ರಾಮದುರ್ಗ-24: ಭಾಷೆ ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಪಡಿಸುವುದಕ್ಕೆ ಅತ್ಯಂತ ಅವಶ್ಯಕವಾಗಿರುವ ಒಂದು ಮಾಧ್ಯಮವಾಗಿದ್ದು, ಮಾತೃಭಾಷೆಯೊಂದಿಗೆ ಇತರ ಭಾಷೆಗಳನ್ನು ಗೌರವಿಸಬೇಕೆಂದು ಸಾಹಿತಿ, ಕನ್ನಡ ಉಪನ್ಯಾಸಕ ಡಾ. ರಾಜು ಕಂಬಾರ ಅಭಿಪ್ರಾಯಸಿದರು.
ಪಟ್ಟಣದ ಶ್ರೀಮತಿ. ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಾಷಾ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಜರುಗಿದ ರಾಷ್ಟ್ರೀಯ ಏಕತಾ ಸಪ್ತಾಹದ ಅಂಗವಾಗಿ ಭಾಷಾ ಸೌಹಾರ್ದತಾ ದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಕಂಬಾರರು, ಕನ್ನಡಿಗರು ಕನ್ನಡ ಭಾಷೆಯೊಂದಿಗೆ ಮರಾಠಿ, ತೆಲುಗು, ತಮಿಳು, ಮಲಿಯಾಳಿಯಂ, ಇಂಗ್ಲೀಷ್, ಸಂಸ್ಕೃತ ಮುಂತಾದ ಭಾಷೆಗಳೊಂದಿಗೆ ಪ್ರಾಚೀನ ಕಾಲದಿಂದಲೂ ಸೌಹಾರ್ದತೆಯನ್ನು ಹೊಂದಿದ್ದಾರೆ. ಭಾಷಾ ಸೌಹಾರ್ದತೆಯು ಮನುಷ್ಯನ ಆರ್ಥಿಕ, ಸಾಮಾಜಿಕ,ಸಾಂಸ್ಕೃತಿಕ ಸಂಬಂಧಗಳನ್ನು ಕಟ್ಟಿಕೊಡುವುದರ ಜೊತೆಗೆ ಏಕತೆಯ ಭಾವನೆಯನ್ನು ಮೂಡಿಸುತ್ತದೆ ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಆಂಗ್ಲ ಭಾಷಾ ಉಪನ್ಯಾಸಕಿ ಶೋಭಾ ಹಾಲೋಳ್ಳಿ ಮಾತನಾಡಿ, ಇಂದಿನ ದಿನಗಳಲ್ಲಿ ಭಾಷಾ ಸೌಹಾರ್ದತೆ ಅವಶ್ಯಕವಾಗಿದ್ದು,ಅನೇಕ ಭಾಷೆಗಳಲ್ಲಿ ಪರಿಣತಿ ಹೊಂದುವುದರಿಂದ ಸಾಕಷ್ಟು ಲಾಭವಿದೆ. ಆಂಗ್ಲ ಭಾಷೆಯು ಜಾಗತಿಕ ಭಾಷೆಯಾಗಿ ಪಸರಿಸಿದ್ದು,ಅವಕಾಶ ಮತ್ತು ಉನ್ನತಿಗಾಗಿ ಬಹುಭಾಷಿಕರು ಭಾಷಾ ಸೌಹಾರ್ದತೆಯಿಂದ ಹಲವಾರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದರು.
ಅಧ್ಯಕ್ಷತೆಯನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಮಹೇಶ ಪಾಟೀಲ ವಹಿಸಿ ಮಾತನಾಡಿ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರವಾಗಿದ್ದು, ಬಹು ಭಾಷೆ ಮತ್ತು ಸಂಸ್ಕೃತಿ ನಮ್ಮಲ್ಲಿವೆ.ಭಾಷೆ -ಭಾಷೆಗಳಲ್ಲಿ ದ್ವೇಷ ಭಾವನೆಗಳು ಮೂಡದೆ, ಐಕ್ಯತೆ ಮೂಡಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಐಕ್ಯೂಎಸಿ ಸಂಯೋಜಕ ಪ್ರೊ. ಸಂಜಯ ಹಾದಿಮನಿ ಭಾಷಾ ಸೌಹಾರ್ದತೆಯ ಕುರಿತು ಮಾತನಾಡಿದರು.
ಭಾಷಾ ಸೌಹಾರ್ದತಾ ದಿನದ ಅಂಗವಾಗಿ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗಾಗಿ ಬಹು ಭಾಷಾ ಕಾವ್ಯವಾಚನ ಜರುಗಿತು. ಪ್ರಾಧ್ಯಾಪಕರು ಮತ್ತು 20 ಹೆಚ್ಚು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕಾವ್ಯವಾಚನ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್. ದೊಡಮನಿ, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ಪ್ರೊ. ರಾಜಶ್ರೀ ಪಾಟೀಲ, ಪ್ರಾಧ್ಯಾಪಕರಾದ ಯಲ್ಲಪ್ಪ ಕುರಿ, ಕಾಳಪ್ಪ ಕಂಬಾರ, ಲಕ್ಹ್ಮೀ ಮಡ್ಲಿ ಸೇರಿದಂತೆ ಎಲ್ಲ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಡಾ. ಯಮನಪ್ಪ ಹೊಸಮನಿ ಸ್ವಾಗತಿಸಿದರು. ಡಾ. ಎಂ. ಆರ್. ದೊಡಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
