ಬೆಳಗಾವಿ-27 : ಶಹಾಪುರದಲ್ಲಿರುವ ಚಿಂತಾಮಣರಾವ್ ಪ್ರೌಢಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಶಾಸಕ ಅಭಯ ಪಾಟೀಲ, ಶಾಲೆಯ ಹಳೆ ವಿಧ್ಯಾರ್ಥಿಗಳ ನೇತ್ರತ್ವದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಈ ಶಾಲೆ ಯಲ್ಲಿ ಶತಮಾನೋತ್ಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶನಿವಾರದಂದು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಿತು. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಈಗ ಶಾಸಕ, ವಿದೇಶದಲ್ಲಿ ಉದ್ಯಮಿದಾರ ಸೇರಿದಂತೆ ವಿವಿಧ ಹುದ್ದೆಗಳಲ್ಲಿದ್ದಾರೆ. ಆದರೇ ಇಂದು ಶತಮಾನೋತ್ಸವದಂದು ಸಮವಸ್ತ್ರ ಧರಿಸಿ ಸೈಕಲ್ ತುಳಿಯುತ್ತ ಪಾರಿಚೀಲದೊಂದಿಗೆ ಶಾಲೆಗೆ ಆಗಮಿಸಿ ಬಾಲ್ಯದ ನೆನಪು ಮೆಲುಕು ಹಾಕಿದ್ದು ವಿಶೇಷವಾಗಿತ್ತು.
ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಕೇವಲ ಅಭಿವೃದ್ಧಿಗೆ ಮಾತ್ರ ಹೆಸರುವಾಸಿಯಾಗಿರದೇ, ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಈ ಮೊದಲೂ ಕೂಡ ಗುರುವಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಈಗ ಚಿಂತಾಮಣ್’ರಾವ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಅವರ ನೇತೃತ್ವದಲ್ಲಿ ವಿನೂತನವಾಗಿ ಆಚರಿಸಲಾಯಿತು. ಮೊದಲಿನಂತೆ ಶಾಲೆಯ ಸಮವಸ್ತ್ರ ತೊಟ್ಟು ಸೈಕಲ್ ತುಳಿಯುತ್ತ ಗೆಳೆಯರೊಂದಿಗೆ ಬೆರೆತು ಶಾಸಕ ಅಭಯ್ ಪಾಟೀಲ್ ಅವರು ಇಂದು ಶಾಲೆಗೆ ಹೊರಟರು. ನಾರ್ವೇಕರ ಗಲ್ಲಿಗೆ ತಲುಪಿ ಅಲ್ಲಿರುವ ರವಿ ಅಂಗಡಿಯಲ್ಲಿ ಹಳೆಯ ನಾಣ್ಯಗಳನ್ನು ನೀಡಿ ತಮ್ಮ ಗೆಳೆಯರಿಗೆ ಶಾಸಕ ಅಭಯ್ ಪಾಟೀಲ್ ಚಾಕಲೇಟ್, ನೀಲಮ್ ಸುಪಾರಿ, ಪೇಪರಮೆಂಟ್’ಗಳನ್ನು ಕೊಡಿಸಿದರು.
ಈ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು 1985 ರಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದೇವೆ. ಶಾಲೆಯ ವೇಳೆಯಲ್ಲಿ ರವಿ ಅಂಗಡಿ ಎಂದರೆ ಎಲ್ಲ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿತ್ತು. ಇಂದೂ ಕೂಡ ಇಲ್ಲಿ ಭೇಟಿಯನ್ನು ನೀಡಿ, ಹಳೆಯ ನಾಣ್ಯಗಳನ್ನೇ ನೀಡಿ ಪೇಪರಮೆಂಟ್, ನೀಲಮ್ ಸುಪಾರಿ, ಚಾಕಲೇಟ್ ಗಳನ್ನು ಖರೀದಿಸಿದ್ದೇವೆಂದು ಬಾಲ್ಯದ ನೆನಪುಗಳನ್ನು ತಾಜಾ ಮಾಡಿಕೊಂಡರು.
