವ ವಿಶ್ವಾಸ ಈ ಫಲಿತಾಂಶದಲ್ಲಿ ಪ್ರತಿಬಿಂಬಿತವಾಗಿದೆ. ಇದೇ ಧೋರಣೆ ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲಿಯೂ ಮುಂದುವರಿಯಲಿದೆ ಎಂದು ಕಿರಣ ಜಾದವ್ ವಿಶ್ವಾಸ ವ್ಯಕ್ತಪಡಿಸಿದರು.
