ಬೆಳಗಾವಿ-06: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಎನ್.ಕೆ. ಕರೆಣ್ಣವರ್ ಮತ್ತು ಇತರ ಪದಾಧಿಕಾರಿಗಳು ಮತ್ತು ಸದಸ್ಯರ ಮೇಲೆ ಹಲ್ಲೆ ನಡೆಸಿದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನೌಕರರ ಸಂಘ ಬೃಹತ್ ಪ್ರತಿಭಟನೆಯನ್ನು ನಡೆಸಿದರು.
ಸೋಮವಾರ ನಗರದ ಕೇಂದ್ರ ಡಿಸಿಸಿ ಬ್ಯಾಂಕ್ ಕಛೇರಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ನೂರಾರು ನೌಕರರು ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಲಕ್ಷ್ಮಣ ಸವದಿ ಹಾಗೂ ಪುತ್ರ ಚಿದಾನಂದ ಸವದಿ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದರು.
ಬಳಿಕ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರಿಗೆ ಘಟನೆಯ ಕುರಿತು ವಿವರಿಸಿದರು. ಕಾಂಗ್ರೆಸ್ ಸರಕಾರಕ್ಕೆ ಗೂಂಡಾ ರಾಜ್ಯಕೀಯ ಮಾಡುತ್ತಿದ್ದಾರೆಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಡಿಸಿಸಿ ಬ್ಯಾಂಕ್ ನೌಕರರ ಮನವಿಯನ್ನು ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಸಾಧ್ಯವಾದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಸಂಘದ ಅಧ್ಯಕ್ಷ ಎನ್.ಕೆ. ಕರೆಣ್ಣವರ್, ಪ್ರಧಾನ ಕಾರ್ಯದರ್ಶಿ ಡಿ.ಜೆ. ಕಾಮತಗಿ ಮತ್ತು ಸದಸ್ಯರಾದ ಅಭಯ್ ಲಕಾಡಿ ಮತ್ತು ಮಹಾಬಲ ಪಾಟೀಲ್ ಅವರು ಕಳೆದ ಬುಧವಾರ, ಜನವರಿ 3 ರಂದು ಅಥಣಿ ಕ್ಷೇತ್ರದ ಶಾಸಕ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮಣ ಎಸ್. ಸವದಿ ಅವರನ್ನು ಕೆಲಸಕ್ಕೆ ಸಂಬಂಧಿಸಿದ
ವಿಷಯಗಳಿಗೆ ಸಂಬಂಧಿಸಿದಂತೆ ಭೇಟಿ ಮಾಡಲು ಅಥಣಿ ಗ್ರಾಮಕ್ಕೆ ಹೋಗಿದ್ದರು. ಆ ಸಮಯದಲ್ಲಿ, ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿದರು.
ಈ ದಾಳಿಯಲ್ಲಿ, ಅಧ್ಯಕ್ಷ ಎನ್.ಕೆ. ಕರೆಣ್ಣವರ್ ಗಂಭೀರವಾಗಿ ಗಾಯಗೊಂಡು ಮೊದಲು ಅಥಣಿಯ ಸರ್ಕಾರಿ ಆಸ್ಪತ್ರೆಗೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮರುದಿನ ದಾಖಲಾಗಿದ್ದ ದೂರಿನ ಆಧಾರದ ಮೇಲೆ, ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ್ ಸವದಿ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮತ್ತೊಂದೆಡೆ, ಶಾಸಕ ಲಕ್ಷ್ಮಣ ಸವದಿ ಅವರ ಒತ್ತಡಕ್ಕೆ ಮಣಿದು, ಅಥಣಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ನಮ್ಮ ಅಧ್ಯಕ್ಷರ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ, ಅವರು ಸವದಿ ಅವರ ನಿವಾಸದಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ಬೆಳಗಾವಿ ಕೇಂದ್ರ ಡಿಸಿಸಿ ಬ್ಯಾಂಕ್ ನೌಕರರ ಯೂನಿಯನ್ ಸಂಘಟನೆಯ ನೂರಾರು ಕಾರ್ಯಕರ್ತರು ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಹಲವರು ಬೃಹತ್ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