ಬಳಿಕ ಗೆಳೆಯರೊಂದಿಗೆ ಸೈಕಲ್ ಏರಿ ಸರಸ್ವತಿ ಶಾಲೆ ರಸ್ತೆ, ಖಡೇ ಬಝಾರ್, ಮೀರಾಪೂರಗಲ್ಲಿ ಮಾರ್ಗವಾಗಿ ಚಿಂತಾಮಣ್ ರಾವ್ ಶಾಲೆಗೆ ತಲುಪಿದರು. ಶಾಲೆಯ ಶತಮಾನೋತ್ಸವ ಸಂಭ್ರಮವನ್ನು ವರ್ಣಿಸಲಾರದಷ್ಟು ಸಂತಸವಾಗಿದೆ. 25 ವರ್ಷದ ಹಿಂದೆ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಬಳಿಕ ಇಂದು ಮತ್ತೆ ಶಾಲಾ ಸಮವಸ್ತ್ರ ಧರಿಸಿ, ಗೆಳೆಯರೊಂದಿಗೆ ಬೆರೆತು 2 ದಿನ ಮನೆಯನ್ನೇ ಮರೆತಂತಾಗಿದೆ ಎಂದು ಹಳೆಯ ವಿದ್ಯಾರ್ಥಿ ಶ್ಯಾಮ ಸುತಾರ್ ಹರ್ಷ ವ್ಯಕ್ತಪಡಿಸಿದರು.
ಇನ್ನು ಜರ್ಮನಿಯಿಂದ ಬಂದ ಚಂದ್ರಶೇಖರ್ ಹಿರೇಮಠ ಅವರು 1988ರಲ್ಲಿ ನಾವು ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದೇವೆ. ಈಗ ಶತಮಾನೋತ್ಸವದ ಹಿನ್ನೆಲೆ ಶಾಸಕ ಅಭಯ್ ಪಾಟೀಲರ ಈ ಪ್ರಯತ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಿದೆ. ಮರಳಿ ಬಾಲ್ಯ ಸಿಕ್ಕಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಾಲೆಯ ಪ್ರಾರ್ಥನೆಗೆ ಹಾಜರಾಗಿ ಜನಗಣಮನ ರಾಷ್ಟ್ರಗೀತೆ ಹಾಡಿ, ಬೆಲ್ ಆಗುತ್ತಿದ್ದಂತೆ ತಮ್ಮ ತಮ್ಮ ತರಗತಿಗಳಿಗೆ ತೆರಳಿದರು. ವರ್ಗ ಶಿಕ್ಷಕರು ಬರುವವರೆಗೂ ಮೌಜು ಮಸ್ತಿ ಮಾಡುತ್ತ ಕುಳಿತರು. ಶಿಕ್ಷಕರು ಬಂದೊದೊಡನೆ ನಮಸ್ತೇ ಟೀಚರ್ ಎಂದು ಮೇಲೆದ್ದು ನಮಸಿದರು. ವರ್ಗಶಿಕ್ಷಕರಾಗಿದ್ದ ನೀಲಗಂಗಾ ಚರಂತಿಮಠ ಅವರು ಹಾಜರಿ ತೆಗೆದುಕೊಂಡು ತರಗತಿಯನ್ನು ಆರಂಭಿಸಿದರು.
ಇಂತಹ ಅನುಭವ ಇಂತಹ ಬಾಲ್ಯದ ನೆನಪು ಸಾವಿರಾರು ಕೋಟಿ ಕೊಟ್ಟರೂ ಸಹ ಮರಳು ಬಾರದು ಎಂದು ಶಾಸಕ ಅಭಯ್ ಪಾಟೀಲ ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನಾದಿ ಕಾರ್ಯಕ್ರಮವನ್ನು ಯಶಸ್ವೀ ಗೋಳಿಸಿದರು.
