ಬೆಳಗಾವಿ-06:ಸವದತ್ತಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಸ್ಲಿಂ ಪ್ರಾಂಶುಪಾಲರ ವರ್ಗಾವಣೆ ಮಾಡಲು ಶಾಲೆಯ ನೀರಿನ ಟ್ಯಾಂಕರ್ ನಲ್ಲಿ ಮಕ್ಕಳಿಂದಲೇ ವಿಷ ಪ್ರಾಷಣ ಮಾಡಿದ ಶ್ರೀರಾಮ್ ಸೇನೆಯನ್ನು ರಾಜ್ಯದಲ್ಲಿ ಬಂದ್ ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಬೆಳಗಾವಿ ಮುಸ್ಲಿಂ ಸಮಾಜದ ಒಕ್ಕೂಟ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಹುಲಿಕಟ್ಟಿ ಶಾಲೆಯ ಪ್ರಾಂಶುಪಾಲ ಸುಲೈಮಾನ್ ಘೋರಿ ನಾಯ್ಕರನ್ನು ಸ್ಥಳಾಂತರ ಮಾಡಲು ಶ್ರೀರಾಮ ಸೇನೆಯ ತಾಲೂಕಾ ಅಧ್ಯಕ್ಷ ಸಾಗರ ಪಾಟೀಲ್, ನಾಗನಗೌಡ ಪಾಟೀಲ್, ಕೃಷ್ಣಾ ಮಾದರ ಮಕ್ಕಳ ಜೀವನದ ಜೊತೆಗೆ ಚೆಲ್ಲಾಟವಾಡಿದ್ದಾರೆ. ಈ ಮೂವರು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ರಾಜ್ಯದಲ್ಲಿ ಕೋಮು ಸೌಹಾರ್ದ ಹದಗೆಡಿಸುತ್ತಿರುವ ಶ್ರೀರಾಮ್ ಸೇನೆಯನ್ನು ನಿಷೇಧ ಮಾಡುವಂತೆ ಪ್ರತಿಭಟನಾಕಾರರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮ ಸೇನೆ ನಿಷೇಧ ಮಾಡುವುದಾಗಿ ಹೇಳಿದ್ದರು. ಈಗ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡಿರುವ ಶ್ರೀರಾಮ್ ಸೇನೆಯ ಸಂಘಟನೆ ನಿಷೇಧಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪಾಲಿಕೆ ವಿಪಕ್ಷ ನಾಯಕ ಸೋಹಿಲ್ ಸಂಗೊಳ್ಳಿ, ಪಾಲಿಕೆ ಸದಸ್ಯರಾದ ಶಾಹೀರ್ ಪಠಾಣ್, ಶಕೀಲ್ ಮುಲ್ಲಾ ಸೇರಿದಂತೆ ಇತರರು ಹಾಜರಿದ್ದರು.
