ಬೆಳಗಾವಿ-10: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಓಂ ಯೋಗ ಸಾಧನಾ ಸಂಸ್ಥೆ ವತಿಯಿಂದ ವಾರ್ತಾಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಯೋಗಾಸನ ತರಬೇತಿ ಶಿಬಿರ ನಡೆಸಲಾಯಿತು.
ಓಂ ಯೋಗ ಸಾಧನಾ ಸಂಸ್ಥೆಯ ವಿಜಯ ಕದಂ ಅವರು, ದೈನಂದಿನ ಕೆಲಸ ಕಾರ್ಯಗಳ ನಡುವೆಯೂ ಅತ್ಯಂತ ಕಡಿಮೆ ಅವಧಿಯಲ್ಲಿ ಯೋಗಾಭ್ಯಾಸ ಮಾಡುವ ಸರಳ ವಿಧಾನಗಳನ್ನು ತಿಳಿಸಿಕೊಟ್ಟರು.
ನಡಿಗೆ, ಸರಳ ಯೋಗಾಭ್ಯಾಸ ಹಾಗೂ ಹಿತಮಿತವಾದ ಊಟೋಪಹಾರದ ಮೂಲಕ ಮಾತ್ರ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಆದ್ದರಿಂದ ಎಷ್ಟೇ ಕೆಲಸದೊತ್ತಡ ಇದ್ದಾಗ್ಯೂ ಯೋಗಾಸನ ಮಾಡುವಂತೆ ಸಲಹೆ ನೀಡಿದರು.
ಬೆನ್ನು ನೋವು, ಮೊಣಕಾಲು ಹಾಗೂ ಕುತ್ತಿಗೆ ನೋವು ನಿವಾರಣೆಗೆ ಸಹಕಾರಿಗುವ ಕೆಲವೊಂದು ವ್ಯಾಯಾಮಗಳನ್ನು ಕುರ್ಚಿಯ ಮೇಲೆ ಕುಳಿತುಕೊಂಡು ಮಾಡುವ ವಿಧಾನಗಳನ್ನೂ ತಿಳಿಸಿಕೊಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ಮಾಧ್ಯಮ ಪ್ರತಿನಿಧಿಗಳ ಆರೋಗ್ಯದ ದೃಷ್ಟಿಯಿಂದ ಯೋಗ ಶಿಬಿರವನ್ನು ಆಯೋಜಿಸಲಾಗಿದೆ. ಮುಂಬರುವ ಶನಿವಾರ(ಫೆ.17) ಬೆಳಿಗ್ಗೆ ವಾರ್ತಾಭವನದಲ್ಲಿ ಬೆಳಿಗ್ಗೆ 7.30 ರಿಂದ ಶಿಬಿರ ನಡೆಯಲಿದೆ. ಎಲ್ಲ ಮಾಧ್ಯಮ ಪ್ರತಿನಿಧಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಮುರುಗೇಶ್ ಶಿವಪೂಜಿ, ಶ್ರೀಶೈಲ್ ಮಠದ, ರವೀಂದ್ರ ಉಪ್ಪಾರ, ಮೃತ್ಯುಂಜಯ ಯಲ್ಲಾಪುರಮಠ, ಇಮಾಮ್ ಹುಸೇನ್ ಗೂಡುನವರ, ರಾಜೇಂದ್ರ ಪೊವಾರ್, ರಾಜಶೇಖರ್ ಹಿರೇಮಠ, ಸುರೇಶ್ ನೇರ್ಲಿ, ಪಿ.ಕೆ.ಬಡಿಗೇರ, ಮತ್ತಿತರರು ಶಿಬಿರದಲ್ಲಿ ಹಾಜರಿದ್ದರು.