ಬೆಳಗಾವಿ-09: ಬೆಳಗಾವಿ ಮತ್ತು ಕನ್ನಡದ ಹಿತಾಸಕ್ತಿಗಾಗಿ ಯಾವುದೇ ರೀತಿಯ ಹೋರಾಟಕ್ಕೂ, ಅಗತ್ಯವಿದ್ದರೆ ಪ್ರಾಣತ್ಯಾಗಕ್ಕೂ ತಾವು ಸಿದ್ಧರಾಗಿರುವುದಾಗಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಘೋಷಿಸಿದರು.
ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಗಡಿ, ನೆಲ ಮತ್ತು ಜಲದ ವಿಚಾರದಲ್ಲಿ ತಮ್ಮ ನಿಲುವನ್ನು ದೃಢವಾಗಿ ವ್ಯಕ್ತಪಡಿಸಿದರು.
ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಲು ಲಿಂಗೈಕ್ಯ ಶಿವಬಸವ ಮಹಾಸ್ವಾಮಿಗಳು ನಡೆಸಿದ ಹೋರಾಟವನ್ನು ಸ್ಮರಿಸಿದ ಅವರು, “ಶಿವಬಸವ ಶ್ರೀಗಳು ಬೆಳಗಾವಿಗೆ ಬಾರದಿದ್ದರೆ ನಗರ ಕನ್ನಡ ನಾಡಿನಲ್ಲಿಯೇ ಉಳಿಯುತ್ತಿರಲಿಲ್ಲ. ಅವರು ಮರಾಠಿ ಗುಂಡಾಗಳಿಂದ ಅನುಭವಿಸಿದ ನೋವು ಮರೆಯಲಾಗದು. ಇಷ್ಟು ವರ್ಷಗಳ ಬಳಿಕವೂ ಮತ್ತೆ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ” ಎಂದು ವಿಷಾದಿಸಿದರು.
ಕನ್ನಡದ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ ಶ್ರೀಮಠ ಹಲವು ದಶಕಗಳಿಂದ ಹೋರಾಟದ ಮುಂಚೂಣಿಯಲ್ಲಿ ನಿಂತಿದೆ ಎಂದು ತಿಳಿಸಿದ ಅವರು, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸೂರ್ಯ-ಚಂದ್ರರು ಇರುವವರೆಗೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಬೆಳಗಾವಿ ನಮ್ಮದು ಎಂದು ಸಾಬೀತುಪಡಿಸಬೇಕಾದ ಪರಿಸ್ಥಿತಿ ಎದುರಾಗಿರುವುದು ಬೇಸರದ ಸಂಗತಿ” ಎಂದರು.
ಗಡಿ ವಿಚಾರದಲ್ಲಿ ಯಾರ ಸ್ವಾರ್ಥವೂ ಇಲ್ಲ. ಭವಿಷ್ಯದಲ್ಲಿ ಉಂಟಾಗಬಹುದಾದ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಈ ಹೋರಾಟ ನಡೆಯುತ್ತಿದೆ ಎಂದು ಹೇಳಿದ ಅವರು, ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರೇ ಅಧಿಕಾರದಲ್ಲಿದ್ದರೂ ಬೆಳಗಾವಿ ಕರ್ನಾಟಕದ್ದೆಂದು ನಿರ್ಣಯ ಅಂಗೀಕರಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದ ಅವರು, ಈ ಕುರಿತು ಮಹಾಪೌರ ಹಾಗೂ ಉಪ ಮಹಾಪೌರರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಕನ್ನಡ ಪರ ಹೋರಾಟಗಳು ಹಾಗೂ ಮಹಾನಗರ ಪಾಲಿಕೆಯಲ್ಲಿ ಈ ಸಂಬಂಧ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರಿಸಿ, ಪಾಲಿಕೆಯ ಪ್ರಸ್ತುತ ನಿಲುವನ್ನು ತೀವ್ರವಾಗಿ ಖಂಡಿಸಿದರು. “ಕನ್ನಡದ ಪರವಾಗಿ ಗೊತ್ತುವಳಿ ಅಂಗೀಕಾರವಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಅವರು ಖಡಾಖಂಡಿತವಾಗಿ ಹೇಳಿದರು.
ಸಭೆಯಲ್ಲಿ ಕನ್ನಡ ಹೋರಾಟಗಾರರಾದ ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ, ಬಲರಾಮ್ ಮಾಸೇನಟ್ಟಿ, ವಾಜೀದ್ ಹಿರೇಕೋಡಿ, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ, ಸಾಹಿತಿ ನೀಲಗಂಗಾ ಚರಂತಿಮಠ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
