ಬೆಳಗಾವಿ-03 : ಮತಗಟ್ಟೆ ಅಧಿಕಾರಿಗಳು (ಬಿಎಲ್ಓ) ಈಗಾಗಲೇ ಮನೆ ಮನೆಗೆ ತೆರಳಿ ಗಣತಿ ನಮೂನೆ ನೀಡುತ್ತಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕನು ಸರಿಯಾದ ಮಾಹಿತಿ ಭರ್ತಿ ಮಾಡಿ ಅವಧಿಯೊಳಗೆ ಅದನ್ನು ಹಿಂತಿರುಗಿಸುವುದು ಕಡ್ಡಾಯವಾಗಿದೆ ಎಂದು ಪಾಲಿಕೆ ಆಯುಕ್ತರು ಹಾಗೂ ಚುನಾವಣಾ ಅಧಿಕಾರಿಗಳಾಗಿರುವ ಕಾರ್ತಿಕ್ ಎಂ. ಅವರು ತಿಳಿಸಿದ್ದಾರೆ.
ಶುಕ್ರವಾರ ಈ ಕುರಿತು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, ಚುನಾವಣಾ ಆಯೋಗದ ಆದೇಶ ಮತ್ತು ನಡಾವಳಿಗಳ ಪ್ರಕಾರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಮತಕ್ಷೇತ್ರಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆದಿದೆ
ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕನು ತಮಗೆ ಕೊಡಲಾಗಿರುವ ಗಣತಿ ನಮೂನೆಯನ್ನು ಸರಿಯಾದ ಮಾಹಿತಿ ಸಹಿತ ಭರ್ತಿ ಮಾಡಬೇಕು. ಈ ಕುರಿತು ಯಾವುದೇ ಗೊಂದಲಗಳು, ಸಂಶಯಗಳು ಇದ್ದರೆ, ಬಿಎಲ್ಓಗಳು, ಮೇಲ್ವಿಚಾರಕರು ಇಲ್ಲವೇ ಪಾಲಿಕೆಯ ಚುನಾವಣಾ ವಿಭಾಗದ ಸಹಾಯ ಪಡೆಯಬಹುದು. ಈ ಬಗ್ಗೆ ಯಾವುದೇ ಭಯ, ಆತಂಕ ಬೇಡ. ಮತದಾನದ ಹಕ್ಕನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಮುಂದುವರೆಯಲು ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಲೇಬೇಕು.
ನಿಗದಿತ ಅವಧಿಯಲ್ಲಿ (ಜು.29) ನಮೂನೆಯನ್ನು ಭರ್ತಿ ಮಾಡಿ ಬಿಎಲ್ಓಗಳಿಗೆ ಹಿಂತಿರುಗಿಸದಿದ್ದರೆ, ಅದಕ್ಕೆ ತಾವೇ ಹೊಣೆಯಾಗುತ್ತೀರಿ. ಅಲ್ಲದೆ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಹೊರಗುಳಿಯಬಹುದು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೊಂದಿಗೆ ನಾಗರಿಕರು ಸಹಕರಿಸಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಕರಿಸಬೇಕೆಂದರು.
ಮರಾಠಿ ಭಾಷೆಯಲ್ಲಿರುವ ಗಣತಿ
ನಮೂನೆಗಳನ್ನು ಕೊಡಬೇಕೆಂದು ವಿನಂತಿಸಿ ಕೆಲವರು ಮನವಿ ನೀಡಿದ್ದು, ಆದೇಶ ಕೋರಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ತಿಳಿಸಿದರು.
