ಬೆಳಗಾವಿ-30: ವೈಜ್ಞಾನಿಕವಾಗಿ ಎಲ್ಲಾ ಕಾರ್ಮಿಕರಿಗೂ ಕನಿಷ್ಠ ವೇತನ ನಿಗದಿಪಡಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್( ಸಿಐಟಿಯು) ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ರವಾನಿಸಲಾಯಿತು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿ ವರಗೆ ಬೃಹತ್ ಮೆರವಣಿಗೆ ಮೂಲಕ ತೆರಳಿದ ನೂರಾರು ಮಹಿಳೆಯರು, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಕನಿಷ್ಠ 36, ಸಾವಿರ ರೂ. ವೇತನ ನಿಗದಿಪಡಿಸಬೇಕು. ಕಾರ್ಮಿಕರಿಗೆ ಮಾರಕವಾದ ಕೇಂದ್ರ ಸರಕಾರದ ನಾಲ್ಕು ಸಂಹಿತೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಬಾರದು. ಗುತ್ತಿಗೆ ಪದ್ಧತಿ ರದ್ದುಪಡಿಸಿ, ಕಾರ್ಮಿಕರನ್ನು ಕಾಯಂಮಾತಿಗೊಳಿಸಬೇಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ, ಸ್ವಚ್ಛತಾ ಗಾರರು ಸೇರಿದಂತೆ ವಿವಿಧ ಸಿಬ್ಬಂದಿಗಳನ್ನು ಸರಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನ ಪರಿಗಣಿಸಿ, ಮುಂಬಡ್ತಿ ಕೊಡಬೇಕು. ಸೇವೆಯಲ್ಲಿ ನಿವೃತ್ತಿ ಅಥವಾ ಮರಣ ಹೊಂದಿದವರಿಗೆ 6 ಲಕ್ಷ ರೂಪಾಯಿಗಳನ್ನು ಇಡಗಂಟು ಕೊಡಬೇಕು. ವಿವಿಧ ಇಲಾಖೆಗಳಲ್ಲಿ ಬಾಕಿ ಇರುವ ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ ಪದ್ಯಗಳನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಲ್ಲಾ ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ಕಾಯ್ದೆ ಯ ವ್ಯಾಪ್ತಿಗೆ ಒಳಪಡಿಸಿ, ಇಎಸ್ಐ, ಪಿಎಫ್ ಕೊಡಬೇಕು. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಚುನಾವಣೆ ಕೆಲಸಗಳಿಂದ ಅಂಗನವಾಡಿ ನೌಕರರನ್ನು ಬಿಡುಗಡೆ ಮಾಡಬೇಕು. ಕನಿಷ್ಠ ವೇತನ ನಿಗದಿ ಮಾಡಬೇಕು. ಬಿಸಿ ಅಡುಗೆ ನೌಕರರನ್ನು ಡಿ ದರ್ಜೆಯ ನೌಕರನ್ನಾಗಿ ಪರಿಗಣಿಸಬೇಕು. ಬಿಸಿಯೂಟ ನೌಕರರಿಗೆ 10 ಸಾವಿರ ನಿವೃತ್ತಿ ವೇತನ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಂದಾ ನೇವಗಿ, ಜಿ. ಎಮ್. ಜೇನೆಖಾನ್, ದೀಲಿಪ್ ವಾರ್ಕೆ,ದೊಡ್ಡವ್ವ ಪೂಜಾರಿ, ಚನ್ನಮ್ಮ ಗಡ್ಕರಿ, ಗೋದಾವರಿ ರಾಜಾಪುರೆ, ಸರಸ್ವತಿ ಮಾಳಶೆಟ್ಟಿ, ಮಂಜುಳಾ ಮಾನೆ, ಸುಮಿತ್ರಾ ಕಮತಗಿ, ಪಾರ್ವತಿ ಕೌಜಲಗಿ, ಸುನಿತಾ ಕರಜಿಗಿ, ಭಾರತಿ ಜೋಗನ್ನವರ್ ಸೇರಿದಂತೆ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
